ನವದೆಹಲಿಯ ಕೃಷಿ ಜಮೀನಿನೊಂದರಲ್ಲಿ ಶನಿವಾರ ಸೋರೆಕಾಯಿ ಬೀಜದ ಬಿತ್ತನೆಯಲ್ಲಿ ತೊಡಗಿದ್ದ ಮಹಿಳೆ –ಎಎಫ್‌ಪಿ ಚಿತ್ರ
ಹತ್ತು ವಿಸ್ತೃತ ಕ್ಷೇತ್ರಗಳಿಗೆ ಗಮನ ನೀಡುವ ಮೂಲಕ ಸರ್ಕಾರವು ಅಭಿವೃದ್ಧಿಗೆ ಆದ್ಯತೆ ನೀಡಲಿದೆ ಎಂಬುದನ್ನು ಪ್ರಧಾನವಾಗಿ ಹೇಳುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣ ಆರಂಭಿಸಿದರು. ಅವರು ನೀಡಿದ ಪಟ್ಟಿಯಲ್ಲಿನ ಮೊದಲ ಎರಡು ಕ್ರಮಗಳು ‘ಕೃಷಿ ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು’ ಮತ್ತು ‘ಗ್ರಾಮೀಣ ಸಮೃದ್ಧಿಯನ್ನು, ಚೇತರಿಕೆ’ಯನ್ನು ಖಾತರಿಪಡಿಸುವುದು. ಆದರೆ, ಬಜೆಟ್ ವಿವರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ವಿಶ್ವಾಸ ಹೆಚ್ಚಿಸುವ ಅಂಶಗಳು ಕಾಣುವುದಿಲ್ಲ.
ಕೃಷಿ ಮತ್ತು ರೈತರ ಅಭಿವೃದ್ಧಿ ಇಲಾಖೆಗೆ 2025–26ಕ್ಕೆ ನಿಗದಿ ಮಾಡಿರುವ ಅನುದಾನವು 2024–25ರ ಪರಿಷ್ಕೃತ ಅಂದಾಜಿಗಿಂತ ಶೇಕಡ 3ರಷ್ಟು ಕಡಿಮೆ ಇದೆ. ಕೃಷಿ ಸಂಶೋಧನೆ ಮತ್ತು ಶಿಕ್ಷಣಕ್ಕೆ ಮೀಸಲಿರಿಸಿರುವ ಮೊತ್ತ ಕೂಡ ಕಳೆದ ವರ್ಷದ ಪರಿಷ್ಕೃತ ಅಂದಾಜಿಗಿಂತ ಕಡಿಮೆ ಇದೆ. ಇದು ಕಳವಳ ಮೂಡಿಸುವಂಥದ್ದು. ಏಕೆಂದರೆ, ಕೃಷಿ ಕ್ಷೇತ್ರದಲ್ಲಿನ ಸಂಶೋಧನೆಗಳು ಸುಸ್ಥಿರವಾದ ದೀರ್ಘಾವಧಿ ಪ್ರಯೋಜನಗಳನ್ನು ಒದಗಿಸುತ್ತವೆ. ಭೂಸಂಪನ್ಮೂಲ ಇಲಾಖೆಗೆ ನೀಡಿರುವ ಅನುದಾನ ಕೂಡ ಹಿಂದಿನ ವರ್ಷದ ಬಜೆಟ್ ಅಂದಾಜಿಗಿಂತ ಕಡಿಮೆ ಇದೆ. ಬೆಳೆ ವಿಮೆಯಂತಹ ಯೋಜನೆಗಳಿಗೆ ಅನುದಾನವು ಕಡಿಮೆ ಆಗಿದೆ.
‘ಪ್ರಧಾನ ಮಂತ್ರಿ ಧನಧಾನ್ಯ ಕೃಷಿ ಯೋಜನೆ’ಯನ್ನು ಸರ್ಕಾರ ರೂಪಿಸಲಿದೆ ಎಂದು ಸಚಿವೆ ಹೇಳಿದ್ದಾರೆ. ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು, ಕೃಷಿ ಬೆಳೆಗಳ ಸಂಖ್ಯೆಯನ್ನು ಏರಿಕೆ ಮಾಡಲು ಹಾಗೂ ಬೆಳೆ ದಾಸ್ತಾನು ವ್ಯವಸ್ಥೆಯನ್ನು ಬಲಪಡಿಸಲು ಈಗ ಚಾಲ್ತಿಯಲ್ಲಿರುವ ಯೋಜನೆಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತದೆ. ಹೀಗೆ ಮಾಡಲು ಮುಂದಾಗಿರುವುದು ಸರಿಯಾಗಿಯೇ ಇದೆ. ಏಕೆಂದರೆ ಒಂದೇ ವಿಷಯಕ್ಕೆ ಯೋಜನೆಗಳ ಸಂಖ್ಯೆ ಹೆಚ್ಚಾದಾಗ ಉತ್ತರದಾಯಿತ್ವ ಮತ್ತು ದಕ್ಷತೆ ಕಡಿಮೆಯಾಗುತ್ತದೆ, ಇದರಿಂದಾಗಿ ಉತ್ಪಾದಕತೆ ತಗ್ಗುತ್ತದೆ. ಆದರೆ, ಹೊಸ ಯೋಜನೆಯ ಯಶಸ್ಸು ಅದರ ಅನುಷ್ಠಾನವನ್ನು ಆಧರಿಸಿದೆ. ಬಜೆಟ್ ಭಾಷಣದಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಕೆಲವು ವಿವರಗಳಾದ ಅನುದಾನ, ಅದರ ಫಲಿತಾಂಶಗಳ ಬಗ್ಗೆ ಮಾತು ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಅವಕಾಶಗಳನ್ನು ಹೆಚ್ಚಿಸಲು ಮತ್ತು ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಕಡಿಮೆ ಇರುವುದನ್ನು ಸರಿಪಡಿಸಲು ಹಲವು ವಲಯಗಳನ್ನು ಒಳಗೊಳ್ಳುವ ‘ಗ್ರಾಮೀಣ ಸಮೃದ್ಧಿ ಮತ್ತು ಚೇತರಿಕೆ’ ಯೋಜನೆಯನ್ನು ಘೋಷಿಸಲಾಗಿದೆ. ಆದರೆ ಇದಕ್ಕೆ ಎಷ್ಟು ಅನುದಾನ, ಯೋಜನೆಯ ಪ್ರಯೋಜನಗಳು ಏನು ಎಂಬುದನ್ನು ವಿವರಿಸಿಲ್ಲ. ಎರಡೂ ಕ್ರಮಗಳು ರಾಜ್ಯಗಳ ಜೊತೆಗಿನ ಪಾಲುದಾರಿಕೆಯನ್ನು ಆಧರಿಸಿರುವ ಕಾರಣ, ಫಲಿತಾಂಶವು ರಾಜ್ಯ–ಕೇಂದ್ರ ಸಂಬಂಧದ ಮೇಲೆ ನಿಂತಿದೆ.
ಹಣಕಾಸು ಸಚಿವರು ಧಾನ್ಯಗಳ ಉತ್ಪಾದನೆಯಲ್ಲಿ ಆತ್ಮನಿರ್ಭರತೆಯನ್ನು ಸಾಧ್ಯವಾಗಿಸಲು, ತರಕಾರಿ ಮತ್ತು ಹಣ್ಣು ಬೆಳೆಗಳಿಗಾಗಿ ಯೋಜನೆ ಆರಂಭಿಸುವ, ಬಿಹಾರದಲ್ಲಿ ಮಖಾನಾ ಮಂಡಳಿ ಸ್ಥಾಪಿಸುವ, ಹತ್ತಿ ಉತ್ಪಾದಕತೆಗೆ ಪ್ರತ್ಯೇಕ ಮಿಷನ್ ಆರಂಭಿಸುವ ಘೋಷಣೆ ಮಾಡಿದ್ದಾರೆ. ಈ ಘೋಷಣೆಗಳಿಗೆ ₹100 ಕೋಟಿಯಿಂದ ₹1,000 ಕೋಟಿವರೆಗೆ ಅನುದಾನ ನಿಗದಿ ಮಾಡಲಾಗಿದೆ. ಆದರೆ ಕೃಷಿ ಬಜೆಟ್ ಗಾತ್ರ ಗಮನಿಸಿದರೆ, ಈ ಅನುದಾನ ಕಡಿಮೆ.
ರಸ್ತೆ ಸಂಪರ್ಕವು ಗ್ರಾಮೀಣಾಭಿವೃದ್ಧಿಯಲ್ಲಿ ಮಹತ್ವದ ಪಾತ್ರ ಹೊಂದಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ 2024–25ರ ಪರಿಷ್ಕೃತ ಅಂದಾಜನ್ನು ಅವಲೋಕಿಸಿದಾಗ, ಬಜೆಟ್ ಘೋಷಣೆಗಿಂತ ಅದು ಶೇ 25ರಷ್ಟು ಕಡಿಮೆ ಇದ್ದಿದ್ದು ಕಾಣುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪರಿಷ್ಕೃತ ಅಂದಾಜು ಶೇ 40ರಷ್ಟು ಕಡಿಮೆಯಾಗಿತ್ತು. ಅನುದಾನ ಕಡಿಮೆ ಆಗಿದ್ದುದು ಯೋಜನೆಗಳ ಅನುಷ್ಠಾನದಲ್ಲಿನ ಅಸಾಮರ್ಥ್ಯವನ್ನು ತೋರಿಸುತ್ತದೆ.
ಕೃಷಿ ಕ್ಷೇತ್ರವನ್ನು ನೆಚ್ಚಿಕೊಂಡಿರುವ ಜನರ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಕೃಷಿ ಮತ್ತು ಗ್ರಾಮೀಣ ಉತ್ಪಾದಕತೆಯನ್ನು ಬಲಪಡಿಸುವ ಕೆಲಸವನ್ನು ಬಜೆಟ್ ಮಾಡಬಹುದಿತ್ತು. ಉದಾಹರಣೆಗೆ, ಗ್ರಾಮೀಣ ಮತ್ತು ಕೃಷಿ ಸಂಬಂಧಿತ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬಹುದಿತ್ತು. ಬೆಲೆಯಲ್ಲಿನ ವ್ಯತ್ಯಾಸಗಳನ್ನು ಕಡಿಮೆ ಮಾಡುವುದಕ್ಕೆ ವ್ಯವಸ್ಥೆ ರೂಪಿಸಬಹುದಿತ್ತು. ಮಾರುಕಟ್ಟೆಯ ಬೇಡಿಕೆಗಳಿಗೆ ಅನುಗುಣವಾಗಿ ಸ್ಪಂದಿಸಲು ರೈತರಿಗೆ ಉತ್ತೇಜನ ನೀಡುವ ಕೆಲಸ ಆಗಬಹುದಿತ್ತು.
ಲೇಖಕ- ಬೆಂಗಳೂರಿನ ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ನಲ್ಲಿ ಸಹಾಯಕ ಪ್ರಾಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.