ನವದೆಹಲಿ (ಪಿಟಿಐ): ಕೃಷಿ ಸಚಿವ ಶರದ್ ಪವಾರ್ ಅವರ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ, ಹತ್ತಿ ರಫ್ತು ನಿಷೇಧವನ್ನು ಜವಳಿ ಸಚಿವಾಲಯವು ಮಂಗಳವಾರ ಸಚಿವರ ಸಮಿತಿಯ ಪರಾಮರ್ಶೆಗೆ ಒಪ್ಪಿಸಿದೆ.
`ಇಂತಹ ಮಹತ್ವದ ನಿರ್ಧಾರ ಕೈಗೊಳ್ಳುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ~ ಎಂದು ಪವಾರ್, ಪ್ರಧಾನಿ ಮನಮೋಹನ್ ಅವರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ, ಮಂಗಳವಾರ ನಡೆದ ದಿಢೀರ್ ಬೆಳವಣಿಗೆಯಲ್ಲಿ, ರಫ್ತು ನಿಷೇಧ ನಿರ್ಧಾರವನ್ನು ಸಚಿವರ ಸಮಿತಿಯ ಪರಾಮರ್ಶೆಗೆ ಒಪ್ಪಿಸಲಾಗುತ್ತಿದೆ ಎಂದು ಜವಳಿ ಕಾರ್ಯದರ್ಶಿ ಕಿರಣ್ ಧಿಂಗ್ರಾ ತಿಳಿಸಿದರು.
ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದಲ್ಲಿನ ಸಮಿತಿಯು ಇದೇ 9ರಂದು ಸಭೆ ಸೇರಿ ಈ ವಿಷಯ ಚರ್ಚಿಸಲಿದೆ. ಇಂತಹ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ, ಬೆಲೆಗಳಿಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿಯಲ್ಲಿ ಅಥವಾ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಮಿತಿ ಸಭೆಯಲ್ಲಿ ಚರ್ಚಿಸುವುದು ಸೂಕ್ತ. ಹತ್ತಿ ವಿಷಯದಲ್ಲಿ ಹೀಗೆ ಮಾಡದಿರುವ ಹಿನ್ನೆಲೆಯಲ್ಲಿ ನಾನು ಪ್ರಧಾನಿಗೆ ದೂರು ದಾಖಲಿಸಿರುವೆ ಎಂದು ಇದಕ್ಕೂ ಮುನ್ನ ಪವಾರ್ ಅಭಿಪ್ರಾಯಪಟ್ಟಿದ್ದರು. ಕೃಷಿ ಕಾರ್ಯದರ್ಶಿಯೂ ಸದಸ್ಯರಾಗಿರುವ `ಕಾರ್ಯದರ್ಶಿಗಳ ಸಮಿತಿ~ಯು ಹತ್ತಿ ರಫ್ತು ನಿಷೇಧ ನಿರ್ಧಾರ ಕೈಗೊಂಡಿರುವುದನ್ನು ಕಿರಣ್ ಧಿಂಗ್ರಾ ಸಮರ್ಥಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.