ADVERTISEMENT

1000 ಟನ್ ಚಿನ್ನ ಆಮದು?

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2011, 19:30 IST
Last Updated 21 ಆಗಸ್ಟ್ 2011, 19:30 IST
1000 ಟನ್ ಚಿನ್ನ ಆಮದು?
1000 ಟನ್ ಚಿನ್ನ ಆಮದು?   

ಮುಂಬೈ (ಪಿಟಿಐ): ಚಿನ್ನದ ಬೆಲೆ  ಗಗನಾಭಿಮುಖವಾಗಿ ಜಿಗಿಯುತ್ತ ದಿನೇ ದಿನೇ ಹೊಸ ದಾಖಲೆ ಬರೆಯುತ್ತಿದ್ದರೂ  ದೇಶದಲ್ಲಿ ಬೇಡಿಕೆ  ಕುಸಿಯುವ ಲಕ್ಷಣಗಳಿಲ್ಲ, ಹೀಗಾಗಿ ಪ್ರಸಕ್ತ ಸಾಲಿನಲ್ಲಿ ದೇಶದ ಚಿನ್ನದ ಆಮದು ಪ್ರಮಾಣವು 1000 ಟನ್ ದಾಟುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ಪರಿಣತರು ಅಂದಾಜಿಸಿದ್ದಾರೆ.

ಕಳೆದ ವರ್ಷ 958 ಟನ್‌ಗಳಷ್ಟು ಚಿನ್ನ ಆಮದು ಆಗಿತ್ತು ಎಂದು `ವಿಶ್ವ ಚಿನ್ನ ಮಂಡಳಿ~ (ಡಬ್ಲ್ಯುಜಿಸಿ) ತಿಳಿಸಿದೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ ಆಮದು ಮಾಡಿಕೊಂಡ ಚಿನ್ನದ ಪ್ರಮಾಣ 553 ಟನ್‌ಗಳಷ್ಟಾಗಿದೆ.

ಅಮೆರಿಕದ ಸಾಲ ಮರು ಪಾವತಿ ಸಾಮರ್ಥ್ಯ ತಗ್ಗಿರುವುದು ಮತ್ತು ಐರೋಪ್ಯ ಒಕ್ಕೂಟದ ಆರ್ಥಿಕತೆಗೆ ಸಂಬಂಧಿಸಿದ ಕಳವಳಕಾರಿ ಸುದ್ದಿಗಳ ಫಲವಾಗಿ ಆಗಸ್ಟ್ ತಿಂಗಳೊಂದರಲ್ಲಿಯೇ  ಚಿನ್ನದ ಬೆಲೆ ಶೇ 14ರಷ್ಟು ಏರಿಕೆ ಕಂಡಿದೆ. ಹೂಡಿಕೆದಾರರು ಷೇರುಗಳನ್ನು ಕೈ ಬಿಟ್ಟು, `ಸುರಕ್ಷಿತ ಹೂಡಿಕೆ~ ಚಿನ್ನದತ್ತ ಮುಖ ಮಾಡಿರುವುದರಿಂದ ಬೇಡಿಕೆ ಮತ್ತು ಬೆಲೆ ನಿರಂತರವಾಗಿ ಹೆಚ್ಚುತ್ತಲೇ ಇದೆ.

ದೀಪಾವಳಿ ಹೊತ್ತಿಗೆ ಬೆಲೆ ಇನ್ನಷ್ಟು ಏರುವ ಭೀತಿಯಲ್ಲಿ (ತಲಾ 10 ಗ್ರಾಂಗಳಿಗೆ ್ಙ 30 ಸಾವಿರ ದಾಟುವ ಸಾಧ್ಯತೆ), ಜನರು ಭೌತಿಕವಾಗಿ ಇನ್ನಷ್ಟು ಚಿನ್ನ ಖರೀದಿಸಲು ಆಸಕ್ತಿ ತೋರಿಸುವುದರಿಂದ ಬೇಡಿಕೆಯೂ ಗರಿಷ್ಠ ಮಟ್ಟದಲ್ಲಿಯೇ ಇರಲಿದೆ.

ಈ ಹಿಂದೆ, 1999ರ ತಿಂಗಳೊಂದರಲ್ಲಿ ಚಿನ್ನದ ಬೆಲೆ ಶೇ 14ರಷ್ಟು ಏರಿಕೆ ಕಂಡಿತ್ತು. ದೇಶಿ ಮಾರುಕಟ್ಟೆಯಲ್ಲಿ ಈಗ ತಲಾ 10 ಗ್ರಾಂಗಳಿಗೆ ಬೆಲೆಯು ್ಙ 28,150 ಮತ್ತು ಜಾಗತಿಕ ಪೇಟೆಯಲ್ಲಿ ಪ್ರತಿ  ಔನ್ಸ್‌ಗೆ 1877 ಡಾಲರ್‌ಗಳಷ್ಟಾಗಿದೆ.

ಬೆಲೆ ಏರಿಕೆ ಜತೆಗೆ ಹೂಡಿಕೆ ಮತ್ತು ಲಾಭ ಮಾಡಿಕೊಳ್ಳುವ ಉದ್ದೇಶದ ಬೇಡಿಕೆಯೂ ಪೈಪೋಟಿ ನಡೆಸುತ್ತಿದೆ. ಹೀಗಾಗಿ ಹೆಚ್ಚು ಲಾಭ ಬಾಚಿಕೊಳ್ಳುವ ಪ್ರವೃತ್ತಿಯಿಂದಾಗಿ ಚಿನ್ನದ ಖರೀದಿಗೆ ಅದರಲ್ಲೂ ವಿಶೇಷವಾಗಿ  ಷೇರು ವಹಿವಾಟು ನಡೆಸುವ  ಚಿನ್ನದ ನಿಧಿಗಳು (ಇಟಿಎಫ್) ಮತ್ತು ನಾಣ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ದೇಶದಲ್ಲಿ `ಚಿನ್ನದ ಇಟಿಎಫ್~ ಹೂಡಿಕೆಯು 15 ಟನ್‌ಗಳಿಗೆ ತಲುಪಿದ್ದು, ಈ ವರ್ಷದ ಉಳಿದ ಅವಧಿಯಲ್ಲಿ ಇದು ದುಪ್ಪಟ್ಟಾಗುವ ನಿರೀಕ್ಷೆ ಇದೆ. ಹೊಸ ಚಿನ್ನಾಭರಣಗಳಿಗೆ ಮಾತ್ರ ಬೇಡಿಕೆಯು ತಕ್ಕಮಟ್ಟಿಗೆ  ಕುಸಿಯಬಹುದು ಎಂದೂ ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.