ADVERTISEMENT

ಬಜೆಟ್‌ ವಿಶ್ಲೇಷಣೆ | ಮಧ್ಯಮ ವರ್ಗದ ಕೈಗೆ ದುಡ್ಡು ಕೊಟ್ಟ ಬಜೆಟ್

ಕಾವ್ಯ ಡಿ.
Published 1 ಫೆಬ್ರುವರಿ 2025, 23:45 IST
Last Updated 1 ಫೆಬ್ರುವರಿ 2025, 23:45 IST
<div class="paragraphs"><p>ದುಡ್ಡು </p></div>

ದುಡ್ಡು

   

ವೈಯಕ್ತಿಕ ಆದಾಯ ತೆರಿಗೆ ಪಾವತಿಸುವ ಜೊತೆಗೆ ಬೆಲೆ ಏರಿಕೆಯ ಬಿಸಿಯನ್ನೂ ಸಹಿಸಿಕೊಂಡು ಬದುಕಿನ ಬಂಡಿ ಎಳೆಯುತ್ತಿದ್ದ ದೇಶದ ಮಧ್ಯಮ ವರ್ಗದ ಜನರಿಗೆ  ಬಜೆಟ್‌‌ನಲ್ಲಿ ದೊಡ್ಡ ಪರಿಹಾರ ಸಿಕ್ಕಿದೆ. ಜನಸಾಮಾನ್ಯರ ಬಹುದಿನಗಳ ಬೇಡಿಕೆಯಾಗಿದ್ದ ಆದಾಯ ತೆರಿಗೆ ಮಿತಿ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ಪುರಸ್ಕರಿಸಿದ್ದಾರೆ.

‘ನಾನು ಮಿಡಲ್ ಕ್ಲಾಸ್‌ಗೆ ಸೇರಿದ್ದೇನೆ. ಅವರ ಕಷ್ಟ ನನಗೆ ಅರ್ಥವಾಗುತ್ತದೆ’ ಎಂದು ಹಲವು ಪತ್ರಿಕಾಗೋಷ್ಠಿಗಳಲ್ಲಿ ಹೇಳುತ್ತಿದ್ದ ಅವರು, ನಿಜ ಅರ್ಥದಲ್ಲಿ ಈ ಬಾರಿ ಮಧ್ಯಮ ವರ್ಗದವರ ಜೇಬಿಗೆ ಒಂದಷ್ಟು ದುಡ್ಡು ತುಂಬಿಸುವ ಕೆಲಸ ಮಾಡಿದ್ದಾರೆ. ಹೊಸ ತೆರಿಗೆ ಪದ್ಧತಿ ಆಯ್ದುಕೊಳ್ಳುವವರಿಗೆ ವಾರ್ಷಿಕ ₹12 ಲಕ್ಷದ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ ಎಂದು ಪ್ರಕಟಿಸಿದ್ದಾರೆ. ಸಂಬಳ ಪಡೆಯುವವರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ₹75 ಸಾವಿರ ಒಳಗೊಂಡು ತೆರಿಗೆಗೆ ಒಳಪಡದ ಮಿತಿಯನ್ನು ₹12.75 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಸಾಮಾನ್ಯರ ತೆರಿಗೆ ಹೊರೆಯನ್ನು ಕಾಲಕಾಲಕ್ಕೆ ಒಂದಿಷ್ಟು ತಗ್ಗಿಸುತ್ತಾ ಬಂದಿದೆ ಎನ್ನುವುದನ್ನು ಅಂಕಿ-ಅಂಶ ಹೇಳುತ್ತವೆ. 2014ರಲ್ಲಿ ಮೊದಲ ಬಾರಿಗೆ ಅಂದಿನ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ತೆರಿಗೆ ರಹಿತ ಸ್ಲ್ಯಾಬ್ ಮಿತಿಯನ್ನು ₹2 ಲಕ್ಷದಿಂದ ₹2.5 ಲಕ್ಷಕ್ಕೆ ಏರಿಕೆ ಮಾಡಿದ್ದರು. ನಂತರ 2019ರಲ್ಲಿ ತೆರಿಗೆ ರಹಿತ ಆದಾಯದ ಮಿತಿಯನ್ನು ₹5 ಲಕ್ಷಕ್ಕೆ ಹೆಚ್ಚಿಸಲಾಯಿತು. 2023ರಲ್ಲಿ ಈ ಮಿತಿಯು ₹7 ಲಕ್ಷಕ್ಕೆ ಜಿಗಿಯಿತು.

2024ರಲ್ಲಿ ಕೇಂದ್ರ ಸರ್ಕಾರ ಆದಾಯ ತೆರಿಗೆಯ ಹೊರೆ ಇಳಿಸುವ ಮನಸ್ಸು ಮಾಡಿರಲಿಲ್ಲ. ಬೆಲೆ ಏರಿಕೆಯ ಕಾಲದಲ್ಲಿ ಆದಾಯ ತೆರಿಗೆ ಭಾರ ತಗ್ಗಿಸದ ಸರ್ಕಾರದ ನೀತಿಯು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಸರ್ಕಾರದ ದುಬಾರಿ ತೆರಿಗೆ ನೀತಿಗೆ ಟೀಕೆ ವ್ಯಕ್ತವಾಗಿತ್ತು. ಇದೆಲ್ಲವನ್ನೂ ಅರಿತಿರುವ ಸರ್ಕಾರ ಕೊನೆಗೂ ಈ ಬಾರಿಯ ಬಜೆಟ್‌ನಲ್ಲಿ ಮಧ್ಯಮವರ್ಗದ ಜನರ ತೆರಿಗೆ ಭಾರ ಕಡಿಮೆ ಮಾಡಿದ್ದಾರೆ.

ಎಷ್ಟು ಇಳಿಯಲಿದೆ ತೆರಿಗೆ ಭಾರ?: ₹12 ಲಕ್ಷಕ್ಕಿಂತ ಹೆಚ್ಚಿನ ಆದಾಯ ಗಳಿಸುವವರಿಗೂ ತೆರಿಗೆ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಆದಾಯ ತೆರಿಗೆ ಸ್ಲ್ಯಾಬ್ ಮಿತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಹೊಸ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆದಾರ ಎಷ್ಟೇ ಆದಾಯ ಪಡೆದರೂ ಮೊದಲ ₹4 ಲಕ್ಷದ ವರೆಗಿನ ಗಳಿಕೆಗೆ ಯಾವುದೇ ತೆರಿಗೆ ಇರುವುದಿಲ್ಲ. 

ಹೊಸ ತೆರಿಗೆ ಸ್ಲ್ಯಾಬ್ ಮಿತಿಗಳ ಘೋಷಣೆಯಿಂದ ₹12 ಲಕ್ಷ ಆದಾಯ ಪಡೆಯುವ ವ್ಯಕ್ತಿಗೆ ₹80 ಸಾವಿರ, ₹18 ಲಕ್ಷ ಆದಾಯವಿರುವ ವ್ಯಕ್ತಿಗೆ ₹70 ಸಾವಿರ ಮತ್ತು ₹25 ಲಕ್ಷ ಆದಾಯ ಇರುವವರಿಗೆ ₹1.10 ಲಕ್ಷ ತೆರಿಗೆ ಉಳಿತಾಯವಾಗಲಿದೆ.

ಮಧ್ಯಮ ವರ್ಗ ಸ್ನೇಹಿ ತೆರಿಗೆ ನೀತಿಗೆ ಮುನ್ನುಡಿ: ಬಜೆಟ್ ಘೋಷಣೆಗಳಲ್ಲಿ ಸದಾ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದ ಮಧ್ಯಮ ವರ್ಗದ ಬಗ್ಗೆ ಈ ಬಾರಿಯ ಬಜೆಟ್‌ನಲ್ಲಿ ಸಾಕಷ್ಟು ಉಲ್ಲೇಖವಿದೆ. ನಿರ್ಮಲಾ ಮಂಡಿಸಿದ ಬಜೆಟ್ ಭಾಷಣದ ಐದನೇ ಸಾಲಿನಲ್ಲೇ ಮಧ್ಯಮ ವರ್ಗದ ಖರೀದಿ ಸಾಮರ್ಥ್ಯ ಹೆಚ್ಚಿಸುವುದು ಬಜೆಟ್‌ನ ಮೂಲ ಮಂತ್ರಗಳಲ್ಲಿ ಒಂದಾಗಿದೆ ಎಂದು ಪ್ರಸ್ತಾಪಿಸಲಾಗಿದೆ.

ಆಯವ್ಯಯ ಪ್ರತಿಯಲ್ಲಿ ಒಟ್ಟು ಏಳು ಬಾರಿ ‘ಮಧ್ಯಮ ವರ್ಗ’ ಎನ್ನುವ ಪದ ಬಳಕೆಯಾಗಿದೆ. ಇದೆಲ್ಲದರ ಜೊತೆ ಮುಂದಿನ ವಾರವೇ ಹೊಸ ಆದಾಯ ತೆರಿಗೆ ಮಸೂದೆ ಮಂಡಿಸುವುದಾಗಿ ಹೇಳಿದ್ದಾರೆ. ಮಧ್ಯಮ ವರ್ಗ ಮತ್ತು ಜನಸ್ನೇಹಿ ಆದಾಯ ತೆರಿಗೆ ನೀತಿಗಳನ್ನು ತರುವುದೇ ಇದರ ಉದ್ದೇಶ ಎಂದು ತಿಳಿಸಿದ್ದಾರೆ. ಈ ನಡುವೆ ಆದಾಯ ತೆರಿಗೆ ಭಾರ ಇಳಿಸುವ ಸರ್ಕಾರದ ನಿರ್ಧಾರದಿಂದ ಬೊಕ್ಕಸಕ್ಕೆ ₹1 ಲಕ್ಷ ಕೋಟಿ ಹೊರೆ ಬೀಳುತ್ತದೆ. ಅದನ್ನು ಸರ್ಕಾರ ಹೇಗೆ ಭರಿಸಿಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಸದ್ಯದ ಮಟ್ಟಿಗೆ ಮಧ್ಯಮ ವರ್ಗದ ಮಂದಿಗಂತೂ ಈ ಸಲದ ಬಜೆಟ್ ಬಂಪರ್ ಕೊಡುಗೆ ನೀಡಿದೆ.

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)

ಮತ್ತಷ್ಟು ಸಿಹಿ ಸುದ್ದಿ ಏನು?

ಈ ಬಾರಿಯ ಬಜೆಟ್‌ನಲ್ಲಿ ಮೂಲದಲ್ಲೇ ತೆರಿಗೆ ಕಡಿತದ (ಟಿಡಿಎಸ್) ವಾರ್ಷಿಕ ಮಿತಿಯನ್ನು ಹಿರಿಯ ನಾಗರಿಕರಿಗೆ ₹50 ಸಾವಿರದಿಂದ ₹1 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಬಾಡಿಗೆ ಮೇಲಿನ ವಾರ್ಷಿಕ ಟಿಡಿಎಸ್ ಮಿತಿಯನ್ನು ₹2.40 ಲಕ್ಷದಿಂದ ₹6 ಲಕ್ಷಕ್ಕೆ ಪರಿಷ್ಕರಿಸಲಾಗಿದೆ. ಸರ್ಕಾರದ ಈ ಕ್ರಮದಿಂದ ಸಣ್ಣ ತೆರಿಗೆದಾರರಿಗೆ ಅನುಕೂಲವಾಗಲಿದೆ.

ಇನ್ನು ಹಣ ಸಂದಾಯಕ್ಕೆ ಮೂಲದಲ್ಲೇ ತೆರಿಗೆ ಸಂಗ್ರಹ (ಟಿಸಿಎಸ್) ಮಿತಿಯನ್ನು ₹7 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಜೊತೆಗೆ, ಶಿಕ್ಷಣದ ಉದ್ದೇಶಕ್ಕೆ ಮಾಡುವ ಹಣ ಸಂದಾಯಕ್ಕೆ ಮೂಲದಲ್ಲೇ ತೆರಿಗೆ ಸಂಗ್ರಹ (ಟಿಸಿಎಸ್) ಮಾಡುವುದನ್ನು ರದ್ದುಪಡಿಸಲಾಗುತ್ತದೆ. ಇನ್ನು ಈ ಹಿಂದೆ ಎರಡು ಮನೆಗಳಿದ್ದ ಪಕ್ಷದಲ್ಲಿ ಒಂದು ಮನೆಯನ್ನು ಮಾತ್ರ ಸ್ವಂತಕ್ಕೆ ಬಳಸುತ್ತಿದ್ದೇವೆ ಎಂದು ತೋರಿಸಲು ತೆರಿಗೆ ನಿಯಮದಲ್ಲಿ ಅವಕಾಶವಿತ್ತು. ಎರಡನೇ ಮನೆಯನ್ನು ಸ್ವಂತಕ್ಕೆ ಬಳಸುತ್ತಿದ್ದೇವೆ. ಅದರಿಂದ ಆದಾಯ ಬರುತ್ತಿಲ್ಲ ಎಂದು ವಿನಾಯಿತಿ ಪಡೆದುಕೊಳ್ಳಬೇಕಾದರೆ ಸಾಕಷ್ಟು ನಿಬಂಧನೆಗಳನ್ನು ಪೂರೈಸಬೇಕಿತ್ತು.

ಆದರೆ, ಈ ಬಜೆಟ್‌ನಲ್ಲಿ ಯಾವುದೇ ನಿಬಂಧನೆಗಳು ಇಲ್ಲದೆ ಎರಡು ಮನೆಗಳನ್ನು ಸ್ವಂತಕ್ಕೆ ಬಳಸುತ್ತಿದ್ದೇವೆ. ಅದರಿಂದ ಆದಾಯವಿಲ್ಲ ಎಂದು ತಿಳಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.