ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಕೇಂದ್ರ ಬಜೆಟ್ 2026–27 ಮಂಡನೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಸಂಬಳದಾರರು ಹಾಗೂ ಮಧ್ಯಮ ವರ್ಗದ ಜನರು ಈ ಬಾರಿಯೂ ಭಾರಿ ನಿರೀಕ್ಷೆಯಲ್ಲಿದ್ದಾರೆ. ಅತಿ ಹೆಚ್ಚು ಸಂಬಳದಾರರಿರುವ ನಗರಗಳ ಪೈಕಿ ಒಂದಾದ ಬೆಂಗಳೂರಿನ ಜನ ಈ ಬಾರಿ ಎಚ್‌ಆರ್‌ಎ (ಮನೆ ಬಾಡಿಗೆ ಭತ್ಯೆ) ಮಿತಿ ಏರಿಕೆಯ ನಿರೀಕ್ಷೆಯಲ್ಲಿದ್ದಾರೆ.
ಆದಾಯ ತೆರಿಗೆಗಾಗಿ ಬೆಂಗಳೂರನ್ನು ಮೆಟ್ರೊ ನಗರವಾಗಿ ಪರಿಗಣಿಸಬೇಕು ಎಂದು ಸಂಸತ್‌ನಲ್ಲಿ ಬೇಡಿಕೆ ಇಡಲಾಗಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಈ ಬಗ್ಗೆ ಸಂಸತ್‌ನಲ್ಲಿ ಪ್ರಸ್ತಾಪಿಸಿದ್ದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಭೇಟಿ ಮಾಡಿ ಮನವಿ ಮಾಡಿದ್ದರು. ಈ ಬಾರಿಯಾದರೂ ಬೆಂಗಳೂರಿಗೆ ಮೆಟ್ರೊ ನಗರ ಸ್ಥಾನಮಾನ ಸಿಗಬಹುದು ಎನ್ನುವ ನಿರೀಕ್ಷೆ ಇದೆ. ಪುಣೆ, ಹೈದರಾಬಾದ್ ನಗರಕ್ಕೂ ಈ ಸ್ಥಾನಮಾನ ಸಿಗಬೇಕು ಎನ್ನುವ ಬೇಡಿಕೆ ಇದೆ. ಹಳೆ ತೆರಿಗೆ ಪದ್ಧತಿಯಲ್ಲಿ ಮಾತ್ರ ಇದಕ್ಕೆ ಅವಕಾಶ ಇರುವುದರಿಂದ ಬೆಂಗಳೂರಿಗೆ ಮೆಟ್ರೊ ನಗರ ಸ್ಥಾನಮಾನ ಸಿಗುವುದು ಅನುಮಾನ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಮನೆ ಬಾಡಿಗೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಮೆಟ್ರೊ ನಗರವಾಗಿ ಪರಿಗಣಿಸಿದರೆ ಮಧ್ಯಮ ವರ್ಗದ ವೇತನದಾರರಿಗೆ ತೆರಿಗೆ ಪಾವತಿಯಲ್ಲಿ ಅನುಕೂಲವಾಗಲಿದೆ.
ಸದ್ಯ ಮೆಟ್ರೊ ನಗರಗಳಿಗೆ ಎಚ್‌ಆರ್‌ಎ ಶೇ 50 ರಷ್ಟು ಇದ್ದರೆ, ಮೆಟ್ರೊ ಅಲ್ಲದ ನಗರಗಳಿಗೆ ಶೇ 40 ರಷ್ಟಿದೆ. ಆದರೆ ಈಗ ಎರಡನೇ ಹಂತದ ನಗರಗಳಲ್ಲೂ ಮನೆ ಬಾಡಿಗೆ ದರ ಮೆಟ್ರೊ ನಗರಗಳಿಗೆ ಸಮನಾಗಿದೆ. ಸದ್ಯ ದೆಹಲಿ, ಮುಂಬೈ, ಕೋಲ್ಕತ್ತ ಹಾಗೂ ಚೆನ್ನೈ ನಗರದ ತೆರಿಗೆ ಪಾವತಿದಾರರಿಗೆ ಶೇ 50ರಷ್ಟು ಎಚ್‌ಆರ್‌ಎ ಭತ್ಯೆ ವಿನಾಯಿತಿ ಪಡೆದುಕೊಳ್ಳಬಹುದು. (ಮೂಲ ವೇತನದ ಶೇ 50 ಅಥವಾ ಪಾವತಿ ಮಾಡಿದ ಬಾಡಿಗೆ–ಇದರಲ್ಲಿ ಕಡಿಮೆ ಇರುವುದನ್ನು ಎಚ್‌ಆರ್‌ಎ ವಿನಾಯಿತಿಗೆ ಪರಿಗಣಿಸಲಾಗುತ್ತದೆ). ಮೆಟ್ರೊ ಅಲ್ಲದ ನಗರಗಳಲ್ಲಿ ವೇತನ ಪಡೆಯುತ್ತಿರುವವರಿಗೆ ಈ ವಿನಾಯಿತಿ ಶೇ 40ರಷ್ಟಿದೆ.
ಮೆಟ್ರೊ ಅಲ್ಲದ ನಗರಗಳಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಎಚ್‌ಆರ್‌ಎ ವಿನಾಯಿತಿ ತರತಮದಿಂದಾಗಿ ಅಸಮತೋಲನ ಉಂಟು ಮಾಡುತ್ತಿದೆ. ದೇಶದ ಹಲವು ನಗರಗಳನ್ನು ಮೆಟ್ರೊ ನಗರಗಳೆಂದು ಪರಿಗಣಿಸಿದರೆ ಹಲವು ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ಬೆಂಗಳೂರು, ಹೈದರಾಬಾದ್, ಪುಣೆ ಹಾಗೂ ಅಹಮದಾಬಾದ್ ಮುಂತಾದ ನಗರಗಳಲ್ಲಿ ಬಾಡಿಗೆ ದರ ಭಾರಿ ಹೆಚ್ಚಳವಾಗಿದೆ. ಆದರೆ ವಿನಾಯಿತಿ ಪ್ರಮಾಣ ಹಾಗೇ ಇದೆ. ಹೀಗಾಗಿ ಬೆಂಗಳೂರು ಸೇರಿ ಹಲವು ನಗರದ ವೇತನದಾದರಿಗೆ ಎಚ್‌ಆರ್‌ಎ ಸೌಲಭ್ಯ ಹೆಚ್ಚಿಸುವುದರಿಂದ ಅನುಕೂಲವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.