
ನವದೆಹಲಿ: ‘ಲಕ್‌ಪತಿ ದೀದಿ’ ಕಾರ್ಯಕ್ರಮದ ಯಶಸ್ಸಿನ ಬೆನ್ನಲ್ಲೇ, ಮಹಿಳಾ ಉದ್ಯಮಿಗಳಿಗೆ ಅನುಕೂಲವಾಗುವಂತೆ ಸ್ವಯಂ ಸೇವಾ ಸಂಸ್ಥೆಗಳ ಮಾಲೀಕತ್ವದಲ್ಲಿ ‘ಬಿಡಿ ಮಳಿಗೆ’ ಸ್ಥಾಪಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಉತ್ತೇಜನ ನೀಡಲಿದೆ.
ಕೇಂದ್ರ ಬಜೆಟ್‌ನಲ್ಲಿ ಈ ವಿಷಯವನ್ನು ಪ್ರಕಟಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮಹಿಳಾ ಸ್ವಯಂ ಸೇವಾ ಸಂಸ್ಥೆಗಳು (ಎಸ್‌ಎಚ್‌ಜಿ) ಉದ್ಯಮಗಳ ಮಾಲೀಕತ್ವವನ್ನು ಹೊಂದುವ ನಿಟ್ಟಿನಲ್ಲಿ ಈ ಕ್ರಮವು ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರತಿಪಾದಿಸಿದರು.
‘ಶೀ ಮಾರ್ಟ್ಸ್’ ಎಂದು ಹೇಳಲಾಗುವ ಈ ಬಿಡಿ ಮಳಿಗೆಗಳನ್ನು ಕ್ಲಸ್ಟರ್ ಹಂತದ ಒಕ್ಕೂಟಗಳ ನೇತೃತ್ವದಲ್ಲಿ ನವೀನ ಆರ್ಥಿಕ ನೆರವಿನ ವ್ಯವಸ್ಥೆ ಮೂಲಕ ಸ್ಥಾಪಿಸಲಾಗುವುದು ಎಂದರು.
ಒಂದು ಲಕ್ಷ ರೂಪಾಯಿ ಆದಾಯ ಗಳಿಸುವ ಸ್ವಯಂ ಸೇವಾ ಸಂಘಗಳ (ಎಸ್‌ಎಚ್‌ಜಿ) ಸದಸ್ಯೆಯರನ್ನು ಪ್ರಸ್ತುತ ‘ಲಕ್‌ಪತಿ ದೀದಿ’ ಎಂದು ಗುರುತಿಸಲಾಗುತ್ತದೆ.
ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಮಾಹಿತಿ ಪ್ರಕಾರ, ಇದುವರೆಗೂ ಸುಮಾರು ಎರಡು ಕೋಟಿ ಮಹಿಳೆಯರು ವಾರ್ಷಿಕ ಒಂದು ಲಕ್ಷ ಆದಾಯ ಗಳಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. 2027ರ ವೇಳೆಗೆ ಇವರ ಸಂಖ್ಯೆ 3 ಕೋಟಿ ದಾಟಬೇಕು ಎಂಬುದು ಕೇಂದ್ರದ ಗುರಿಯಾಗಿದೆ.
ಅಲ್ಲದೆ, ಯುವಜನರನ್ನು ಮುಖ್ಯವಾಗಿ ಗ್ರಾಮೀಣ ಭಾಗದ ಯುವಜನರಿಗೆ ಖಾದಿ, ಕೈಮಗ್ಗ, ಕರಕುಶಲ ಕ್ಷೇತ್ರಗಳಿಗೆ ಉತ್ತೇಜನ ನೀಡಲು ‘ಮಹಾತ್ಮಗಾಂಧಿ ಗ್ರಾಮ ಸ್ವರಾಜ್’ ಕಾರ್ಯಕ್ರಮವನ್ನು ಕೇಂದ್ರವು ಬಜೆಟ್‌ನಲ್ಲಿ ಪ್ರಕಟಿಸಿದೆ.
ಈ ಮೂಲಕ, ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಬ್ರ್ಯಾಂಡ್ ಸೇವೆ ಒದಗಿಸುವುದು ಹಾಗೂ ತರಬೇತಿ, ಕೌಶಲ, ಉತ್ಪಾದನಾ ಪ್ರಕ್ರಿಯೆಯ ಗುಣಮಟ್ಟ ಏರಿಕೆಗೆ ಒತ್ತು ನೀಡಲಾಗುತ್ತದೆ. ಇದು, ಗ್ರಾಮೀಣ ಭಾಗದ ಉದ್ಯಮಗಳಿಗೆ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯ ಲಾಭ ಪಡೆಯಲು ಹೆಚ್ಚು ಅನುಕೂಲಕರವಾಗಲಿದೆ ಎಂದು ಕೇಂದ್ರ ಪ್ರತಿಪಾದಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.