ADVERTISEMENT

‘ಡಬ್ಬಿ’ ಮೆಣಸಿನಕಾಯಿ ದಾಖಲೆ!

ವಿಜಯ್ ಹೂಗಾರ
Published 24 ಡಿಸೆಂಬರ್ 2013, 19:30 IST
Last Updated 24 ಡಿಸೆಂಬರ್ 2013, 19:30 IST

ಅಂತರರಾಷ್ಟ್ರೀಯ ಮಟ್ಟದಲ್ಲಿ ಆಹಾರ ಸಾಮಗ್ರಿಗಳ ವಿಭಾಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ ‘ಬ್ಯಾಡಗಿ ಮೆಣಸಿನಕಾಯಿ’. ಈಗ ‘ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ’ಯಲ್ಲಿ ಡಬ್ಬಿ ತಳಿಯ ಕೆಂಪು ಒಣಮೆಣಸಿನಕಾಯಿ ಬೆಲೆ ಏಕಾಏಕಿ ಗಗನಕ್ಕೇರಿದೆ.
ಕ್ವಿಂಟಲ್‌ವೊಂದಕ್ಕೆ ರೂ.22 ಸಾವಿರದ ಗಡಿ ದಾಟುವ ಮೂಲಕ ಬ್ಯಾಡಗಿ ಮಾರುಕಟ್ಟೆಯ ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದೆ.

ನಾಲ್ಕೈದು ವರ್ಷಗಳ ಹಿಂದೆ ಒಂದು ತೊಲ ಬಂಗಾರಕ್ಕೆ 24 ಸಾವಿರ ರೂಪಾಯಿ ಧಾರಣೆ ಇದ್ದಾಗ, ಬ್ಯಾಡಗಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಮೆಣಸಿನಕಾಯಿಗೂ 20 ಸಾವಿರ ರೂಪಾಯಿ ಬೆಲೆ ಬಂದಿತ್ತು. ಆಗಲೇ ವ್ಯಾಪಾರಸ್ಥರು ಹಾಗೂ ರೈತರು ಬಾಯಿ ಮೇಲೆ ಕೈ ಇಟ್ಟುಕೊಂಡು ಅಬ್ಬಾ! ಎಂದು ಉದ್ಘರಿಸಿದ್ದರು. ಕಳೆದ ವರ್ಷ 18 ಸಾವಿರದಿಂದ 19 ಸಾವಿರ ರೂಪಾಯಿಗಳಷ್ಟು ಬೆಲೆ ಇತ್ತು.

ಪ್ರಸಕ್ತ ವರ್ಷದ ಹಂಗಾಮು ಆರಂಭವಾಗಿ ಕೇವಲ ನಾಲ್ಕು ವಾರಗಳಾಗಿವೆ. ಮೂರು ವಾರ ಮಾರು­ಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಧಾರಣೆ 6 ಸಾವಿರದಿಂದ 14 ಸಾವಿರ ರೂಪಾಯಿವರೆಗೂ ತಲುಪಿ ಬೆಲೆ ಸ್ಥಿರವಾಗಿಯೇ ಮುಂದುವರಿದಿತ್ತು. ಆದರೆ, ನಾಲ್ಕನೇ ವಾರದ ಮಾರಕಟ್ಟೆಯಲ್ಲಿ ಏಕಾಏಕಿ ಬೇಡಿಕೆ ಕುದುರಿದ್ದು, ಒಣ ಮೆಣಸಿಕಾಯಿ ಧಾರಣೆ ಪ್ರತಿ ಕ್ವಿಂಟಲ್‌ಗೆ ಒಮ್ಮೆಲೇ 8 ಸಾವಿರ ರೂಪಾಯಿಗಳಷ್ಟು ಹೆಚ್ಚಿದೆ.  ಆ ಮೂಲಕ ಕ್ವಿಂಟಲ್‌ ಬೆಲೆ 22 ಸಾವಿರ ರೂಪಾಯಿಗಳ ಗರಿಷ್ಠ ಮಟ್ಟಕ್ಕೇರಿದೆ. ಮಾರುಕಟ್ಟೆಯ ಹಿಂದಿನ ಎಲ್ಲ ದಾಖಲೆಗಳನ್ನೂ ಅಳಿಸಿ ಹಾಕಿದೆ.

ಡಬ್ಬಿ ತಳಿಗೆ ಬೇಡಿಕೆ
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದೇಶಿಯ ಕಡ್ಡಿ, ಡಬ್ಬಿ, ಗುಂಟೂರು, ಹೈಬ್ರಿಡ್‌ನ ತಳಿಗಳಾದ ನಾಮದಾರಿ, ಇಂಡೋ, ಡುಪ್ಲಿಕೇಟ್‌ ಬ್ಯಾಡಗಿ, ರೋಶನಿ, ರಾಯಲಿಸ್‌ ಸೇರಿದಂತೆ ಹತ್ತಾರು ತಳಿ ಮೆಣಸಿನಕಾಯಿ ಮಾರುಕಟ್ಟೆಗೆ ಬರುತ್ತವೆ. ಇವುಗಳಲ್ಲಿ ಕಡ್ಡಿ ಮತ್ತು ಡಬ್ಬಿ ಮೆಣಸಿನಕಾಯಿ ತಳಿಗೆ ದೇಶ, ವಿದೇಶದ ಮಾರುಕಟ್ಟೆಗಳಲ್ಲಿ ಅತ್ಯಧಿಕ ಬೇಡಿಕೆ ಇದೆ. ಅದರಲ್ಲೂ ಡಬ್ಬಿ ತಳಿಗೆ ಎಲ್ಲೆಡೆ ಎಲ್ಲಿಲ್ಲದ ಬೇಡಿಕೆ. ಹೀಗಾಗಿ ಎಲ್ಲ ತಳಿಗಳಿಗಿಂತ ಈ ತಳಿ ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಾ ಬರುತ್ತಿದೆ.

ವಿಶಿಷ್ಟ ಗುಣಲಕ್ಷಣ
ಮೆಣಸಿನಕಾಯಿಯ ಬಹುತೇಕ ತಳಿಗಳಲ್ಲಿ ಡಬ್ಬಿ ಮೆಣಸಿನಕಾಯಿ ತಳಿಗೆ ವಿಶಿಷ್ಟವಾದ ಗುಣಲಕ್ಷಣಗಳಿವೆ. ಇದರ ದೇಹ ರಚನೆ ಸ್ವಲ್ಪ ದಪ್ಪವಾಗಿದ್ದರಿಂದ ಇದಕ್ಕೆ ಡಬ್ಬಿ ಎಂದು ಕರೆಯಲಾಗುತ್ತದೆ. ಇದು ನೋಡಲು ಕಡು ಕೆಂಪು ಇದ್ದರೂ ಖಾರ ಕಡಿಮೆ ಇರುತ್ತದೆ (ಜಗತ್ತಿನಲ್ಲಿಯೇ ಇಷ್ಟೊಂದು ಕಡು ಕೆಂಪು ಬಣ್ಣ ಇರುವ ಮೆಣಸಿನಕಾಯಿ ಮತ್ತೊಂದಿಲ್ಲ. ಉಳಿದ ಮೆಣಸಿನಕಾಯಿಗಳಲ್ಲಿ ಇರುವ ಖಾರದ ಘಾಟು ಇದರಲ್ಲಿ ಇರುವುದಿಲ್ಲ).

ಅದೇ ಕಾರಣಕ್ಕಾಗಿಯೇ ಮುಂಬೈನ ಪಾರ್ಸಿ ಹಾಗೂ ಗುಜರಾತ್‌ನ ಮಾರವಾಡಿ ಸಮುದಾಯದ ಜನ ಹೆಚ್ಚಾಗಿ ಅಡುಗೆಗೆ ಈ ಮೆಣಸಿನಕಾಯಿಯನ್ನೇ ಬಳಸುತ್ತಾರೆ. ಗರಂ ಮಸಾಲೆ, ಮೆಣಸಿನ ಪುಡಿ ಸಿದ್ಧಪಡಿಸಿ ಬ್ರಾಂಡ್‌ ಹೆಸರಿನಲ್ಲಿ  ಮಾರುಕಟ್ಟೆಗೆ ಬಿಡುವ  ಪ್ರಮುಖ ಆಹಾರ ಸಂಸ್ಕರಣಾ ಕ್ಷೇತ್ರದ ಕಂಪೆನಿಗಳೂ ಕೂಡಾ ಇದೇ ಡಬ್ಬಿ ಮೆಣಸಿಕಾಯಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತವೆ.

ಬೆಳೆ ಪ್ರದೇಶ ಇಳಿಮುಖ
ಗದಗ ಜಿಲ್ಲೆ ನರಗುಂದ, ಗದಗ, ಶಿರಹಟ್ಟಿ. ಮುಂಡರಗಿ, ಹುಲಕೋಟಿ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕುಂದಗೋಳ, ನವಲಗುಂದ, ಅಣ್ಣಿಗೇರಿ ಸೇರಿದಂತೆ ಅನೇಕ ಕಡೆಗಳಲ್ಲಿ ಡಬ್ಬಿ ಹಾಗೂ ಕಡ್ಡಿ ತಳಿ ಮೆಣಸಿನಕಾಯಿ ಬೆಳೆಯಲಾಗುತ್ತದೆ. ಒಟ್ಟು ಕೃಷಿ ಪ್ರದೇಶದ ಶೇ 30ರಷ್ಟು ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯುತ್ತಿದ್ದರೂ, ಕಳೆದ ಐದಾರು ವರ್ಷಗಳಲ್ಲಿ ಈ ಬೆಳೆ ಪ್ರದೇಶದ ವಿಸ್ತೀರ್ಣ
ಶೇ 50 ರಷ್ಟು ಕುಗ್ಗಿದೆ.

ಖರ್ಚು ಹೆಚ್ಚು; ಇಳುವರಿ ಕಡಿಮೆ
ಸರಿಯಾದ ಪ್ರಮಾಣದಲ್ಲಿ ಮಳೆ ಬಾರದಿರುವುದು, ಬೆಳೆಗೆ ಕಾಣಿಸಿಕೊಳ್ಳುವ ಮುರುಟು ರೋಗ, ಮಿಡತೆ ಕಾಟ ಮೊದಲಾದ ಸಮಸ್ಯೆಗಳು ಈ ಬಾರಿ ಮೆಣಸಿನಕಾಯಿ ಇಳುವರಿ ಕಡಿಮೆ ಆಗುವಂತೆ ಮಾಡಿವೆ.

ಆವಕವೂ ಕಡಿಮೆ
‘ಹಂಗಾಮಿನಲ್ಲಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಪ್ರತಿ ವಾರ  ಸರಾಸರಿ 20 ಸಾವಿರದಿಂದ 25 ಸಾವಿರ ಚೀಲಗಳಷ್ಟು ಮೆಣಸಿನಕಾಯಿ ಆವಕ ಆದರೆ, ಅದರಲ್ಲಿ ಡಬ್ಬಿ ತಳಿ ಮೆಣಸಿನಕಾಯಿ ಕನಿಷ್ಠ 200ರಿಂದ ಗರಿಷ್ಠ 500 ಚೀಲಗಳಷ್ಟಿರುತ್ತದೆ. ಉತ್ಪಾದನೆ ಕಡಿಮೆ ಇದ್ದು, ಬೇಡಿಕೆ ಹೆಚ್ಚಾದ್ದಾಗ ಸಹಜವಾಗಿ ಅದರ ಬೆಲೆ ಹೆಚ್ಚುತ್ತದೆ. ಅದೇ ರೀತಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಡಬ್ಬಿ ಮೆಣಸಿನಕಾಯಿ ಆವಕ ಕಡಿಮೆಯಾಗುತ್ತಿದೆ, ಇನ್ನೊಂದೆಡೆ ಬೇಡಿಕೆ ಹೆಚ್ಚಿದೆ. ಹಾಗಾಗಿಯೇ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲೇ ಸಾಗಿದೆ’ ಎನ್ನುತ್ತಾರೆ ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರಸ್ಥರು.

ಖರೀದಿದಾರರಿಗೆ ಕಷ್ಟ
ಆದರೆ, ಡಬ್ಬಿ ಮೆಣಸಿನಕಾಯಿ ಬೆಲೆ 22 ಸಾವಿರ ರೂಪಾಯಿಯ ಗಡಿ ದಾಟಿರುವುದು ಖರೀದಿದಾರರು ಮತ್ತು ವರ್ತಕರ ಮಟ್ಟಿಗೆ ಕಳವಳದ ವಿಷಯವೇ ಆಗಿದೆ. ಆದರೆ, ಮುಂದಿನ ಒಂದೆರಡು ವಾರಗಳಲ್ಲಿ ಬೆಲೆ ಇಳಿಮುಖವಾಗುವ ಸಾಧ್ಯತೆಯಿದೆ. ಅಲ್ಲದೇ ಕಳೆದ ವಾರ ಹೆಚ್ಚಿನ ಬೆಲೆಗೆ ಖರೀದಿ ಮಾಡಿರುವುದು ಬೀಜಕ್ಕಾಗಿಯೇ ಹೊರತೂ, ಸಾಮಾನ್ಯವಾದ ದಿನ ಬಳಕೆಗಾಗಿ ಅಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಆ ಮಟ್ಟಿಗೆ ದರ ಹೆಚ್ಚಳವಾಗುವ ಸಾಧ್ಯತೆ ಕಡಿಮೆ’ ಎನ್ನುತ್ತಾರೆ ವ್ಯಾಪಾರಸ್ಥ ಮಂಜುನಾಥ ಪೂಜಾರ.

ತಳಿ ಅಭಿವೃದ್ಧಿ ಅಗತ್ಯ
ಜಗತ್ತಿನಲ್ಲಿಯೇ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಬಗ್ಗೆ ರೈತರ ಹಾಗೂ ಸರ್ಕಾರದ ನಿರ್ಲಕ್ಷ್ಯ ಇದೇ ರೀತಿ ಮುಂದುವರೆದರೆ, ಮುಂದಿನ ನಾಲ್ಕಾರು ವರ್ಷಗಳಲ್ಲಿ ಡಬ್ಬಿ ಮೆಣಸಿನಕಾಯಿಯ ತಳಿಯೇ ಸಂಪೂರ್ಣ ನಶಿಸಿ ಹೋದರೂ ಆಶ್ಚರ್ಯಪಡಬೇಕಿಲ್ಲ. ಈ ತಳಿ ಉಳಿಸಿಕೊಳ್ಳಲು ಕೇವಲ ರೈತರು, ವ್ಯಾಪಾರಸ್ಥರು ಪ್ರಯತ್ನ ಮಾಡಿದರೆ ಸಾಲದು, ಸರ್ಕಾರ ಕೂಡಾ ಕೈಜೋಡಿಸಬೇಕು ಎನ್ನುತ್ತಾರೆ ಬ್ಯಾಡಗಿ ಮಾರುಕಟ್ಟೆಯ ಮೆಣಸಿನಕಾಯಿ ವ್ಯಾಪಾರಸ್ಥ ಜಗದೀಶಗೌಡ ಪಾಟೀಲ.

ಬ್ಯಾಡಗಿ ಮೆಣಸಿನಕಾಯಿಯ ಮೂಲ ತಳಿಗಳನ್ನು ಅಭಿವೃದ್ಧಿಪಡಿಸುವಂತೆ ಕಳೆದ 14 ವರ್ಷಗಳಿಂದ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗೆ ಒತ್ತಾಯ ಮಾಡುತ್ತಲೇ ಬರಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.  ವಿಶೇಷ ತಳಿಯ ಬಿತ್ತನೆ ಬೀಜಗಳು ನಿಧಾನವಾಗಿ ಕಣ್ಮರೆ ಆಗುತ್ತಿವೆ. ಇದೂ ಕೂಡ, ಜನರ ನಿತ್ಯ ಬಳಕೆಯ ಮೆಣಸಿನಕಾಯಿ ಬೆಲೆ ಕೈಗೆ ನಿಲುಕಲಾರದಷ್ಟು ಎತ್ತರಕ್ಕೆ ಹೋಗಲು ಕಾರಣವಾಗಿದೆ.

ಬೆಲೆಯನ್ನು ನಿಯಂತ್ರಿಸದೇ ಹೋದರೆ ಜನಸಾಮಾನ್ಯರು ಬ್ಯಾಡಗಿ ವಿಶೇಷ ತಳಿಗಳ ಮೆಣಸಿನಕಾಯಿ ಬಳಕೆಯನ್ನೇ ನಿಲ್ಲಿಸುವ ಪರಿಸ್ಥಿತಿ ಎದುರಾಗಬಹುದು. ಅದಕ್ಕಾಗಿ ತಳಿ ಅಭಿವೃದ್ಧಿ ಪಡಿಸುವುದರ ಜತೆಗೆ, ಈ ಬೆಳೆ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡುವುದೂ ಅಗತ್ಯವಾಗಿದೆ. ರಾಜ್ಯ ಸಚಿವ ಸಂಪುಟ ಸಾಂಬಾರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಒಪ್ಪಿಗೆ ನೀಡಿ ಎರಡು ಕೋಟಿ ರೂಪಾಯಿ ನೀಡಿದೆ.

ಮುಂದಿನ ವರ್ಷದಿಂದ ಪ್ರತಿ ವರ್ಷ ನಿಗಮಕ್ಕೆ ಐದು ಕೋಟಿ ರೂಪಾಯಿ ನೀಡುವ ಭರವಸೆ ಕೊಟ್ಟಿದೆ. ಈ ನಿಗಮದಿಂದಲಾದರೂ ರೋಗಮುಕ್ತ ಹಾಗೂ ಇಳುವರಿ ಹೆಚ್ಚಿಸುವಂತಹ ಹೊಸ ಡಬ್ಬಿ ಮೆಣಸಿನಕಾಯಿ ತಳಿಯ ಸಂಶೋಧನೆ  ಮತ್ತು ಅಭಿವೃದ್ಧಿ ನಡೆಯುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್‌.ಆರ್‌.ಪಾಟೀಲ.

ಸೌಂದರ್ಯವರ್ಧಕ!
ಈ ಡಬ್ಬಿ ಮೆಣಸಿನಕಾಯಿಯಲ್ಲಿ ದೊರೆಯುವ ಎಣ್ಣೆ (ಓಲಿಯೋರಿಸನ್‌) ಮತ್ತು ಬಣ್ಣವನ್ನು ತೆಗೆದು ನೇಲ್‌ ಪಾಲೀಸ್‌ ಹಾಗೂ ಲಿಪ್‌ಸ್ಟಿಕ್‌ನಂತಹ ಸೌಂದರ್ಯವರ್ಧಕಗಳನ್ನು ತಯಾರಿಸಲೂ ಬಳಸಲಾಗುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಈ ಮೆಣಸಿನಕಾಯಿಗೆ ಕ್ರಿಮಿನಾಶಕ ಬಳಕೆ ಮಾಡುವುದು ಬಹುತೇಕ ಕಡಿಮೆ. ಏಕೆಂದರೆ, ಕ್ರಿಮಿನಾಶಕ ಬಳಸಿದರೆ ಮೆಣಸಿಕಾಯಿ ಬಿಳಿ ಬಣ್ಣಕ್ಕೆ ತಿರುಗಿ ತನ್ನ ಮೂಲ ಗುಣವನ್ನು ಕಳೆದುಕೊಳ್ಳುತ್ತದೆ. ಅದೇ ಕಾರಣಕ್ಕೆ ರೈತರು ಈ ತಳಿಗೆ  ಯಾವುದೇ ರಾಸಾಯನಿಕ ಬಳಕೆ ಮಾಡುವುದಿಲ್ಲ. ಹೀಗಾಗಿ ಬ್ಯಾಡಗಿಯ ಡಬ್ಬಿ ತಳಿ ಮೆಣಸಿಕಾಯಿಗೆ ನಮ್ಮ ದೇಶದಲ್ಲಷ್ಟೇ ಅಲ್ಲದೇ ವಿಶ್ವದ ವಿವಿಧೆಡೆ ಹೆಚ್ಚಿನ ಬೇಡಿಕೆ ಇದೆ.

ಈ ಬಾರಿ ಬೆಳೆಯಬೇಕಿತ್ತು’
‘ಈ ಮೊದಲು ಪ್ರತಿ ಎಕರೆಗೆ ಸಾಮಾನ್ಯವಾಗಿ ಎರಡರಿಂದ ಮೂರು ಕ್ವಿಂಟಲ್‌ ಮೆಣಸಿನಕಾಯಿ ಇಳುವರಿ ಬರುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಎಕರೆಗೆ ಕೇವಲ ಒಂದು ಅಥವಾ ಒಂದೂವರೆ ಕ್ವಿಂಟಲ್‌ ಇಳುವರಿ ಬರುತ್ತಿದೆ. ನಾವು ಬೆಳೆಗೆ ಮಾಡಿರುವ ಖರ್ಚು ಸಹ ಸರಿದೂಗುವುದಿಲ್ಲ. ಇದೇ ಕಾರಣಕ್ಕೆ ಬಹಳಷ್ಟು ಮಂದಿ ಬೆಳೆಗಾರರು ಡಬ್ಬಿ ಮೆಣಸಿನಕಾಯಿ ಬೆಳೆಯಿಂದಲೇ ವಿಮುಖರಾ­ಗಿದ್ದೇವೆ. ಆದರೆ, ಈ ವರ್ಷ ಸಿಕ್ಕ ಬೆಲೆ ನೋಡಿದರೆ ಸ್ವಲ್ಪವಾದರೂ ಬೆಳೆಯಬೇಕಿತ್ತು ಎನಿಸುತ್ತಿದೆ’.
– ರೈತ ಉಳವಪ್ಪ ಅಂಗಡಿ,ಹೊಸಳ್ಳಿ, ಗದಗ ತಾಲ್ಲೂಕು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.