ಬೆಂಗಳೂರು: ‘2025-26ನೇ ಸಾಲಿನ ಬಜೆಟ್ ರಾಜ್ಯದ ಸುಸ್ಥಿರ ಬೆಳವಣಿಗೆಗೆ ಪ್ರಾಯೋಗಿಕ ನೀಲನಕ್ಷೆಯಾಗಿದೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಹೇಳಿದ್ದಾರೆ.
ಮೆಟ್ರೊ ರೈಲನ್ನು ದೇವನಹಳ್ಳಿಯವರೆಗೆ ವಿಸ್ತರಿಸಿರುವುದರಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಕೈಗಾರಿಕೆ ಮತ್ತು ವ್ಯಾಪಾರ ವಲಯಕ್ಕೆ ಉತ್ತೇಜನ ನೀಡಲು ಹೈಬ್ರಿಡ್ ವಾಹನಗಳಿಗೆ ತೆರಿಗೆ ವಿನಾಯಿತಿ, ವಿದ್ಯುತ್‌ಚಾಲಿತ ವಾಹನಗಳಿಗೆ ಪ್ರೋತ್ಸಾಹ, ಇ.ವಿ ಕ್ಲಸ್ಟರ್ ಸ್ಥಾಪನೆಗೆ ₹25 ಕೋಟಿ ನೀಡಿರುವುದು ಉತ್ತಮ ಬೆಳವಣಿಗೆ. ವಿವಿಧ ಜಿಲ್ಲೆಗಳಿಗೆ ಅನುದಾನ ಹಂಚಿಕೆಯೊಂದಿಗೆ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಬಜೆಟ್ ಒತ್ತು ನೀಡಿದೆ. ಆದರೂ, ದೊಡ್ಡ ಪ್ರಮಾಣದ ಮೂಲಸೌಕರ್ಯ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ನಿಖರವಾದ ಯೋಜನೆ ಮತ್ತು ಸಮನ್ವಯದ ಅಗತ್ಯವಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಪ್ರತ್ಯೇಕ ಎಂಎಸ್ಎಂಇ ನೀತಿ ರೂಪಿಸುವ ಕ್ರಮವನ್ನು ಎಫ್‌ಕೆಸಿಸಿಐ ಸ್ವಾಗತಿಸುತ್ತದೆ. ಈ ನೀತಿ ರೂಪಿಸಲು ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ಮಹಾಸಂಸ್ಥೆಯ ಮನವಿಗೆ ಸರ್ಕಾರ ಸ್ಪಂದಿಸಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.