ADVERTISEMENT

4 ತಿಂಗಳ ಕನಿಷ್ಠ ಮಟ್ಟಕ್ಕೆ ಸೂಚ್ಯಂಕ

ಯುದ್ಧ ಭೀತಿ; 292 ಅಂಶ ಕುಸಿತ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ಮುಂಬೈ(ಪಿಟಿಐ): ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸಂವೇದಿ ಸೂಚ್ಯಂಕ ಎರಡನೇ ದಿನವೂ ಕುಸಿತ ಅನುಭವಿಸಿ 4 ತಿಂಗಳ ಕನಿಷ್ಠ ಮಟ್ಟಕ್ಕೆ ಬಂದಿದೆ.

ಕೊರಿಯಾ ಉಪಖಂಡದಲ್ಲಿ ಯುದ್ಧ ಭೀತಿ ಎದುರಾಗಿರುವುದು, ದೇಶದ ಕಾರ್ಪೊರೇಟ್ ವಲಯದಲ್ಲಿ 2012-13ನೇ ಸಾಲಿನ 4ನೇ ತ್ರೈಮಾಸಿಕದಲ್ಲಿ ಕಳಪೆ ಸಾಧನೆಯಾಗಿದೆ ಎಂಬ ಅಂದಾಜಿನಲ್ಲಿ ಕಳವಳಕ್ಕೀಡಾದ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಲು ಮುಗಿಬಿದ್ದರಿಂದ ಷೇರುಪೇಟೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ ಎಂದು ಅನುಭವಿಗಳು ವಿಶ್ಲೇಷಿಸಿದ್ದಾರೆ.

ಗುರುವಾರದ ವಹಿವಾಟಿನಲ್ಲಿ ಸೂಚ್ಯಂಕ 292 ಅಂಶಗಳನ್ನು ಕಳೆದುಕೊಂಡ ಸೂಚ್ಯಂಕ 18,509.70 ಅಂಶಗಳಲ್ಲಿ ದಿನದಂತ್ಯ ಕಂಡಿತು. ಆ ಮೂಲಕ 2012ರ ನವೆಂಬರ್ 23ರ ಮಟ್ಟಕ್ಕೆ ಬಂದಿತು.

ಇನ್ಫೊಸಿಸ್, ಟಿಸಿಎಸ್(ಶೇ 2ರಷ್ಟು ಕುಸಿತ), ಐಟಿಸಿ, ಐಸಿಐಸಿಐ ಬ್ಯಾಂಕ್ ಮೊದಲಾದ ದಿಗ್ಗಜ ಕಂಪೆನಿಗಳದೂ ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಷೇರುಗಳು ಸಾಕಷ್ಟು ಮೌಲ್ಯ ಕಳೆದುಕೊಂಡವು. ಪರಿಣಾಮ ಹೂಡಿಕೆದಾರರ ರೂ.1 ಲಕ್ಷ ಕೋಟಿಯಷ್ಟು ಷೇರು ಸಂಪತ್ತು ಯುದ್ಧ ಭೀತಿಯ ಪ್ರವಾಹದಲ್ಲಿ ಕೊಚ್ಚಿ ಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT