ಕೋಲ್ಕತ್ತ: ಕೇಂದ್ರ ಬಜೆಟ್‌ಗೆ ದಿನಗಣನೆ ಆರಂಭವಾಗುತ್ತಿದ್ದಂತೆ, ರೈಲ್ವೆ ವಲಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸರಕು ಸಾಗಣೆ ಬೋಗಿಗಳ ಮೇಲ್ದರ್ಜೆಗೆ ಏರಿಸುವ ಘೋಷಣೆಯ ನಿರೀಕ್ಷೆಯಲ್ಲಿ ಕೈಗಾರಿಕಾ ಕ್ಷೇತ್ರವಿದೆ.
ಸರಕು ಸಾಗಣೆ ರೈಲುಗಳ ವೇಗವನ್ನು ಪ್ರತಿ ಗಂಟೆಗೆ 50 ಕಿ.ಮೀ.ಗೆ ಹೆಚ್ಚಿಸಬೇಕು. ಅತ್ಯಾಧುನಿಕ 12 ಸಾವಿರ ಅಶ್ವಶಕ್ತಿಯ ಎಲೆಕ್ಟ್ರಿಕ್ ಲೊಕೊಮೋಟಿವ್ಸ್‌ಗಳನ್ನು ಬಳಕೆಗೆ ತರಬೇಕು ಎಂಬ ಬೇಡಿಕೆಯು ಕೈಗಾರಿಕಾ ವಲಯದಿಂದ ಕೇಳಿಬಂದಿದೆ.
ಟೆಕ್ಸ್‌ಮ್ಯಾಕ್ಸೊ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುದೂಪ್ತಾ ಮುಖರ್ಜಿ ಮಾತನಾಡಿ, ‘2022ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದಂತೆ ಮುಂದಿನ ಮೂರು ವರ್ಷಗಳಲ್ಲಿ 1.2 ಲಕ್ಷ ಹೊಸ ಬೋಗಿಗಳನ್ನು ಬಳಕೆಗೆ ತರುವ ಘೋಷಣೆಯನ್ನು ಕೂಡಲೇ ಕಾರ್ಯಗತಗೊಳಿಸಬೇಕು. ಮೂರು ಲಕ್ಷ ಬೋಗಿಗಳನ್ನು ಖರೀದಿಸುವ ದೀರ್ಘಕಾಲದ ಬೇಡಿಕೆಯನ್ನು 6ಲಕ್ಷಕ್ಕೆ ಹೆಚ್ಚಿಸಬೇಕು. ಇವೆಲ್ಲವೂ 2025ರಲ್ಲೇ ಜಾರಿಗೆ ಬಂದರೆ ಉತ್ತಮ. ರೈಲ್ವೆಯ ಸರಕು ಸಾಗಣೆ ಪ್ರಮಾಣ ಸದ್ಯ ಶೇ 27ರಷ್ಟಿದ್ದು, ಇದನ್ನು ಶೇ 45ಕ್ಕೆ ಹೆಚ್ಚಿಸಬೇಕು. 2025–26ರ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಕೈಗಾರಿಕೆಗಳಿಗೆ ಉತ್ತೇಜನ ನಡಬೇಕು. ಇದರೊಂದಿಗೆ ಸುರಕ್ಷತೆ, ತಂತ್ರಜ್ಞಾನ ಹಾಗೂ ರೈಲಿನ ಸಮಯ ಪಾಲನೆಗೆ ಹೆಚ್ಚಿನ ಅನುದಾನ ನೀಡುವ ಅಗತ್ಯವಿದೆ’ ಎಂದರು.
ಜುಪಿಟರ್ ವ್ಯಾಗನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಲೋಹಿಯಾ ಪ್ರತಿಕ್ರಿಯಿಸಿ, ‘ಸರಕು ಸಾಗಣೆಗೆ ಪ್ರತ್ಯೇಕ ಕಾರಿಡಾರ್ ನಿರ್ಮಾಣದ ಅಗತ್ಯವಿದೆ. ಇದರಲ್ಲಿ ದೇಶದ ಮಧ್ಯ ಭಾಗದಿಂದ ಕರಾವಳಿಗೆ ತಲುಪಲು ಇಂಥ ಕಾರಿಡಾರ್ ನಿರ್ಮಾಣದ ಅಗತ್ಯವಿದೆ. ಇದರೊಂದಿಗೆ ಗಣಿ, ಶಾಖೋತ್ಪನ್ನ, ಪೆಟ್ರೊಕೆಮಿಕಲ್ಸ್, ಸಿಮೆಂಟ್, ಸ್ಟೀಲ್, ಎಫ್‌ಸಿಐ, ಡ್ರೈ ಪೋರ್ಟ್ಸ್, ರಸಗೊಬ್ಬರ ಹಾಗೂ ಜವಳಿ ಎಂದು ಕ್ಷೇತ್ರಗಳನ್ನು ವಿಂಗಡಿಸಿ ಕಾರಿಡಾರ್ ನಿರ್ಮಿಸಬೇಕು. ಕೃಷಿ ಉತ್ಪನ್ನ ಸಾಗಣೆಗೆ ಕಿಸಾನ್ ರೈಲುಗಳನ್ನು ಜಾರಿಗೆ ತರಬೇಕು’ ಎಂದಿದ್ದಾರೆ.
2024ರ ಬಜೆಟ್‌ನಲ್ಲಿ ರೈಲ್ವೆಯು ₹2.62 ಲಕ್ಷ ಕೋಟಿಯಷ್ಟು ದಾಖಲೆಯ ಬಂಡವಾಳ ವೆಚ್ಚ ಹಂಚಿಕೆಯನ್ನು ಪಡೆದಿತ್ತು. ಇದರಲ್ಲಿ ಮಾರ್ಗಗಳ ವಿಸ್ತರಣೆ, ವಂದೇ ಭಾರತ್ ರೈಲುಗಳ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಸರಕು ಸಾಗಣೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.