ADVERTISEMENT

ಸಿದ್ಧ ಉಡುಪು: ಇಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2011, 15:30 IST
Last Updated 13 ಮಾರ್ಚ್ 2011, 15:30 IST

ನವದೆಹಲಿ (ಪಿಟಿಐ): ಕೇಂದ್ರ ಬಜೆಟ್‌ನಲ್ಲಿ    ಸಿದ್ಧ ಉಡುಪುಗಳ ಮೇಲೆ ಶೇ 10ರಷ್ಟು ಅಬಕಾರಿ ತೆರಿಗೆ ವಿಧಿಸಿರುವುದನ್ನು ವಿರೋಧಿಸಿ, ಸೋಮವಾರ ಮತ್ತು ಮಂಗಳವಾರ ದೇಶದಾದ್ಯಂತ ಸುಮಾರು 2ಲಕ್ಷ ಸಿದ್ಧ ಉಡುಪು ತಯಾರಿಕಾ ಸಂಸ್ಥೆಗಳು ಬೃಹತ್ ಪ್ರತಿಭಟನೆ ನಡೆಸಲಿವೆ.

ಪ್ರತಿಭಟನೆಯ ಅಂಗವಾಗಿ ಬೆಂಗಳೂರು, ನವದೆಹಲಿ, ತ್ರಿಪುರ, ಕೋಲ್ಕತ್ತ, ಅಹಮದಾಬಾದ್, ಹೈದರಾಬಾದ್ ನಗರಗಳ ಸಾವಿರಾರು  ಸಿದ್ಧ ಉಡುಪುಗಳ ತಯಾರಕರು, ಎರಡು ದಿನಗಳ ಕಾಲ ತಮ್ಮ ವಹಿವಾಟನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಇದರಿಂದ ದಿನಗೂಲಿ  ಕಾರ್ಮಿಕರಿಗೆ ಆಗುವ ನಷ್ಟವನ್ನು ತಮ್ಮ ಕೈಯಿಂದಲೇ ಭರಿಸುವುದಾಗಿ ಹೇಳಿದ್ದಾರೆ.

ಬಜೆಟ್‌ನಲ್ಲಿ ಬ್ರಾಂಡೆಡ್ ಸಿದ್ಧ ಉಡುಪುಗಳ ಮೇಲಿ ವಿಧಿಸಿರುವ ಶೇ 10 ರಷ್ಟು ಅಬಕಾರಿ ತೆರಿಗೆಯನ್ನು ಹಿಂದಕ್ಕೆ ಪಡೆಯುವಂತೆ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಗೆ ಒತ್ತಾಯಿಸಲಾಗುವುದು. ಈಗಾಗಲೇ ಎರಡು ಬಾರಿ ಈ ಕುರಿತು ಚರ್ಚೆ ನಡೆಸಿದ್ದರೂ, ಸಚಿವರಿಂದ ಯಾವುದೇ ಧನಾತ್ಮಕ ಪ್ರತಿಕ್ರಿಯೆಗಳು ಲಭಿಸಿಲ್ಲ ಎಂದು  ಭಾರತೀಯ ಸಿದ್ಧ ಉಡುಪುಗಳ ತಯಾರಕರ ಸಂಘದ ಅಧ್ಯಕ್ಷ ಪ್ರಕಾಶ್ ಗ್ರೋವರ್ ತಿಳಿಸಿದ್ದಾರೆ.

ಪ್ರತಿಭಟನೆಯ ಅಂಗವಾಗಿ ದೆಹಲಿಯ ರಾಮ ಲೀಲಾ ಮೈದಾನದಿಂದ ಜಂತರ್ ಮಂತರ್‌ವರೆಗೆ ಶಾಂತಿಯುತ ಮೆರವಣಿಗೆ ನಡೆಸಲಾಗುವುದು. ದೇಶವ್ಯಾಪಿ ಬಂದ್‌ನಿಂದ ದಿನವೊಂದಕ್ಕೆ ್ಙ 500ಕೋಟಿ ನಷ್ಟ ಅಂದಾಜಿಸಲಾಗಿದೆ. ಸಾವಿರಾರು ದಿನಗೂಲಿ ನೌಕರರ ವೇತನಕ್ಕೆ ಇದರಿಂದ ಧಕ್ಕೆಯಾಗಲಿದ್ದು, ಇಡೀ ಪೂರೈಕೆ ಸರಪಣಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು  ಹೇಳಿದ್ದಾರೆ.  ಮಾರ್ಚ್ 4ರಂದೂ ಸಿದ್ಧ ಉಡುಪು ತಯಾರಕರು ಪ್ರತಿಭಟನೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.