ADVERTISEMENT

ಬಡವರ ಆರೋಗ್ಯ ವಿಮೆಗೆ ₹ 1 ಲಕ್ಷ ಕೋಟಿ ವೆಚ್ಚ?

ಪಿಟಿಐ
Published 4 ಫೆಬ್ರುವರಿ 2018, 19:52 IST
Last Updated 4 ಫೆಬ್ರುವರಿ 2018, 19:52 IST

ನವದೆಹಲಿ: ಬಡವರಿಗಾಗಿ ಬಜೆಟ್‌ನಲ್ಲಿ ಘೋಷಿಸಿರುವ ಆರೋಗ್ಯ ವಿಮೆ ಯೋಜನೆಗೆ ವರ್ಷಕ್ಕೆ ₹ 1 ಲಕ್ಷ ಕೋಟಿ ವೆಚ್ಚ ತಗುಲಲಿದೆ ಎಂದು ಸಂಶೋಧನಾ ವರದಿಯೊಂದು ಅಂದಾಜಿಸಿದೆ.

ಈ ಯೋಜನೆಯು ರಾಜ್ಯ ಸರ್ಕಾರಗಳ ಸ್ವಾಯತ್ತತೆಗೂ ಧಕ್ಕೆ ಒದಗಿಸಲಿದೆ ಎಂದು ಸಾರ್ವಜನಿಕ ಹಣಕಾಸು ಮತ್ತು ನೀತಿಯ ರಾಷ್ಟ್ರೀಯ ಸಂಸ್ಥೆ (ಎನ್‌ಐಪಿಎಫ್‌ಪಿ) ಸಿದ್ಧಪಡಿಸಿರುವ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

‘ಎನ್‌ಎಚ್‌ಪಿಎಸ್‌’ಗೆ ವರ್ಷಕ್ಕೆ ₹ 10 ಸಾವಿರದಿಂದ ₹ 12 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ನೀತಿ ಆಯೋಗದ ಸಲಹೆಗಾರ ಅಲೋಕ್‌ ಕುಮಾರ್‌ ಅಂದಾಜಿಸಿದ್ದಾರೆ. ಇದಕ್ಕೆ ಹೋಲಿಸಿದರೆ ವಾಸ್ತವದಲ್ಲಿ ವೆಚ್ಚವು 10 ಪಟ್ಟು ಹೆಚ್ಚಿಗೆ ಇರಲಿದೆ ಎಂದು ‘ಎನ್‌ಐಪಿಎಫ್‌ಪಿ’ಯ ಸಹಾಯಕ ಪ್ರಾಧ್ಯಾಪಕಿ  ಮಿತಾ ಚೌಧರಿ ಅವರು ಸಿದ್ಧಪಡಿಸಿರುವ ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಇಂತಹ ಯೋಜನೆ ಜಾರಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೊಕ್ಕಸದ ಮೇಲೆ ಭಾರಿ ಹೊರೆ ಬೀಳಲಿದೆ. ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುವ ಆರೋಗ್ಯ ರಕ್ಷಣೆ ವಿಷಯದಲ್ಲಿ ಇದು ಅವುಗಳ ಸ್ವಾಯತ್ತತೆಗೂ ಧಕ್ಕೆ ಒದಗಿಸಲಿದೆ. ವಿಮೆ ಇಳಿಸಿದ ಮೊತ್ತದ ಕಂತಿನ ದರ ಶೇ 2 ರಷ್ಟು ಇರಲಿದೆ ಎಂದು ಲೆಕ್ಕಹಾಕಿದರೂ ಈ ಯೋಜನೆಗೆ ವರ್ಷಕ್ಕೆ ₹ 1 ಲಕ್ಷ ಕೋಟಿ ವೆಚ್ಚ ತಗುಲಲಿದೆ. ಆದರೆ, ಕೇಂದ್ರ ಸರ್ಕಾರದ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ಆಯುಷ್‌ ಸಚಿವಾಲಯಗಳಿಗೆ ಈ ಬಜೆಟ್‌ನಲ್ಲಿ ನಿಗದಿ ಮಾಡಿರುವ ನೆರವಿನ ಮೊತ್ತ ಕೇವಲ ₹ 55 ಸಾವಿರ ಕೋಟಿಗಳಷ್ಟಿದೆ.  ಶಿಕ್ಷಣ ಮತ್ತು ಆರೋಗ್ಯದ ಸೆಸ್‌ ಅನ್ನು ಶೇ 1ರಷ್ಟು ಹೆಚ್ಚಿಸುವ ಮೂಲಕ ಹೆಚ್ಚುವರಿಯಾಗಿ ₹ 11 ಸಾವಿರ ಕೋಟಿ ಸಂಗ್ರಹಿಸಿದರೂ, ಭಾರಿ ಕೊರತೆ ಬೀಳಲಿದೆ.

10 ಕೋಟಿ ಬಡ ಕುಟುಂಬಗಳಿಗೆ ಈ ಯೋಜನೆ ಪ್ರಕಟಿಸಲಾಗಿದೆ. ಆರಂಭಿಕ ನಿಧಿಯ ರೂಪದಲ್ಲಿ ₹ 2,000 ಕೋಟಿ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.