ADVERTISEMENT

‘ವಿತ್ತೀಯ ಸ್ಥಿತಿ ಸುಧಾರಿಸಲಿದೆ’

ಕಚ್ಚಾ ತೈಲ ಬೆಲೆ ಏರಿಕೆ ಆತಂಕ ಬೇಡ: ಹಣಕಾಸು ಸಚಿವ ಅರುಣ್ ಜೇಟ್ಲಿ

ಪಿಟಿಐ
Published 10 ಫೆಬ್ರುವರಿ 2018, 19:44 IST
Last Updated 10 ಫೆಬ್ರುವರಿ 2018, 19:44 IST
ಆರ್‌ಬಿಐ ಆಡಳಿತ ಮಂಡಳಿ ಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ್ ಶುಲ್ಕಾ, ಹಣಕಾಸು ಸಚಿವ ಅರುಣ್‌ ಜೇಟ್ಲಿ, ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಪಿಟಿಐ ಚಿತ್ರ
ಆರ್‌ಬಿಐ ಆಡಳಿತ ಮಂಡಳಿ ಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ್ ಶುಲ್ಕಾ, ಹಣಕಾಸು ಸಚಿವ ಅರುಣ್‌ ಜೇಟ್ಲಿ, ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಪಿಟಿಐ ಚಿತ್ರ   

ನವದೆಹಲಿ: ‘ಮುಂದಿನ ಹಣಕಾಸು ವರ್ಷದಿಂದ ದೇಶದ ಆರ್ಥಿಕತೆ ಉತ್ತಮವಾಗಿರಲಿದ್ದು, ಪರಿಸ್ಥಿತಿ ಸುಧಾರಿಸಲಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

2017-18 ಕ್ಕೆ ವಿತ್ತೀಯ ಕೊರತೆಯನ್ನು ಶೇ 3.3 ರಿಂದ ಶೇ 3.5ಕ್ಕೆ ಏರಿಕೆ ಮಾಡಲಾಗಿದೆ. 2018–19ನೇ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಶೇ 3.2 ರಲ್ಲಿ ನಿಯಂತ್ರಿಸುವುದಾಗಿ ಸರ್ಕಾರ ಹೇಳಿದೆ.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಬಗ್ಗೆ ತಕ್ಷಣಕ್ಕೆ ಆತಂಕ ಪಡುವ ಅಗತ್ಯ ಇಲ್ಲ. ಮೂರು ದಿನಗಳಿಂದ ತೈಲ ಬೆಲೆ ಇಳಿಕೆ ಕಾಣುತ್ತಿದೆ. ಹೀಗಾಗಿ ತಕ್ಷಣಕ್ಕೆ ಯಾವುದೇ ನಿರ್ಧಾರಕ್ಕೆ ಬರಲು ಆಗುವುದಿಲ್ಲ’ ಎಂದೂ ಹೇಳಿದ್ದಾರೆ.

ADVERTISEMENT

’ಸೆಬಿ’ಗೆ ಸಲಹೆ: ‘ಕಾರ್ಪೊರೇಟ್‌ ಬಾಂಡ್‌ ಮಾರುಕಟ್ಟೆಯನ್ನು ಬಲವರ್ಧನೆಗೆ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳುವಂತೆ’ ಜೇಟ್ಲಿ ಅವರು ‘ಸೆಬಿ’ಗೆ ಸಲಹೆ ನೀಡಿದ್ದಾರೆ.

‘ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದರಿಂದ ಷೇರು ವಿಕ್ರಯದ ಗುರಿ ತಲುಪಲು ಅನುಕೂಲ ಆಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಜೆಟ್‌ ಮಂಡನೆ ನಂತರ ಇದೇ ಮೊದಲ ಬಾರಿಗೆ ಜೇಟ್ಲಿ ಅವರು ಆರ್‌ಬಿಐ ಮತ್ತು ಷೇರು ನಿಯಂತ್ರಣ ಮಂಡಳಿ (ಸೆಬಿ) ಮಂಡಳಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

‘ಕಾರ್ಪೊರೇಟ್‌ ಬಾಂಡ್‌ ಬಳಕೆ ಉತ್ತೇಜಿಸಲು ಸೆಪ್ಟೆಂಬರ್‌ನಿಂದ ಹೊಸ ನಿಯಮ ಜಾರಿಗೆ ಬರಲಿದೆ. ಇದರಿಂದ ಕಾರ್ಪೊರೇಟ್ ಬಾಂಡ್‌ ಮೂಲಕ
ಶೇ 25 ರಷ್ಟು ನಿಧಿ ಸಂಗ್ರಹಿಸಲು ಅನುಕೂಲ ಆಗಲಿದೆ‘ ಎಂದು ‘ಸೆಬಿ’ ಅಧ್ಯಕ್ಷ ತ್ಯಾಗಿ ಹೇಳಿದ್ದಾರೆ.

‘ಷೇರುಪೇಟೆ ನಡೆಯ ಅರಿವಿರಬೇಕು: ಷೇರುಪೇಟೆಯಲ್ಲಿ ಆಗುತ್ತಿರುವ ದಿಢೀರ್‌ ಏರಿಳಿತದಿಂದ ದೊಡ್ಡ ಮಟ್ಟದ ಸಮಸ್ಯೆ ಎದುರಾಗಬಾರದು. ಈ ರೀತಿಯ ಅಪಾಯಗಳ ಬಗ್ಗೆ ನಿಯಂತ್ರಣ ಸಂಸ್ಥೆಗೆ ಅರಿವಿರಬೇಕು’ ಎಂದು ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್ ಹೇಳಿದ್ದಾರೆ.

‘ದೇಶಿ ಮತ್ತು ಜಾಗತಿಕ ಷೇರುಪೇಟೆಯ ಇತ್ತೀಚಿನ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಬಂಡವಾಳ ಮಾರುಕಟ್ಟೆಯ ದಿಕ್ಕು ಹೇಗೆ ಬದಲಾಗುತ್ತದೆ ಎನ್ನುವುದು ಆರ್‌ಬಿಐ ಮತ್ತು ಸೆಬಿ ಗಮನದಲ್ಲಿ ಇರಬೇಕು’ ಎಂದೂ ಹೇಳಿದ್ದಾರೆ.

ಚಂಚಲ ವಹಿವಾಟು ಮುಂದುವರಿಯಲಿದೆ

ಜಾಗತಿಕ ಕಾರಣಗಳಿಗಾಗಿ ಷೇರುಪೇಟೆಯಲ್ಲಿ ಸದ್ಯ ಇರುವ ಚಂಚಲ ವಹಿವಾಟು ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ತ್ಯಾಗಿ ಹೇಳಿದ್ದಾರೆ.

ದೀರ್ಘಾವಧಿಯ ಬಂಡವಾಳ ಗಳಿಕೆ ತೆರಿಗೆ ಮತ್ತೆ ಜಾರಿಗೊಳಿಸಿರುವ ಬಗ್ಗೆ ಹೂಡಿಕೆದಾರರಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಇದರಿಂದ ಹೂಡಿಕೆ ಚಟುವಟಿಕೆಗೆ ಹಿನ್ನಡೆಯಾಗಲಿದೆ ಎನ್ನುವುದು ಸರಿಯಲ್ಲ. ಅಲ್ಪಾವಧಿಯಲ್ಲಿ ಸ್ವಲ್ಪ ಮಟ್ಟಿಗೆ ಪರಿಣಾಮ ಇರಬಹುದಷ್ಟೆ ಎಂದಿದ್ದಾರೆ.‌

ಷೇರುಪೇಟೆ ನಡೆಯ ಅರಿವಿರಬೇಕು: ಉರ್ಜಿತ್

ಷೇರುಪೇಟೆಯಲ್ಲಿ ಆಗುತ್ತಿರುವ ದಿಢೀರ್‌ ಏರಿಳಿತದಿಂದ ದೊಡ್ಡ ಮಟ್ಟದ ಸಮಸ್ಯೆ ಎದುರಾಗಬಾರದು. ಈ ರೀತಿಯ ಅಪಾಯಗಳ ಬಗ್ಗೆ ನಿಯಂತ್ರಣ ಸಂಸ್ಥೆಗೆ ಅರಿವಿರಬೇಕು ಎಂದು ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್ ಹೇಳಿದ್ದಾರೆ.

ದೇಶಿ ಮತ್ತು ಜಾಗತಿಕ ಷೇರುಪೇಟೆಯ ಇತ್ತೀಚಿನ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಬಂಡವಾಳ ಮಾರುಕಟ್ಟೆಯ ದಿಕ್ಕು ಹೇಗೆ ಬದಲಾಗುತ್ತದೆ ಎನ್ನುವುದು ಆರ್‌ಬಿಐ ಮತ್ತು ಸೆಬಿ ಗಮನದಲ್ಲಿ ಇರಬೇಕು ಎಂದಿದ್ದಾರೆ.

ಮ್ಯೂಚುವಲ್‌ ಫಂಡ್‌: ಪರ್ಯಾಯ ಅಲ್ಲ

‘ಮ್ಯೂಚುವಲ್‌ ಫಂಡ್‌ಗಳು ಬ್ಯಾಂಕ್‌ ಠೇವಣಿಗಳಿಗೆ ಪರ್ಯಾಯ ಅಲ್ಲ. ಅದರಿಂದ ಬರುವ ಗಳಿಕೆ  ಸ್ಥಿರವಾಗಿರುವುದಿಲ್ಲ’ ಎಂದು ತ್ಯಾಗಿ ತಿಳಿಸಿದ್ದಾರೆ.

‘ಜನರು ಬ್ಯಾಂಕ್‌ನಲ್ಲಿ ಠೇವಣಿ ಇರಿಸುವುದನ್ನು ಬಿಟ್ಟು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದಾದರೆ ಅದರಿಂದ ಬರುವ ಗಳಿಕೆಗೆ ಖಾತರಿ ಇರುವುದಿಲ್ಲ. ಆದರೆ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು ಎನ್ನುವುದಾದರೆ ಇದೊಂದು ಸೂಕ್ತ ದಾರಿ’ ಎಂದು ಹೇಳಬಹುದು.

‘ಬಂಡವಾಳ ಮಾರುಕಟ್ಟೆಯಲ್ಲಿ ಭಾಗವಹಿಸಲು ಚಿಲ್ಲರೆ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್‌ ಒಂದು ಉತ್ತಮ ಮಾರ್ಗವಷ್ಟೇ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.