ADVERTISEMENT

ಕರ್ನಾಟಕ ಬಜೆಟ್‌ 2023| ಭುವನೇಶ್ವರಿಯ ಬೃಹತ್ ಮೂರ್ತಿ ಸ್ಥಾಪನೆ

ದಾವಣಗೆರೆಯಲ್ಲಿ 3ನೇ ‘ವಿಶ್ವ ಕನ್ನಡ ಸಮ್ಮೇಳನ’ ಆಯೋಜನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 11:27 IST
Last Updated 18 ಫೆಬ್ರುವರಿ 2023, 11:27 IST
   

ಬೆಂಗಳೂರು: ಕನ್ನಡ ಮಾತೆ ‘ಭುವನೇಶ್ವರಿ’ಯ ಬೃಹತ್ ಮೂರ್ತಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು. ಅದೇ ರೀತಿ, ಇಲ್ಲಿ ಥೀಮ್ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ.

ಆಡಳಿತ, ಕೈಗಾರಿಕೋದ್ಯಮ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕನ್ನಡದ ವ್ಯಾಪಕ ಬಳಕೆಗೆ ಹಾಗೂ ಕನ್ನಡಿಗರ ಹಿತಾಸಕ್ತಿ ರಕ್ಷಣೆಗೆ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ-2022’ ಅನ್ನು ಜಾರಿಗೆ ತರಲಾಗುವುದು ಎಂದು ಪ್ರಸ್ತಾಪಿಸಲಾಗಿದೆ.

3ನೇ ‘ವಿಶ್ವ ಕನ್ನಡ ಸಮ್ಮೇಳನ’ವನ್ನು ದಾವಣಗೆರೆಯಲ್ಲಿ ಆಯೋಜಿಸಲಾಗುವುದು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ಬದುಕು ಹಾಗೂ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಅವರ ಜೀವನಗಾಥೆಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗುತ್ತದೆ. ನಾಡು–ನುಡಿ ಹಾಗೂ ಸಂಸ್ಕೃತಿ ಕುರಿತು ಅಮೂಲ್ಯ ಕೃತಿಗಳನ್ನು ಪ್ರಕಟಿಸುತ್ತಿರುವ ಕನ್ನಡ ಪುಸ್ತಕ ಪ್ರಾಧಿಕಾರದ ಚಟುವಟಿಕೆಗಳಿಗೆ ₹2 ಕೋಟಿ ನೆರವು ನೀಡಲು ಉದ್ದೇಶಿಸಲಾಗಿದೆ.

ADVERTISEMENT

ಗಡಿನಾಡು ಪ್ರದೇಶದಲ್ಲಿ ಕನ್ನಡ ಭಾಷೆ, ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಪ್ರಾಶಸ್ತ್ಯ ನೀಡಲಾಗುವುದು. ಹಾಗೆಯೇ, ಗಡಿ ಪ್ರದೇಶದ ರಸ್ತೆಗಳ ಹಾಗೂ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮೂಲಕ ₹150 ಕೋಟಿ ಒದಗಿಸಲಾಗುವುದು. ‘ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ’ ಎಂಬ ಕಾರ್ಯಕ್ರಮದಡಿ ಪ್ರತಿ ಜಿಲ್ಲೆಯಲ್ಲಿ ಎಲ್ಲಾ ವರ್ಗದ ಸ್ಥಳೀಯ ಕಲಾವಿದರನ್ನು ಒಳಗೊಂಡಂತೆ, ‘ಜಾನಪದ ಹಬ್ಬ’ ಆಯೋಜಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.

ಬೆಂಗಳೂರಿನಲ್ಲಿ ನಡೆಯುವ ಕರಗ ಉತ್ಸವ ಆಚರಣೆಗೆ ಸರ್ಕಾರದಿಂದ ವಿಶೇಷ ಅನುದಾನ ಒದಗಿಸಲಾಗುವುದು. ದೇಶವನ್ನು ಆಳಿದ ಗಂಗ, ಕದಂಬ, ರಾಷ್ಟ್ರಕೂಟ, ಚಾಲುಕ್ಯ ಹೊಯ್ಸಳ ಮತ್ತಿತರ ಕನ್ನಡದ ರಾಜವಂಶಗಳ ಇತಿಹಾಸ ಹಾಗೂ ಕೊಡುಗೆಗಳ ಬಗ್ಗೆ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಅಧ್ಯಯನ ಮಾಡಲಾಗುವುದು ಎಂದು ಪ್ರಸ್ತಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.