ಆದಾಯ ತೆರಿಗೆ ಮಿತಿಯಲ್ಲಿನ ಬದಲಾವಣೆಗಳ ಕಾರಣದಿಂದಾಗಿ 2025–26ನೇ ಹಣಕಾಸು ವರ್ಷದ ಕೇಂದ್ರ ಸರ್ಕಾರದ ಬಜೆಟ್ ದೇಶದ ಮಧ್ಯಮ ವರ್ಗದ ಜನರನ್ನೇ ಹೆಚ್ಚು ಕೇಂದ್ರೀಕರಿಸಿದೆ. ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡುವ ಪ್ರಸ್ತಾವಗಳೂ ಬಜೆಟ್‌ನಲ್ಲಿವೆ. ಮೂಲಸೌಕರ್ಯ ಅಭಿವೃದ್ಧಿಗೂ ಧಾರಾಳವಾಗಿ ಅನುದಾನ ಒದಗಿಸುವ ಮೂಲಕ ಹೆಚ್ಚಿನ ಒತ್ತು ನೀಡಲಾಗಿದೆ. ಅನುದಾನ ಹಂಚಿಕೆಯು ಧಾರಾಳ ಅನಿಸಿದರೂ (ಕಳೆದ ವರ್ಷದ ₹ 11.11 ಲಕ್ಷ ಕೋಟಿಗೆ ಹೋಲಿಸಿದರೆ ಈ ವರ್ಷದ ₹ 11.21 ಲಕ್ಷ ಕೋಟಿ), ವಾಸ್ತವಿಕವಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚೇನೂ ಬದಲಾವಣೆಗಳು ಇಲ್ಲ. ಇದು, ಒದಗಿಸಿದ ಅನುದಾನವನ್ನು ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಬಳಸುವುದರಲ್ಲಿ ಇರುವ ಸಾಮರ್ಥ್ಯದ ಕೊರತೆಯನ್ನು ಎತ್ತಿ ತೋರಿಸುತ್ತದೆ. ಸರ್ಕಾರದ ಪಾತ್ರವನ್ನು ಬಜೆಟ್‌ನಲ್ಲಿ ಒತ್ತಿ ಹೇಳಿದ್ದು, ಸಾಂಸ್ಥಿಕ ಗುಣಮಟ್ಟ ವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದ ಸೇವೆಗಳ ವಿತರಣೆಯ ವಿಷಯಗಳಲ್ಲಿ ಇದು ಹೆಚ್ಚು ಅರ್ಥಪೂರ್ಣವಾದುದು.
ಮೂಲಸೌಕರ್ಯ ಅಭಿವೃದ್ಧಿಯ ವೇಗವನ್ನು ನಿರಂತರವಾಗಿ ಕಾಯ್ದುಕೊಳ್ಳುವುದು ಮತ್ತು ಸುಸ್ಥಿರ ನಿರ್ಮಾಣ ಪದ್ಧತಿಗಳನ್ನು ಉತ್ತೇಜಿಸುವ ಅಗತ್ಯವನ್ನು ಸರ್ಕಾರವು ಬಜೆಟ್‌ನಲ್ಲಿ ಗುರುತಿಸಿದೆ. ಆದರೆ, ಅನುಷ್ಠಾನದ ಹಂತದಲ್ಲಿ ಖಚಿತವಾದ ಮಾನದಂಡಗಳ ಅಗತ್ಯವೂ ಇದೆ ಎಂಬುದನ್ನು ಹೇಳಿದೆ. ಈ ಬಜೆಟ್‌ನಲ್ಲಿ ರಸ್ತೆಗಳು, ರೈಲ್ವೆ ಮತ್ತು ಸಂವಹನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅತಿ ಕಡಿಮೆ ಪ್ರಸ್ತಾಪವಿದೆ. ಕೊನೆಯ ಹಂತದ ಸಂಪರ್ಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಡೆಗಣಿಸಿದಂತಿದೆ. ಬಹು ಆಯಾಮದಲ್ಲಿ ಧನಾತ್ಮಕ ಪರಿಣಾಮ ಬೀರಬಲ್ಲ ಮೂಲಸೌಕರ್ಯ ಯೋಜನೆಗಳನ್ನು ಸರ್ಕಾರದಿಂದ ಅನುಷ್ಠಾನಗೊಳಿಸುವ ಘೋಷಣೆಗಳ ಜೊತೆಯಲ್ಲೇ ಸಾರ್ವಜನಿಕ– ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಉತ್ತೇಜನ ನೀಡುವ ಪ್ರಸ್ತಾವ ಈ ಬಜೆಟ್‌ನಲ್ಲಿದೆ.
2024–25ರ ಆರ್ಥಿಕ ಸಮೀಕ್ಷೆಯಲ್ಲಿ ಗುರುತಿಸಿದಂತೆ ಭಾರತವು ಜಗತ್ತಿನ ಉತ್ಪಾದನಾ ವಲಯದಲ್ಲಿ ಶೇಕಡ 2.8ರಷ್ಟು ಪಾಲು ಹೊಂದಿದ್ದು, ಇದೇ ಕ್ಷೇತ್ರದಲ್ಲಿ ಚೀನಾದ ಪಾಲು ಶೇ 28.8ರಷ್ಟಿದೆ. ಭಾರತವು ಈ ವಲಯದಲ್ಲಿ ಸಾಕಷ್ಟು ಎತ್ತರಕ್ಕೆ ಏರಲು ಅವಕಾಶಗಳಿವೆ. ನಿರಂತರ ಪೂರೈಕೆ ಜಾಲದಲ್ಲಿನ ಅಡೆತಡೆಗಳು, ರಾಜಕೀಯ ಅಸ್ಥಿರತೆ, ಮಾಲಿನ್ಯ ತಗ್ಗಿಸಲು ಇರುವ ಒತ್ತಡಗಳು, ಪುನರ್‌ಬಳಕೆ ಮಾಡಬಹುದಾದ ಸಂಪನ್ಮೂಲಗಳತ್ತ ಹೆಚ್ಚಿನ ಒತ್ತು, ಹೆಚ್ಚುತ್ತಿರುವ ಸಾಗಾಣಿಕೆ ವೆಚ್ಚ ಮತ್ತು ಪ್ರಾದೇಶಿಕ ಸಂಘರ್ಷಗಳ ದುಷ್ಪರಿಣಾಮಗಳೂ ಸೇರಿದಂತೆ ಹಲವು ಬಗೆಯ ಜಾಗತಿಕ ಸವಾಲುಗಳೂ ಇವೆ. ದೇಶೀಯವಾಗಿ ನಿಯಂತ್ರಣ ಕ್ರಮಗಳ ಸಡಿಲಿಕೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು, ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಕಾರ್ಯತಂತ್ರ, ಸಣ್ಣ ಉದ್ದಿಮೆಗಳ ಹೆಚ್ಚಿನ ಪ್ರೋತ್ಸಾಹ ನೀಡಬೇಕಾದ ಅಗತ್ಯವೂ ಇದೆ.
ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 26ರಷ್ಟು ಮಂದಿ 10ರಿಂದ 24ವರ್ಷ ವಯಸ್ಸಿನ ಮಧ್ಯದವರಾಗಿದ್ದು, ಅತ್ಯುತ್ತಮ ಮಾನವ ಸಂಪನ್ಮೂಲವನ್ನು ರೂಪಿಸಿಕೊಳ್ಳಬಹುದಾದ ಸುವರ್ಣಾವಕಾಶ ದೇಶದ ಮುಂದಿದೆ. ಉದ್ಯೋಗ ಸೃಷ್ಟಿ ಮತ್ತು ಉದ್ಯೋಗದ ಅರ್ಹತೆಯ ಖಾತರಿಗಳ ವಿಚಾರದಲ್ಲಿ ಎರಡು ಬಗೆಯ ನೀತಿಗಳ ಪ್ರಸ್ತಾಪ ಬಜೆಟ್‌ನಲ್ಲಿದೆ. ಆಟಿಕೆಗಳು, ಪಾದರಕ್ಷೆ ಮತ್ತು ಚರ್ಮೋದ್ಯಮ ಸೇರಿದಂತೆ ಕಾರ್ಮಿಕ ಕೇಂದ್ರಿತ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡುವುದು ಅವುಗಳಲ್ಲಿ ಒಂದು. ಕೌಶಲ ಅಭಿವೃದ್ಧಿಯ ಮೂಲಕ ತನ್ನ ಮಾನವ ಸಂಪನ್ಮೂಲಕ್ಕೆ ಉದ್ಯೋಗದ ಅರ್ಹತೆಯನ್ನು ಖಾತರಿಪಡಿಸುವುದು ಎರಡನೆಯದ್ದು. 2014ರ ಆರಂಭವಾದ ಐದು ಐಐಟಿಗಳಲ್ಲಿ ಹೆಚ್ಚುವರಿ ಮೂಲಸೌಕರ್ಯ ಒದಗಿಸುವ ಘೋಷಣೆಯು ಈ ದಿಸೆಯಲ್ಲಿ ಉಲ್ಲೇಖಿಸಲೇಬೇಕಾದ ಕ್ರಮ. ಆದರೆ, ಈ ಕುರಿತಂತೆ ಯಾವುದೇ ಖಚಿತವಾದ ಮಾಹಿತಿಯನ್ನು ಬಜೆಟ್‌ನಲ್ಲಿ ಒದಗಿಸಿಲ್ಲ. ಇದೇ ಉದ್ದೇಶದಿಂದ ಕೌಶಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಐದು ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಿಸುವುದಾಗಿ ಹಣಕಾಸು ಸಚಿವರು 2024ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಒಂದು ಕೋಟಿ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಯೋಜನೆಗೆ ಬಜೆಟ್‌ನಲ್ಲಿ ಒತ್ತು ನೀಡಿದ್ದು, ಇದರಿಂದ ಅವರ ಕೆಲಸದ ವಾತಾವರಣದಲ್ಲಿ ಸುಧಾರಣೆ ತರುವ ಗುರಿಯನ್ನು ಹೊಂದಿದೆ.
ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು (ಎಂಎಸ್‌ಎಂಇ) ‘ಸೆಕೆಂಡ್ ಎಂಜಿನ್’ ಎಂದು ಪರಿಗಣಿಸಿ ಹಲವು ಉತ್ತೇಜನಗಳನ್ನು ಪ್ರಕಟಿಸಲಾಗಿದೆ. ಎಂಎಸ್‌ಎಂಇಗಳ ಹೂಡಿಕೆ ಮತ್ತು ವಹಿವಾಟಿನ ಮಿತಿಯನ್ನು ಅನುಕ್ರಮವಾಗಿ ಎರಡು ಮತ್ತು ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ. ಸಾಲದ ಮಿತಿಯನ್ನು ₹ 5 ಕೋಟಿಯಿಂದ ₹ 10 ಕೋಟಿಗೆ ಏರಿಕೆ ಮಾಡಲಾಗಿದೆ. ಅತ್ಯುತ್ತಮವಾಗಿ ರಫ್ತು ಚಟುವಟಿಕೆ ನಡೆಸುವ ಎಂಎಸ್‌ಎಂಇಗಳಿಗೆ ನೀಡುವ ಅವಧಿ ಸಾಲದ ಮಿತಿಯನ್ನು ₹ 20 ಕೋಟಿಗೆ ಹೆಚ್ಚಿಸಲಾಗಿದೆ. ದಾಖಲೆಗಳ ನಿರ್ವಹಣೆಯಲ್ಲಿ ಏಕರೂಪತೆ ತರುವುದಕ್ಕಾಗಿ ಭಾರತ್ ಟ್ರೇಡ್ ನೆಟ್ ರೂಪಿಸುವಂತಹ ಉಪಕ್ರಮವನ್ನೂ ಘೋಷಿಸಲಾಗಿದೆ. ಪಾದರಕ್ಷೆ, ಚರ್ಮೋದ್ಯಮ ಮತ್ತು ಆಟಿಕೆ ಕ್ಷೇತ್ರಗಳಲ್ಲಿ ಉತ್ಪಾದನೆಯನ್ನು ಉತ್ತೇಜಿಸುವ ಘೋಷಣೆಗಳಿವೆ. ಆದರೆ, ಈ ಕುರಿತಂತೆ ಹೆಚ್ಚಿನ ಖಚಿತತೆ ಇನ್ನಷ್ಟೇ ದೊರಕಬೇಕಿದೆ.
ಬಿಹಾರದ ಹೊರತಾಗಿ ದೇಶದ ಯಾವುದೇ ರಾಜ್ಯಕ್ಕೂ ಕೈಗಾರಿಕಾ ಅಭಿವೃದ್ಧಿಗೆ ವಿಶೇಷವಾದ ನೆರವಿನ ಭರವಸೆ ದೊರಕಿಲ್ಲ. ಸುಲಲಿತ ವಹಿವಾಟಿನ ಅವಕಾಶಗಳ ಕುರಿತು ವಾಚ್ಯವಾದ ಘೋಷಣೆಗಳಿವೆ. ಅದಕ್ಕೆ ಪೂರಕವಾಗಿ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಘೋಷಿಸಲಾದ ಅನುದಾನವನ್ನು ಸದ್ಬಳಕೆ ಮಾಡಿ, ಸುಲಲಿತ ವಹಿವಾಟಿಗೆ ದೇಶವನ್ನು ಸಜ್ಜುಗೊಳಿಸಬೇಕಿದೆ.
* ಲೇಖಕರು ಅನುಕ್ರಮವಾಗಿ ಐಸೆಕ್ ಮತ್ತು ಪಿಇಎಸ್ ವಿಶ್ವವಿದ್ಯಾಲಯಗಳ ಬೋಧಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.