ADVERTISEMENT

ಬಜೆಟ್ ಅಧಿವೇಶನ: ರೈತರ ಸಮಸ್ಯೆ, ಪೆಗಾಸಸ್ ವಿವಾದದತ್ತ ವಿಪಕ್ಷಗಳ ಅಸ್ತ್ರ!

ಪಿಟಿಐ
Published 30 ಜನವರಿ 2022, 11:06 IST
Last Updated 30 ಜನವರಿ 2022, 11:06 IST
ಸಂಸತ್ ಭವನ
ಸಂಸತ್ ಭವನ   

ನವದೆಹಲಿ: ಸೋಮವಾರದಿಂದ ಆರಂಭವಾಗಲಿರುವ ಸಂಸತ್‌ನ ಬಜೆಟ್ ಅಧಿವೇಶನದಲ್ಲಿ ಪೆಗಾಸಸ್ ಗೂಢಚರ್ಯೆ ವಿವಾದ, ಗಡಿಯಲ್ಲಿ ಚೀನಾ ವಿರುದ್ಧ ಮುಂದುವರಿದ ಸಂಘರ್ಷ ಹಾಗೂ ರೈತರ ಸಮಸ್ಯೆಗಳ ಕುರಿತು ಧ್ವನಿ ಎತ್ತಲು ವಿರೋಧ ಪಕ್ಷಗಳು ಸಜ್ಜಾಗಿವೆ.

ಕೋವಿಡ್ ನಿರ್ವಹಣೆ, ಏರ್ ಇಂಡಿಯಾ ಮಾರಾಟ ಮುಂತಾದ ವಿಷಯಗಳ ಬಗ್ಗೆಯೂ ಪ್ರಶ್ನೆ ಎತ್ತಲು ವಿರೋಧ ಪಕ್ಷಗಳು ಕಾರ್ಯತಂತ್ರ ರೂಪಿಸಿವೆ.

ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಟ್ಟು ಸೆಂಟ್ರಲ್ ಹಾಲ್‌ನಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಬಜೆಟ್ ಅಧಿವೇಶನ ಆರಂಭವಾಗಲಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22ನೇ ಸಾಲಿನ ಬಜೆಟ್ ಮಂಗಳವಾರ (ಫೆ.1) ಮಂಡಿಸಲಿದ್ದಾರೆ.

ಪಂಚರಾಜ್ಯಗಳು (ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ) ಚುನಾವಣೆಯ ಹೊಸ್ತಿಲಲ್ಲಿರುವಂತೆಯೇ ಬಜೆಟ್ ಅಧಿವೇಶನವು ನಡೆಯುತ್ತಿದೆ.

ಬಜೆಟ್ ಅಧಿವೇಶನದ ಮೊದಲ ಹಂತವು ಜನವರಿ 31ರಿಂದ ಫೆಬ್ರುವರಿ 11ರ ವರೆಗೆ ನಡೆಯಲಿದೆ. ಈ ವೇಳೆಯಲ್ಲಿ ರಾಷ್ಟ್ರಪತಿ ಭಾಷಣ ಹಾಗೂ ಬಜೆಟ್ ಮೇಲಿನ ಚರ್ಚೆಗಳು ಇರಲಿವೆ. ಎರಡನೇ ಹಂತವು ಮಾರ್ಚ್ 14ರಿಂದ ಆರಂಭವಾಗಿ ಎಪ್ರಿಲ್ 8ರಂದು ಮುಕ್ತಾಯಗೊಳ್ಳುತ್ತದೆ.

ಇಸ್ರೇಲ್‌ನಿಂದ ಪೆಗಾಸಸ್‌ ಬೇಹುಗಾರಿಕೆ ಕುತಂತ್ರಾಂಶವನ್ನು ಭಾರತವು ಖರೀದಿಸಿದೆ ಎಂಬ ‘ದ ನ್ಯೂಯಾರ್ಕ್‌ ಟೈಮ್ಸ್‌’ ವರದಿಯು ಭಾರಿ ಸಂಚಲನ ಮೂಡಿಸಿದ್ದು, ಬಜೆಟ್ ಅಧಿವೇಶನದಲ್ಲೂ ವಿಪಕ್ಷಗಳು ಕೋಲಾಹಲ ಎಬ್ಬಿಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.