ನವದೆಹಲಿ: ಜಾಗತಿಕ ಅರ್ಥವ್ಯವಸ್ಥೆಯಲ್ಲಿನ ಅನಿಶ್ಚಿತ ಪರಿಸ್ಥಿತಿಗಳ ನಡುವೆ ದೇಶದ ಆರ್ಥಿಕ ಬೆಳವಣಿಗೆಗೆ ಶಕ್ತಿ ನೀಡುವ ಉದ್ದೇಶದಿಂದ ಆದಾಯ ತೆರಿಗೆ ಕಡಿತದ ಕ್ರಮವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ವರ್ಷಕ್ಕೆ ₹12.75 ಲಕ್ಷದವರೆಗೆ ಆದಾಯ ಹೊಂದಿರುವ ವ್ಯಕ್ತಿಗಳ ಆದಾಯ ತೆರಿಗೆ ಹೊರೆಯು ಹೊಸ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಹೊಸ ಆರ್ಥಿಕ ವರ್ಷದಿಂದ (ಏಪ್ರಿಲ್ 1) ಸೊನ್ನೆಗೆ ಇಳಿಯಲಿದೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಇದುವರೆಗೆ ₹7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇರಲಿಲ್ಲ. ₹12 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರಿಗೆ ಅನ್ವಯವಾಗುವ ತೆರಿಗೆ ಹಂತಗಳಲ್ಲಿ ಬದಲಾವಣೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರಿಂದಾಗಿ ವರ್ಷಕ್ಕೆ ₹25 ಲಕ್ಷದವರೆಗೆ ಆದಾಯ ಹೊಂದಿರುವವರು ಪಾವತಿಸಬೇಕಿದ್ದ ಆದಾಯ ತೆರಿಗೆ ಮೊತ್ತದಲ್ಲಿ ₹1.1 ಲಕ್ಷದವರೆಗೆ ಉಳಿತಾಯ ಆಗಲಿದೆ.
ತೆರಿಗೆ ವಿನಾಯಿತಿ ಹಾಗೂ ತೆರಿಗೆ ಹಂತಗಳಲ್ಲಿನ ಬದಲಾವಣೆಯ ಕಾರಣದಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ₹1 ಲಕ್ಷ ಕೋಟಿ ವರಮಾನ ಕಡಿಮೆ ಆಗಲಿದೆ. ಆದರೆ ಈ ಕ್ರಮಗಳಿಂದಾಗಿ 6.3 ಕೋಟಿ ಜನರಿಗೆ ಅನುಕೂಲ ಆಗಲಿದೆ ಎಂದು ಸಚಿವೆ ನಿರ್ಮಲಾ ಅವರು ಹೇಳಿದ್ದಾರೆ.
‘ಹೊಸ ವ್ಯವಸ್ಥೆಯು ಮಧ್ಯಮ ವರ್ಗದ ಜನ ಪಾವತಿಸಬೇಕಿದ್ದ ತೆರಿಗೆ ಮೊತ್ತವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಅವರ ಕೈಯಲ್ಲಿ ಹೆಚ್ಚು ಹಣ ಉಳಿಯಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಕುಟುಂಬಗಳಿಂದ ಬರುವ ಬೇಡಿಕೆ, ಅವರಿಂದ ಆಗುವ ಉಳಿತಾಯ ಹಾಗೂ ಹೂಡಿಕೆಗಳು ಹೆಚ್ಚಲಿವೆ’ ಎಂದು ನಿರ್ಮಲಾ ಅವರು ಹೇಳಿದ್ದಾರೆ.
ಕೇಂದ್ರದ ವರಮಾನದಲ್ಲಿ ತುಸು ಇಳಿಕೆ ಆಗುವ ಕಾರಣದಿಂದಾಗಿ, ಬಂಡವಾಳ ವೆಚ್ಚಗಳನ್ನು ಅಲ್ಪ ಪ‍್ರಮಾಣದಲ್ಲಿ ಮಾತ್ರ ಹೆಚ್ಚಿಸಲಾಗಿದೆ.
ಹೆಚ್ಚುವರಿಯಾಗಿ 1 ಕೋಟಿ ಜನರಿಗೆ ಶೂನ್ಯ ತೆರಿಗೆ: ಬಜೆಟ್ ಮಂಡನೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ನಿರ್ಮಲಾ ಅವರು, ‘ಆದಾಯ ತೆರಿಗೆ ಹಂತಗಳಲ್ಲಿ ಬದಲಾವಣೆ ತರುವ ಮೂಲಕ ಸರ್ಕಾರವು ಜನರ ಕೈಯಲ್ಲಿ ಗಣನೀಯ ಪ್ರಮಾಣದ ಹಣ ಉಳಿಯುವಂತೆ ಮಾಡಿದೆ. ಈ ಕ್ರಮಗಳಿಂದಾಗಿ ಹೆಚ್ಚುವರಿಯಾಗಿ 1 ಕೋಟಿ ಜನರ ತೆರಿಗೆ ಹೊರೆ ಶೂನ್ಯಕ್ಕೆ ಇಳಿಯಲಿದೆ’ ಎಂದು ಹೇಳಿದ್ದಾರೆ.
ಈ ಕ್ರಮಗಳ ಮೂಲಕ ಕೇಂದ್ರ ಸರ್ಕಾರವು ಜನರ ದನಿಗೆ ಸ್ಪಂದಿಸುವ ಕೆಲಸ ಮಾಡಿದೆ ಎಂದು ಅವರು ಹೇಳಿದ್ದಾರೆ. ಮಧ್ಯಮ ವರ್ಗಕ್ಕೆ ನೆರವಾಗುವ ಉದ್ದೇಶದಿಂದ ತೆರಿಗೆ ಕಡಿಮೆ ಮಾಡಲಾಗಿದೆ ಎಂದಿದ್ದಾರೆ.
ಆದಾಯ ತೆರಿಗೆ ಪಾವತಿಸುವವರ ಪೈಕಿ ಶೇ 75ರಷ್ಟು ಮಂದಿ ಹೊಸ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಈ ವ್ಯವಸ್ಥೆಗೆ ಬರುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.