ADVERTISEMENT

ಚಂಚಲ ವಹಿವಾಟು

ಶೇ 10 ರಷ್ಟು ಬಂಡವಾಳ ಗಳಿಕೆ ತೆರಿಗೆ ಪ್ರಭಾವ

ಪಿಟಿಐ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST
ಚಂಚಲ ವಹಿವಾಟು
ಚಂಚಲ ವಹಿವಾಟು   

ಮುಂಬೈ: ಷೇರುಪೇಟೆ ಪಾಲಿಗೆ ಕೇಂದ್ರ ಬಜೆಟ್‌ ನಿರಾಶಾದಾಯಕವಾಗಿ ಪರಿಣಿಮಿಸಿತು. ಬಂಡವಾಳ ಗಳಿಕೆ ತೆರಿಗೆ, ವಿತ್ತೀಯ ಕೊರತೆ ಅಂದಾಜು ಏರಿಕೆಯಿಂದಾಗಿ ಚಂಚಲ ವಹಿವಾಟು ನಡೆಯಿತು.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು, ₹ 1 ಲಕ್ಷಕ್ಕೂ ಅಧಿಕ ಮೊತ್ತಕ್ಕೆ ಶೇ 10 ರಷ್ಟು ಬಂಡವಾಳ ಗಳಿಕೆ ತೆರಿಗೆ ವಿಧಿಸಬೇಕು ಎಂದು ಘೋಷಣೆ ಮಾಡಿದರು. ಇದಕ್ಕೆ ಪೇಟೆಯಲ್ಲಿ ತಕ್ಷಣ ಪ್ರತಿಕ್ರಿಯೆ ವ್ಯಕ್ತವಾಗಿ ಷೇರುಪೇಟೆ ಕುಸಿತ ಕಂಡಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 460 ಅಂಶ ಕುಸಿತ ಕಂಡಿತ್ತು.

2017–18ನೇ ಆರ್ಥಿಕ ವರ್ಷಕ್ಕೆ ವಿತ್ತೀಯ ಕೊರತೆಯನ್ನು ಶೇ 3.2 ರಿಂದ ಶೇ 3.5ಕ್ಕೆ ಏರಿಕೆ ಮಾಡಿರುವುದು ಸಹ ಸೂಚ್ಯಂಕವನ್ನು ಇಳಿಕೆ ಕಾಣುವಂತೆ ಮಾಡಿತು. ಅಂತಿಮವಾಗಿ ದಿನದ ವಹಿವಾಟಿನಲ್ಲಿ 58 ಅಂಶ ಇಳಿಕೆ ಕಂಡು, 35,907 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 11 ಅಂಶ ಇಳಿಕೆಯಾಗಿ 11,016 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಬಜೆಟ್‌ ಭಾಷಣ ಆರಂಭವಾಗುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಕಂಡುಬಂದಿತು. ಆದರೆ ದೇಶಿ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಭಾರಿ ನಷ್ಟವಾಗಲಿಲ್ಲ.

ಸಕಾರಾತ್ಮಕ ಅಂಶಗಳು: ಮೂಲ ಸೌಕರ್ಯ ವಲಯಕ್ಕೆ ಹೆಚ್ಚಿನ ವೆಚ್ಚ ಮತ್ತು ಕಾರ್ಪೊರೇಟ್‌ ತೆರಿಗೆ ಇಳಿಕೆಯು ಷೇರುಪೇಟೆಯಲ್ಲಿ ಸಕಾರಾತ್ಮಕ ಚಟುವಟಿಕೆಗೆ ಕಾರಣವಾಯಿತು.

ಆಹಾರ ಸಂಸ್ಕರಣಾ ವಲಯಕ್ಕೆ ₹ 1,400 ಕೋಟಿ ನೀಡುವ ಸುದ್ದಿಯು ಆ ವಲಯದ ಕಂಪನಿಗಳ ಷೇರುಗಳಿಗೆ ಬೇಡಿಕೆ ಸೃಷ್ಟಿಯಾಗುವಂತೆ ಮಾಡಿತು ಎಂದು ಷೇರುಪೇಟೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.