ADVERTISEMENT

Karnataka Budget 2025: ‘ಮತ ಬ್ಯಾಂಕ್’ ಭದ್ರತೆಗೆ ‘ಠೇವಣಿ’

ರಾಜೇಶ್ ರೈ ಚಟ್ಲ
Published 8 ಮಾರ್ಚ್ 2025, 1:07 IST
Last Updated 8 ಮಾರ್ಚ್ 2025, 1:07 IST
   

ಜೇನುಕುರುಬ, ಇರುಳಿಗ, ಕೊರಗ, ಸೋಲಿಗ, ಯರವ, ಪಣಿಯನ್‌, ಹಲಸರು, ಗೌಡಲು, ಸಿದ್ಧಿ, ಬೆಟ್ಟಕುರುಬ, ಕಾಡುಕುರುಬ, ಕುಡಿಯ ಮತ್ತು ಮಲೆಕುಡಿಯ ಹೀಗೆ 13 ಜನಾಂಗಗಳಿಗೆ ರಾಜ್ಯದ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ವಿಶೇಷ ನೇರ ನೇಮಕಾತಿ ಕೈಗೊಳ್ಳುವ ಮಹತ್ವದ ಘೋಷಣೆಯನ್ನು ಸಿದ್ದರಾಮಯ್ಯ ಮಾಡಿದ್ದಾರೆ

ತಮ್ಮ ಬೆನ್ನಿಗೆ ನಿಂತಿರುವ ಅಲ್ಪಸಂಖ್ಯಾತ, ದಲಿತ, ಹಿಂದುಳಿದ (ಅಹಿಂದ) ಸಮುದಾಯಗಳನ್ನು ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಪ್ಪಿಕೊಂಡಿದ್ದಾರೆ. ಆದರೆ, ಅದಕ್ಕೆ ಕಾರಣವೂ ಇದೆ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಇನ್ನೇನು ಹೊಸ್ತಿಲಲ್ಲಿದೆ. ಭರಪೂರ ಘೋಷಣೆಗಳ ‘ಠೇವಣಿ’ ಇಟ್ಟು ಬಹುದೊಡ್ಡ ಮತ ಬ್ಯಾಂಕ್ ಅನ್ನು ಇನ್ನಷ್ಟು ಭದ್ರಪಡಿಸುವುದು ಅವರ ಉದ್ದೇಶವಿರಬಹುದು.

ದುರ್ಬಲ ವರ್ಗದವರಿಗೆ ಈಗಾಗಲೇ ನೀಡುತ್ತಿರುವ ‘ಗ್ಯಾರಂಟಿ’ಗಳ ಜೊತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ಶ್ರಮಿಕರು ಹೀಗೆ ಎಲ್ಲ ವರ್ಗಗಳ ಅಭ್ಯುದಯದ ದೃಷ್ಟಿ ನೆಟ್ಟು ಸಿದ್ದರಾಮಯ್ಯ ಕಾರ್ಯಕ್ರಮಗಳನ್ನು ವಿಸ್ತರಿಸಿದ್ದಾರೆ. ಎಸ್‌ಸಿಎಸ್‌ಪಿ, ಟಿಎಸ್‌ಇಪಿ ಅಡಿ ಈ ಬಾರಿ ₹ 42,018 ಕೋಟಿ ಅನುದಾನ ಒದಗಿಸಿರುವ ಅವರು ಪರಿಶಿಷ್ಟರ ಕಲ್ಯಾಣ ಪರ ಬದ್ಧತೆಯನ್ನು ಅವರು ಯಥಾಸ್ಥಿತಿ ಮುಂದುವರಿಸಿದ್ದಾರೆ. ಆದರೆ, ಈ ಬಾರಿ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಅವರು, ಜನಸಂಖ್ಯೆ ಪರಿಗಣಿಸಿ 10 ವರ್ಷಗಳಿಂದ ಮೀಸಲಿಟ್ಟು ವ್ಯಯ ಮಾಡುತ್ತಲೇ ಬಂದಿರುವ ಈ ನಿಧಿಯ ಸದ್ಬಳಕೆ ಬಗ್ಗೆಯೂ ಮೌಲ್ಯಮಾಪನ ಮಾಡಲು ನಿರ್ಧರಿಸಿದ್ದಾರೆ. ಜೊತೆಗೆ, ವಿಧಾನ ಮಂಡಲ ಅಧಿವೇಶನದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಸಮಸ್ಯೆಗಳ ಬಗ್ಗೆ ವಿಶೇಷ ಚರ್ಚೆ ಮಾಡಲಾಗುವುದು ಎಂದೂ ಅವರು ಘೋಷಿಸಿದ್ದಾರೆ.

ADVERTISEMENT

ಪರಿಶಿಷ್ಟ ಪಂಗಡ ಸಮುದಾಯದ ಶೈಕ್ಷಣಿಕ ಉದ್ದೇಶಕ್ಕಾಗಿ ಸ್ಥಾಪಿಸಿರುವ ಬುಡಕಟ್ಟು ವಸತಿ ಶಾಲೆಗಳ ಉನ್ನತೀಕರಣ, ಹೊಸ ವಿದ್ಯಾರ್ಥಿ ನಿಲಯಗಳ ಆರಂಭ, ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿರುವ ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗದ ಮೂಲಸೌಕರ್ಯ ಒದಗಿಸಲು ₹ 200 ಕೋಟಿ ಅನುದಾನ ಹಂಚಿಕೆ ಮಾಡಿದ್ದಾರೆ.

ಕೆಟಿಟಿಪಿ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರದ ಕಾಮಗಾರಿಗಳಲ್ಲಿ ಹಾಗೂ ವಿವಿಧ ಇಲಾಖೆ, ನಿಗಮ ಹಾಗೂ ಸಂಸ್ಥೆಗಳಲ್ಲಿ ಖರೀದಿಸುವ ಸರಕು ಮತ್ತು ಸೇವೆಗಳಲ್ಲಿ ಮುಸ್ಲಿಂ ಗುತ್ತಿಗೆದಾರರಿಗೂ (ಪ್ರವರ್ಗ 2ಬಿ) ಶೇ 4 ಮೀಸಲಾತಿ ನೀಡಬೇಕೆಂಬ ಆ ಸಮುದಾಯದ ಸಚಿವರ, ಶಾಸಕರ, ಮುಖಂಡರ ಬೇಡಿಕೆಯನ್ನು ಈ ಬಜೆಟ್‌ನಲ್ಲಿ ಮುಖ್ಯಮಂತ್ರಿ ಈಡೇರಿಸಿದ್ದಾರೆ. ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಪ್ರವರ್ಗ 1 ಮತ್ತು 2ಎ ಗುತ್ತಿಗೆದಾರರಿಗೆ ಈ ಸೌಲಭ್ಯ ಈಗಾಗಲೇ ಲಭ್ಯವಿದೆ.

ದೇಶದಾದ್ಯಂತ ವಕ್ಫ್ ಆಸ್ತಿಗಳ ಗಲಾಟೆಯ ಮಧ್ಯೆಯೇ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಅನುದಾನ, ಹಜ್ ಭವನದಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕೇಂದ್ರ ಸ್ಥಾಪನೆ. 2,500 ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕಲೆ ಕಲಿಯಲು ಸೌಲಭ್ಯ. ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಸರಳ ವಿವಾಹಕ್ಕೆ ನಗದು ಪ್ರೋತ್ಸಾಹ, ಉರ್ದು ಶಾಲೆಗಳ ಉನ್ನತೀಕರಣ, ಅಲ್ಪಸಂಖ್ಯಾತ ಕಾಲೊನಿಗಳ ಅಭಿವೃದ್ಧಿ, ಮದರಸಾಗಳಲ್ಲಿ ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್ ಸೌಲಭ್ಯ, ಅಲ್ಪಸಂಖ್ಯಾತ ಯುವಕ ಯುವತಿಯರ ನವೋದ್ಯಮಕ್ಕೆ ಉತ್ತೇಜನ. ವಕ್ಫ್ ಖಾಲಿ ನಿವೇಶನಗಳಲ್ಲಿ ಮಹಿಳಾ ಕಾಲೇಜು... ಹೀಗೆ ‘ಕಣ್ಣು ಕುಕ್ಕುವಷ್ಟು’ ಕೊಡುಗೆಗಳು ಆಯವ್ಯಯದಲ್ಲಿವೆ. 

ಇದೇ ವೇಳೆ, ಜೈನ, ಬೌದ್ಧ, ಸಿಖ್, ಕ್ರಿಶ್ಚಿಯನ್ ಸಮುದಾಯಗಳ ಸಮಗ್ರ ಅಭಿವೃದ್ಧಿಗೂ ಅನುದಾನ ಮೀಸಲಿಡುವ ಮೂಲಕ, ‘ಅಲ್ಪಸಂಖ್ಯಾತರೆಂದರೆ ಬರೇ ಮುಸ್ಲಿಮರಷ್ಟೇ ಅಲ್ಲ’ ಎಂಬ ಬಿಜೆಪಿಗರ ಟೀಕೆಗೆ ಬಜೆಟ್‌ನಲ್ಲಿಯೇ ಉತ್ತರ ನೀಡಿದ್ದಾರೆ. 

ಕೆಐಎಡಿಬಿ ಕೈಗಾರಿಕಾ ನಿವೇಶನಗಳನ್ನು ಮಂಜೂರು ಮಾಡುವಾಗ ಪ್ರತಿ ಕೈಗಾರಿಕಾ ಪ್ರದೇಶದಲ್ಲಿ ಶೇ 20ರಷ್ಟು ಭೂಮಿಯನ್ನು ಹಿಂದುಳಿದ ವರ್ಗಗಳಿಗೆ (ಪ್ರವರ್ಗ 1, ಪ್ರವರ್ಗ 2ಎ, ಪ್ರವರ್ಗ 2ಬಿ) ಮೀಸಲಿರಿಸುವ ಪ್ರಸ್ತಾಪ ಬಜೆಟ್‌ನಲ್ಲಿದೆ. ಹಿಂದುಳಿದ ಸಮುದಾಯದವರನ್ನು ಕೈಗಾರಿಕಾ ವಲಯಕ್ಕೆ ಎಳೆದು ತರುವ ಉದ್ದೇಶದಿಂದ ಈ ಯೋಜನೆ ರೂಪಿಸಿರುವ ಅವರು, ನಿವೇಶನ ಹಂಚಿಕೆ ಸಂದರ್ಭದಲ್ಲಿ ನಿವೇಶನದ ಆರಂಭಿಕ ಠೇವಣಿ ಭರಿಸಿದ ನಂತರ ಬಾಕಿ ಹಣ ಪಾವತಿಸಲು ಒಂದು ವರ್ಷ ಕಾಲಾವಕಾಶ ನೀಡಲಾಗುವುದು ಎಂದೂ ಘೋಷಿಸಿದ್ದಾರೆ.  ಪರಿಶಿಷ್ಟರ ಕಾಲೊನಿಗಳಿಗೆ ಅಗತ್ಯ ಮೂಲಸೌಕರ್ಯ, ಶಾಲೆಗಳ ಉನ್ನತೀಕರಣ, ಹೊಸ ವಸತಿ ಶಾಲೆಗಳು, ಸ್ವಂತ ಕಟ್ಟಡ, ಪೀಠೋಪಕರಣಗಳಿಗೂ ಹಣ ಒದಗಿಸಿದ್ದಾರೆ.

* ಸಮಾಜ ಕಲ್ಯಾಣ ಇಲಾಖೆಯಡಿ ಬರುವ 34 ವಿದ್ಯಾರ್ಥಿನಿಲಯಗಳಿಗೆ ₹238 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ
 

* ಅಲ್ಪಸಂಖ್ಯಾತ ಮಹಿಳೆಯರಿಗಾಗಿ 16 ಹೊಸ ಮಹಿಳಾ ಕಾಲೇಜುಗಳ ಸ್ಥಾಪನೆ

* ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ಮೂಲಸೌಕರ್ಯಕ್ಕೆ ₹ 50 ಕೋಟಿ

* 78 ಬುಡಕಟ್ಟು ವಸತಿ ಶಾಲೆಗಳಲ್ಲಿ 7ನೇ ತರಗತಿ ಪ್ರಾರಂಭ 

* ಪರಿಶಿಷ್ಟ ಪಂಗಡದ 20 ಹೊಸ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯ ಪ್ರಾರಂಭ

.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.