ADVERTISEMENT

ಸೇವೆಗಳ ಹಣದುಬ್ಬರ ಸೂಚ್ಯಂಕ

ಪಿಟಿಐ
Published 8 ಮೇ 2018, 19:30 IST
Last Updated 8 ಮೇ 2018, 19:30 IST

ನವದೆಹಲಿ: ಹತ್ತು ಸೇವೆಗಳ ಕುರಿತು ಉತ್ಪಾದಕರ ಬೆಲೆ ಸೂಚ್ಯಂಕವನ್ನು (ಪಿಪಿಐ) ಪ್ರಾಯೋಗಿಕವಾಗಿ ಪ್ರಕಟಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ದೂರಸಂಪರ್ಕ, ರೈಲ್ವೆ, ಬಂದರು, ಅಂಚೆ, ವಿಮೆ, ಬ್ಯಾಂಕಿಂಗ್‌, ಸಾರಿಗೆ, ವಿಮಾನ ಪ್ರಯಾಣ ಒಳಗೊಂಡಂತೆ ಹತ್ತು ಸೇವೆಗಳಲ್ಲಿನ ಹಣದುಬ್ಬರದ ಮೇಲೆ ನಿಗಾ ಇರಿಸಲು ಇದರಿಂದ ಸಾಧ್ಯವಾಗಲಿದೆ. ಈ ಸೇವೆಗಳ ‘ಪಿಪಿಐ’ಯನ್ನು ಜೂನ್‌ ತಿಂಗಳಲ್ಲಿ
ಪ್ರಕಟಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸದ್ಯಕ್ಕೆ, ಬೆಲೆಗಳ ಚಲನವಲನ ದಾಖಲಿಸಲು ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಮತ್ತು ಗ್ರಾಹಕರ ಬೆಲೆ ಸೂಚ್ಯಂಕಗಳನ್ನು (ಸಿಪಿಐ)  ಬಳಸಲಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತವನ್ನು ‘ಡಬ್ಲ್ಯುಪಿಐ’ ಮತ್ತು ಸರಕುಗಳ ಚಿಲ್ಲರೆ ಮಾರಾಟ ಹಂತದಲ್ಲಿನ ಬೆಲೆ ವ್ಯತ್ಯಾಸವನ್ನು ಮತ್ತು ಕೆಲ ಸೇವೆಗಳನ್ನು ‘ಸಿಪಿಐ’ ಪ್ರತಿನಿಧಿಸುತ್ತದೆ.

ADVERTISEMENT

ಈ ಎರಡೂ ಸೂಚ್ಯಂಕಗಳನ್ನು ಲೆಕ್ಕ ಹಾಕುವಾಗ ತೆರಿಗೆ ಹೊರೆಗಳನ್ನೂ ಪರಿಗಣಿಸಲಾಗಿರುತ್ತದೆ. ತೆರಿಗೆ ಹೊರತಾದ ಉತ್ಪಾದನಾ ವೆಚ್ಚವನ್ನು ‘ಪಿಪಿಐ’ ಲೆಕ್ಕಕ್ಕೆ ತೆಗೆದುಕೊಳ್ಳಲಿದೆ.

ದೇಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮತ್ತು ರಫ್ತು ಮಾಡಲು ತಯಾರಕರು ತಮ್ಮ ಸರಕಿಗೆ ಪಡೆಯುವ ಬೆಲೆಗಳಲ್ಲಿನ ಸರಾಸರಿ ವ್ಯತ್ಯಾಸವನ್ನು ‘ಪಿಪಿಐ’ ಅಳೆಯಲಿದೆ.

ರೈಲ್ವೆ ವಿಷಯದಲ್ಲಿ ಸರಕುಗಳ ಸಾಗಾಣಿಕೆ ವೆಚ್ಚ ಮತ್ತು ಪ್ರಯಾಣಿಕರ ದರಗಳಲ್ಲಿನ ಏರಿಳಿತವನ್ನು ಪರಿಗಣಿಸಲಾಗುವುದು. ನೇರ ತೆರಿಗೆ ಮತ್ತು ಸೇವಾ ಶುಲ್ಕಗಳನ್ನು ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಅನ್ವಯಿಸಲಾಗುವುದು.

ಸೇವಾ ವಲಯವು ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಶೇ 60ರಷ್ಟು ಕೊಡುಗೆ ನೀಡುತ್ತಿರುವುದರಿಂದ ಸೇವೆಗಳಿಗೆ ಸಂಬಂಧಿಸಿದ ‘ಪಿಪಿಐ’ಗೆ ಹೆಚ್ಚಿನ ಮಹತ್ವ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.