ನಿರ್ಮಲಾ ಸೀತಾರಾಮನ್
ನವದೆಹಲಿ: ಸರ್ಕಾರವು ನೇರ ತೆರಿಗೆ ಕಾನೂನಿನ ಸರಳೀಕರಣಕ್ಕೆ ನಿರ್ಧರಿಸಿದ್ದು, ಮುಂದಿನ ವಾರ ಸಂಸತ್ ಅಧಿವೇಶನದಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಈಗಿರುವ 1961ರ ಆದಾಯ ತೆರಿಗೆ ಕಾಯ್ದೆಯು ಆರು ದಶಕದಷ್ಟು ಹಳೆಯದಾಗಿದೆ. ಕಾಯ್ದೆಯಲ್ಲಿ 23 ಅಧ್ಯಾಯಗಳಿದ್ದು, 298ಕ್ಕೂ ಹೆಚ್ಚು ಸೆಕ್ಷನ್‌ಗಳಿವೆ. ತೆರಿಗೆ ಪಾವತಿ ಸರಳೀಕರಣವಾಗಿಲ್ಲ. ತೆರಿಗೆ ಭಾಷೆಯೂ ಅರ್ಥವಾಗುತ್ತಿಲ್ಲ. ಹಾಗಾಗಿ, ಕಾಯ್ದೆಯ ಶೇ 60ರಷ್ಟು ಪುಟಗಳನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ.
ಈ ಕಾಯ್ದೆಯ ಸಮಗ್ರ ಬದಲಾವಣೆ ಕುರಿತು 2024–25ನೇ ಸಾಲಿನ ಬಜೆಟ್‌ನಲ್ಲಿಯೇ ನಿರ್ಮಲಾ ಅವರು ಪ್ರಸ್ತಾಪಿಸಿದ್ದರು. ಇದಕ್ಕೆ ಅನುಗುಣವಾಗಿ ಕಾಯ್ದೆಯ ಸಮಗ್ರ ಪರಾಮರ್ಶೆ ಸಂಬಂಧ ಕೇಂದ್ರ ನೇರ ತೆರಿಗೆಗಳ ಮಂಡಳಿಯಿಂದ ಆಂತರಿಕ ಸಮಿತಿ ಕೂಡ ರಚಿಸಲಾಗಿತ್ತು. ಇದರಡಿ 22 ವಿಶೇಷ ಉಪ ಸಮಿತಿಗಳನ್ನು ರಚಿಸಲಾಗಿದೆ. ಮಧ್ಯಸ್ಥಗಾರರಿಂದ 6,500 ಸಲಹೆಗಳನ್ನು ಸ್ವೀಕರಿಸಲಾಗಿದೆ.
ಹೊಸ ಆದಾಯ ತೆರಿಗೆ ಮಸೂದೆಯಲ್ಲಿ ಯಾವ ಅಂಶಗಳು ಅಡಕವಾಗಿರಲಿವೆ ಎಂಬ ಬಗ್ಗೆ ಬಜೆಟ್‌ನಲ್ಲಿ ಸ್ಪಷ್ಟಪಡಿಸಿಲ್ಲ. ಆದರೆ, ತೆರಿಗೆ ಸರಳೀಕರಣದಿಂದ ವ್ಯಾಜ್ಯಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ತೆರಿಗೆಗೆ ಸಂಬಂಧಿಸಿದಂತೆ ಇರುವ ಅರ್ಥಗಳನ್ನು ಸರಳ ಭಾಷೆಯಲ್ಲಿ ನಮೂದಿಸುವ ಗುರಿ ಹೊಂದಲಾಗಿದೆ. ತೆರಿಗೆದಾರರಿಗೆ ಸುಲಭವಾಗಿ ಅರ್ಥೈಸುವ ಆಶಯ ಹೊಂದಲಾಗಿದೆ. ಕಾಯ್ದೆಯಡಿ ಇರುವ ಕೆಲವು ಷರತ್ತುಗಳನ್ನು ಬದಲಾಯಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
‘ನ್ಯಾಯದ ತತ್ವ ಪರಿಪಾಲನೆಯೇ ಹೊಸ ಆದಾಯ ತೆರಿಗೆ ಮಸೂದೆಯ ಆಶಯವಾಗಿದೆ. ‘ಮೊದಲು ನಂಬಿಕೆ ಇಡಿ; ಬಳಿಕ ಪರೀಕ್ಷಿಸಿ’ ಎಂಬ ಪರಿಕಲ್ಪನೆ ಇದಾಗಿದೆ ಎಂದು ನಿರ್ಮಲಾ ಹೇಳಿದರು. ಈಗಿರುವ ಕಾಯ್ದೆಯ ಅರ್ಧದಷ್ಟು ಪುಟಗಳನ್ನು ತಗ್ಗಲಿದೆ. ಪ್ರತಿ ಅಧ್ಯಾಯ ಮತ್ತು ಷರತ್ತುಗಳನ್ನು ಸರಳೀಕರಿಸಲಾಗುವುದು. ತೆರಿಗೆದಾರರು ಮತ್ತು ತೆರಿಗೆ ಪಾವತಿ ಸಂಸ್ಥೆಗಳು ಸುಲಭವಾಗಿ ಅರ್ಥೈಸಿಕೊಳ್ಳಲು ನೆರವಾಗುವಂತೆ ರೂಪಿಸಲಾಗುತ್ತದೆ ಎಂದರು. ಹೊಸ ಮಸೂದೆಯನ್ನು ಸಂಸದೀಯ ಸ್ಥಾಯಿಸಮಿತಿಯ ಪರಾಮರ್ಶೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು. ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರವು ತೆರಿಗೆಗೆ ಸಂಬಂಧಿಸಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ಅಡೆತಡೆ ಇಲ್ಲದೆ ಮಸೂದೆಗೆ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.