ನವದೆಹಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ(ಎಂಜಿಎನ್‌ಆರ್‌ಇಜಿಎ) ಕಾರ್ಮಿಕರ ಸಂಕಷ್ಟದ ಬಗ್ಗೆ ಉದಾಸೀನ ನೀತಿಯನ್ನು ಮೋದಿ ಸರ್ಕಾರ ಮುಂದುವರಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಕೇಂದ್ರ ಬಜೆಟ್‌ನಲ್ಲಿ ಎಂಜಿಎನ್‌ಆರ್‌ಇಜಿಎ ವೇತನವನ್ನು ಹೆಚ್ಚಿಸಬೇಕು ಮತ್ತು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬಾರದು ಎಂದು ಒತ್ತಾಯಿಸಿದೆ.
ರಾಷ್ಟ್ರೀಯ ಕನಿಷ್ಠ ವೇತನವಾಗಿ ದಿನಕ್ಕೆ ₹400 ಗುರಿ ಇಟ್ಟುಕೊಂಡು ಎಂಜಿಎನ್‌ಆರ್‌ಇಜಿಎ ವೇತನವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದೆ.
ಸರ್ಕಾರದ ಅನಿಯಂತ್ರಿತ ಉದ್ದೇಶದಿಂದ ಎಂಜಿಎನ್‌ಆರ್‌ಇಜಿಎ ವೇತನವನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೇತನ ದರದಲ್ಲಿ ಬದಲಾವಣೆಯ ಅಗತ್ಯವನ್ನು ಮೌಲ್ಯಮಾಪನ ಮಾಡಲು ಸ್ಥಾಯಿ ಸಮಿತಿಯನ್ನು ಸ್ಥಾಪಿಸಬೇಕು ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಎಂಜಿಎನ್‌ಆರ್‌ಇಜಿಎ ಅಡಿ ಕೆಲಸದ ದಿನಗಳನ್ನು 100ರಿಂದ 150ಕ್ಕೆ ಹೆಚ್ಚಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
2015ರಲ್ಲಿ ಸಂಸತ್ತಿನಲ್ಲಿ ಎಂಜಿಎನ್‌ಆರ್‌ಇಜಿಎಯನ್ನು ಅಪಹಾಸ್ಯ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರ ಅಸಡ್ಡೆ ವರ್ತನೆಯ ಸೂಚನೆಗಳಾಗಿದ್ದವು ಎಂದಿದ್ದಾರೆ.
ನಂತರದ ವರ್ಷಗಳಲ್ಲಿ, ವಿಶೇಷವಾಗಿ ಕೋವಿಡ್ ಸಮಯದಲ್ಲಿ, ಸರ್ಕಾರವು ಕಾರ್ಯಗತಗೊಳಿಸಬಹುದಾದ ಕೆಲವು ಸಾಮಾಜಿಕ ಭದ್ರತಾ ಮಧ್ಯಸ್ಥಿಕೆಗಳಲ್ಲಿ ಎಂಜಿಎನ್‌ಆರ್‌ಇಜಿಎ ತನ್ನ ಉಪಯುಕ್ತತೆಯನ್ನು ನಿರ್ಣಾಯಕವಾಗಿ ಪ್ರದರ್ಶಿಸಿದೆ ಎಂದು ಅವರು ಹೇಳಿದ್ದಾರೆ.
2019-20ರಲ್ಲಿ 6.16 ಕೋಟಿ ಕುಟುಂಬಗಳು ಈ ಯೋಜನೆಯಡಿಯಲ್ಲಿ ಕೆಲಸ ಮಾಡಲು ವಿನಂತಿಸಿದ್ದು, 2020-2021ರಲ್ಲಿ ಈ ಸಂಖ್ಯೆಯು 8.55 ಕೋಟಿಗೆ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.