ADVERTISEMENT

ದಾಖಲೆ ಮಟ್ಟದ ವಹಿವಾಟು

ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳಿಂದ ಉತ್ತಮ ಫಲಿತಾಂಶದ ನಿರೀಕ್ಷೆ

ಪಿಟಿಐ
Published 8 ಜನವರಿ 2018, 19:26 IST
Last Updated 8 ಜನವರಿ 2018, 19:26 IST
ದಾಖಲೆ ಮಟ್ಟದ ವಹಿವಾಟು
ದಾಖಲೆ ಮಟ್ಟದ ವಹಿವಾಟು   

ಮುಂಬೈ: ದೇಶದ ಷೇರುಪೇಟೆಗಳು ಸೋಮವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿವೆ.

ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳು ಉತ್ತಮ ಫಲಿತಾಂಶ ಪ್ರಕಟಿಸುವ ನಿರೀಕ್ಷೆಯ ಜತೆಗೆ ಕೇಂದ್ರ ಬಜೆಟ್‌ನಲ್ಲಿ ಆರ್ಥಿಕ ಬೆಳವಣಿಗೆಗೆ ಪೂರಕ ನಿರ್ಧಾರಗಳು ಪ್ರಕಟವಾಗುವ ವಿಶ್ವಾಸದಿಂದ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು. ಇದರಿಂದ ಸೂಚ್ಯಂಕಗಳು ಏರಿಕೆ ಕಂಡುಕೊಂಡವು ಎಂದು ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಗರಿಷ್ಠ ಮಟ್ಟದಲ್ಲಿಯೇ ವಹಿವಾಟು ಆರಂಭಿಸಿತು. ಮಧ್ಯಂತರ ವಹಿವಾಟಿನಲ್ಲಿ ದಾಖಲೆ ಮಟ್ಟವಾದ 34,386 ಅಂಶಗಳಿಗೆ ತಲುಪುವ ಮೂಲಕ ಜನವರಿ 5 ರಂದು ದಾಖಲಾಗಿದ್ದ ಗರಿಷ್ಠ ಮಟ್ಟವಾದ 34,189ನ್ನು ಮೀರಿಸಿತ್ತು.

ADVERTISEMENT

ನಂತರ ಲಾಭ ಗಳಿಕೆ ಉದ್ದೇಶದ ವಹಿವಾಟಿಗೆ ಒಳಗಾಗಿದ್ದರಿಂದ ಸೂಚ್ಯಂಕದ ಏರಿಕೆ ವೇಗ ತಗ್ಗಿತು. ಒಟ್ಟಾರೆ 199 ಅಂಶಗಳ ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 34,352 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯವಾಯಿತು.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಸಹ ಮಧ್ಯಂತರ ವಹಿವಾಟಿನಲ್ಲಿ ಜನವರಿ 5ರ ಗರಿಷ್ಠ ಮಟ್ಟವನ್ನು ದಾಟಿ 10,631ಕ್ಕೆ ತಲುಪಿತ್ತು. ನಂತರ ಅಲ್ಪ ಇಳಿಕೆ ಕಂಡಿತು. ಅಂತಿಮವಾಗಿ ದಿನದ ವಹಿವಾಟಿನಲ್ಲಿ ನಿಫ್ಟಿ 65 ಅಂಶ ಏರಿಕೆಯೊಂದಿಗೆ 10,558 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

‘ಜಾಗತಿಕ ಮಾರುಕಟ್ಟೆಯಲ್ಲಿ ನಡೆದ ಸಕಾರಾತ್ಮಕ ವಹಿವಾಟಿನ ಜತೆಗೆ ತ್ರೈಮಾಸಿಕ ಫಲಿತಾಂಶದ ಬಗೆಗಿನ ಆಶಾವಾದವೂ ಷೇರುಪೇಟೆಗಳನ್ನು ಹೊಸ ಎತ್ತರಕ್ಕೆ ತಲುಪುವಂತೆ ಮಾಡಿದವು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ವಿಶ್ಲೇಷಣೆ ಮಾಡಿದ್ದಾರೆ.

ಆರ್ಥಿಕ ಬಲವರ್ಧನೆಗೆ ಮತ್ತು ಗ್ರಾಮೀಣ ಭಾಗದ ಹೂಡಿಕೆ ಹೆಚ್ಚಾಗುವ ಬಗ್ಗೆ ಕೇಂದ್ರ ಬಜೆಟ್‌ ಗಮನ ನೀಡುವ ನಿರೀಕ್ಷೆ ಹೆಚ್ಚಾಗಿದೆ. ಡಾಲರ್‌ ಚೇತರಿಕೆ ಕಂಡಿರುವುದರಿಂದ ಔಷಧ ಮತ್ತು ಐ.ಟಿ ಷೇರುಗಳು ಏರಿಕೆ ಕಂಡವು ಎಂದು  ಮಾರುಕಟ್ಟೆ ತಜ್ಞ ಆನಂದ್ ಜೇಮ್ಸ್‌ ಹೇಳಿದ್ದಾರೆ.

ಹೊಸ ವರ್ಷದಲ್ಲಿ ವಿದೇಶಿ ಹೂಡಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಶುಕ್ರವಾರ ವಿದೇಶಿ ಹೂಡಿಕೆದಾರರು ₹ 581 ಕೋಟಿ ಹೂಡಿಕೆ ಮಾಡಿದ್ದಾರೆ. ದೇಶಿ ಹೂಡಿಕೆದಾರರು ₹ 243 ಕೋಟಿ ಬಂಡವಾಳ ತೊಡಗಿಸಿದ್ದಾರೆ.
*
ಹೂಡಿಕೆದಾರರ ಸಂಪತ್ತು ವೃದ್ಧಿ
ಷೇರುಪೇಟೆಯಲ್ಲಿ ಉತ್ತಮ ಚಟುವಟಿಕೆ ನಡೆಯುತ್ತಿರುವುದರಿಂದ ಹೂಡಿಕೆದಾರರ ಸಂಪತ್ತು ಮೌಲ್ಯ ₹ 1.12 ಲಕ್ಷ ಕೋಟಿ ಹೆಚ್ಚಾಗಿದೆ. ಇದರಿಂದ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯವು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 155 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.