ನವದೆಹಲಿ (ಪಿಟಿಐ): ಚಿನ್ನ ಆಮದಿನ ಮೇಲೆ ಹೇರಿರುವ ನಿರ್ಬಂಧ ತೆಗೆದುಹಾಕುವ ಕುರಿತು ಸಹಮತ ವ್ಯಕ್ತಪಡಿಸಿರುವ ಕೇಂದ್ರ ಕೈಗಾರಿಕಾ ಸಚಿವ ಆನಂದ ಶರ್ಮಾ, ನಿರ್ಬಂಧ ಮುಂದುವರಿಸುವುದರಿಂದ ಚಿನ್ನ ಕಳ್ಳಸಾಗಣೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
‘ಚಾಲ್ತಿ ಖಾತೆ ಕೊರತೆ (ಸಿಎಡಿ) ಗಣ ನೀಯವಾಗಿ ತಗ್ಗಿರುವ ಹಿನ್ನೆಲೆಯಲ್ಲಿ ಆಮದು ನಿರ್ಬಂಧ ಸಡಿಲಗೊಳಿಸುವ ಕುರಿತು ಚಿಂತಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ನಿಟ್ಟಿ ನಲ್ಲಿ ಸಮತೋಲಿತ ನಿರ್ಧಾರ ತೆಗೆದು ಕೊಳ್ಳಬೇಕು’ ಎಂದು ಅವರು ಗಮನ ಸೆಳೆದರು.
ಚಿನ್ನ ಆಮದು ನಿರ್ಬಂಧ ಇರುವುದ ರಿಂದ ಚಿನ್ನಾಭರಣ ರಫ್ತು ವಹಿವಾಟು ಫೆಬ್ರುವರಿಯಲ್ಲಿ ಶೇ 4.18ರಷ್ಟು ಕುಸಿ ದಿದ್ದು 359 ಕೋಟಿ ಡಾಲರ್‌ಗಳಿಗೆ (₨22258 ಕೋಟಿ) ಇಳಿಕೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 11 ತಿಂಗಳಲ್ಲಿ ಒಟ್ಟಾರೆ ಚಿನ್ನಾಭರಣ ರಫ್ತು ಶೇ 7.15ರಷ್ಟು ಕುಸಿದಿದ್ದು 3573 ಕೋಟಿ ಡಾಲರ್‌ಗಳಿಗೆ (₨2.21 ಲಕ್ಷ ಕೋಟಿ) ಇಳಿದಿದೆ.
ಚಿನ್ನ ಮತ್ತು ಬೆಳ್ಳಿ ಆಮದು ಕೂಡ ಫೆಬ್ರುವರಿಯಲ್ಲಿ ಶೇ 71ರಷ್ಟು ತಗ್ಗಿದ್ದು 163 ಕೋಟಿ ಡಾಲರ್‌ಗಳಿಗೆ (10,106 ಕೋಟಿ) ಇಳಿಕೆ ಕಂಡಿದೆ.
1,074 ಕೆ.ಜಿ ಬಂಗಾರ ವಶಕ್ಕೆ
ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 1,074.41 ಕೆ.ಜಿಗಳಷ್ಟು ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 2012–13ನೇ ಸಾಲಿನಲ್ಲಿ ಇದು ಕೇವಲ 326.23 ಕೆ.ಜಿಯಷ್ಟಿತ್ತು ಎಂಬುದು ಗಮನಾರ್ಹ.
ಕಳೆದ ಒಂದು ವರ್ಷದಲ್ಲಿ ವಿವಿಧ ದೇಶಗಳಿಂದ ಅಕ್ರಮವಾಗಿ ತಂದ ₨245 ಕೋಟಿ ಮೌಲ್ಯದ ಚಿನ್ನವನ್ನು ಸೀಮಾ ಸುಂಕ ಅಧಿಕಾರಿಗಳು ವಶಕ್ಕೆ ತೆಗೆದು ಕೊಂಡಿದ್ದಾರೆ. 2013–14ನೇ ಸಾಲಿನಲ್ಲಿ ಈವರೆಗೆ ಚಿನ್ನ ಕಳ್ಳಸಾಗಾಣಿಕೆಗೆ ಸಂಬಂಧಿಸಿದಂತೆ ಒಟ್ಟಾರೆ 700 ಪ್ರಕರಣಗಳು ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.