ADVERTISEMENT

3ನೇ ದಿನವೂ ಚಿನ್ನಾಭರಣ ವರ್ತಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

 ನವದೆಹಲಿ (ಪಿಟಿಐ): ಆಮದು ತೆರಿಗೆ ಹೆಚ್ಚಳ ವಿರೋಧಿಸಿ ದೇಶದಾದ್ಯಂತ ಚಿನ್ನಾಭರಣ ವರ್ತಕರು ನಡೆಸುತ್ತಿರುವ ಪ್ರತಿಭಟನೆ ಸೋಮವಾರವೂ ನಡೆಯಿತು.  

 ವರ್ತಕರ ಯಾವುದೇ ಒತ್ತಡ ತಂತ್ರಗಳಿಗೆ ಮಣಿಯುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸ್ಪಷ್ಟಪಡಿಸಿದ್ದಾರೆ. ತೆರಿಗೆ ಹೆಚ್ಚಳದಿಂದ ಚಿನ್ನದ ಅಕ್ರಮ ವಹಿವಾಟು ಮತ್ತು  ಕಳ್ಳಸಾಗಾಣಿಕೆ ಹೆಚ್ಚಲಿದೆ. ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ ಎನ್ನುವುದು  ವರ್ತಕರ ವಾದ. ಆದರೆ, ಇದನ್ನು ಖಡಾಖಂಡಿತವಾಗಿ   ತಳ್ಳಿಹಾಕಿರುವ ಪ್ರಣವ್, ತುಂಬಾ ಸರಳವಾಗಿ ಹೇಳಬೇಕೆಂದರೆ, ವರ್ತಕರ ಯಾವುದೇ ಒತ್ತಡ ತಂತ್ರಗಳಿಗೆ ಸರ್ಕಾರ ಸೊಪ್ಪು ಹಾಕುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಬಜೆಟ್‌ನಲ್ಲಿ ಸ್ಟ್ಯಾಂಡರ್ಡ್ ಚಿನ್ನದ ಗಟ್ಟಿಗಳ ಮೇಲಿನ ಪ್ರಾಥಮಿಕ ಸೀಮಾ ಸುಂಕವನ್ನು ಶೇ 2ರಿಂದ 4ಕ್ಕೆ ಹೆಚ್ಚಿಸಲಾಗಿದೆ. ಸ್ಟ್ಯಾಂಡರ್ಡ್ ಅಲ್ಲದ ಚಿನ್ನದ ಆಮದು ದರ ಶೇ 5ರಿಂದ ಶೇ 10ಕ್ಕೆ ಏರಿಕೆಯಾಗಿದೆ. ಇದರ ಜತೆಗೆ ಬ್ರಾಂಡೆಡ್ ರಹಿತ ಚಿನ್ನಾಭರಣಗಳ ಮೇಲೆ ಶೇ 1ರಷ್ಟು ಅಬಕಾರಿ ತೆರಿಗೆ ಹೇರಲಾಗಿದೆ. ಈ ಎಲ್ಲ ಹೆಚ್ಚಳದಿಂದ ಚಿನ್ನದ ಬೆಲೆಯು 10 ಗ್ರಾಂಗಳಿಗೆ ಸುಮಾರು ್ಙ1 ಸಾವಿರದಷ್ಟು ಹೆಚ್ಚಳವಾಗಲಿದೆ ಎಂದು ವರ್ತಕ ಸಂಘಟನೆಗಳು ದೂರಿವೆ.

ಆದರೆ,  ತೆರಿಗೆ ಹೆಚ್ಚಳವನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಎಂದು  ಪ್ರಣವ್ ತಮ್ಮ ನಿಲುವು ಸಮರ್ಥಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.