ಬೆಂಗಳೂರು: ‘ಅತಿಸಣ್ಣ, ಸಣ್ಣ ಉದ್ಯಮಗಳ (ಎಂಎಸ್‌ಇ) ಬೆಳವಣಿಗೆಗೆ ಬಜೆಟ್ ಪೂರಕವಾಗಿದೆ. ಇವುಗಳಿಗೆ ಸಾಲ, ಕೌಶಲ ಅಭಿವೃದ್ಧಿ, ನಾವೀನ್ಯ ಮತ್ತು ವ್ಯವಹಾರ ಉತ್ತೇಜನಕ್ಕೆ ಆದ್ಯತೆ ಸಿಕ್ಕಿದೆ’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ಹೇಳಿದ್ದಾರೆ.
ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ (ಎಂಎಸ್‌ಎಂಇ) ವರ್ಗೀಕರಣ ಮಾನದಂಡವನ್ನು ಪರಿಷ್ಕರಿಸುವುದು ಒಳ್ಳೆಯ ಸುಧಾರಣೆಯಾಗಿದೆ. ಇದರಿಂದ ಸರ್ಕಾರದ ಪ್ರಯೋಜನ ಪಡೆದುಕೊಂಡು ಸಣ್ಣ ಕೈಗಾರಿಕೆಗಳನ್ನು ವಿಸ್ತರಿಸಲು ಸಹಕಾರಿಯಾಗಲಿದೆ. ಹೂಡಿಕೆ ಮತ್ತು ವಹಿವಾಟು ಮಿತಿಯನ್ನು ಕ್ರಮವಾಗಿ 2.5 ಮತ್ತು 2 ಪಟ್ಟು ಹೆಚ್ಚಿಸುವ ಮೂಲಕ ಸರ್ಕಾರವು ಎಂಎಸ್‌ಎಂಇ ಬೆಳವಣಿಗೆಗೆ ತನ್ನ ಬದ್ಧತೆ ಪ್ರದರ್ಶಿಸಿದೆ ಎಂದು ಹೇಳಿದ್ದಾರೆ.
ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಕ್ರೆಡಿಟ್ ಗ್ಯಾರಂಟಿಯನ್ನು ₹5 ಕೋಟಿಯಿಂದ ₹10 ಕೋಟಿಗೆ ಹೆಚ್ಚಿಸಿದೆ. ಇದರಿಂದ ಮುಂದಿನ ಐದು ವರ್ಷಗಳಲ್ಲಿ ಈ ವಲಯಕ್ಕೆ ಹೆಚ್ಚುವರಿಯಾಗಿ ₹1.5 ಲಕ್ಷ ಕೋಟಿ ಸಾಲ ದೊರೆಯಲಿದೆ ಎಂದಿದ್ದಾರೆ.
ಜನ ವಿಶ್ವಾಸ್ ಮಸೂದೆ 2.0ರ ಪರಿಚಯಕ್ಕೆ ನಿರ್ಧರಿಸಿರುವುದು ಎಂಎಸ್‌ಇಗಳ ಮೇಲಿನ ನಿಯಂತ್ರಕ ಹೊರೆಗಳನ್ನು ಕಡಿಮೆ ಮಾಡಲಿದೆ. ಇದು ಹೆಚ್ಚು ವ್ಯಾಪಾರ ಸ್ನೇಹಿ ವಾತಾವರಣ ಸೃಷ್ಟಿಸಲಿದೆ. ಹೂಡಿಕೆಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.