ADVERTISEMENT

Karnataka Budget 2025: ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಪೂರಕವಾದ ಬಜೆಟ್

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 23:30 IST
Last Updated 7 ಮಾರ್ಚ್ 2025, 23:30 IST
ಜ್ಯೋತಿ
ಜ್ಯೋತಿ   

ಸಿದ್ದರಾಮಯ್ಯ ಅವರ ಸರ್ಕಾರ ಎರಡು ವರ್ಷಗಳಿಂದ ಸಾಕಷ್ಟು ಮಹಿಳಾಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಮಹಿಳೆಯರಿಗೆ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಆತ್ಮವಿಶ್ವಾಸದಿಂದ ಬದುಕುವ ಭರವಸೆಯನ್ನು ನೀಡಿದೆ. ಈಗಾಗಲೇ ಚಾಲ್ತಿಯಲ್ಲಿರುವ ಮಹಿಳಾಪರ ಯೋಜನೆಗಳನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಅವರು ಮಂಡಿಸಿದ ಈ ಬಜೆಟ್, ಹಲವಾರು ಪೂರಕ ಯೋಜನೆಗಳನ್ನು ಪ್ರಸ್ತಾಪಿಸಿದೆ. ಇದನ್ನು ಕರ್ನಾಟಕದ ಮಹಿಳೆಯರಿಗೆ ‘ಮಹಿಳಾ ದಿನ’ದ ಕೊಡುಗೆಯೆನ್ನಬಹುದು. 

ರಾಜ್ಯದಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿರುವ ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವನ್ನು ತಡೆಗಟ್ಟುವುದಕ್ಕಾಗಿ, ₹320 ಕೋಟಿ ಮೀಸಲಿಡಲಾಗಿದೆ. ಇನ್ನೊಂದು ವಿಶಿಷ್ಟ ಯೋಜನೆ, ‘ಅಕ್ಕಾ ಕೆಫೆ’. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಿರುವುದು ಮೆಚ್ಚುಗೆಗೆ ಅರ್ಹ.

ಗೃಹ ಲಕ್ಷ್ಮಿ ಯೋಜನೆಗೆ ₹ 28,608 ಕೋಟಿ ಮೀಸಲಿಡುವ ಮೂಲಕ, ಈ ಯೋಜನೆ ಯಶಸ್ವಿಯಾಗಿ ಮುಂದುವರಿಯಲಿದೆಯೆನ್ನುವ ಭರವಸೆ ಹುಟ್ಟಿಸಿದೆ. ಅಲ್ಪಸಂಖ್ಯಾತ ಮಹಿಳೆಯರಿಗಾಗಿ 16 ಹೊಸ ಮಹಿಳಾ ಕಾಲೇಜುಗಳ ಸ್ಥಾಪನೆಯು, ಈ ಸಮುದಾಯಗಳ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲಿದೆ.

ADVERTISEMENT

ಒಟ್ಟಾರೆಯಾಗಿ, ಸರ್ಕಾರ ಜಾರಿಗೆ ತರುತ್ತಿರುವ ಮಹಿಳಾ ಪರ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತಿದೆ ಎನ್ನುವ ಕೆಲವು ವರ್ಗಗಳ ಅಪಸ್ವರದ ನಡುವೆ, ಕರ್ನಾಟಕದಲ್ಲಿ ಒಂದು ಸದ್ದಿಲ್ಲದ ಮಹಿಳಾ ಕ್ರಾಂತಿ ಆರಂಭಗೊಂಡಿದೆ. ಇದರಿಂದಾಗಿ, ಹೆಚ್ಚಿನ ಸಂಖ್ಯೆಯ ಮಹಿಳೆಯರು ಉದ್ಯಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ, ಉದ್ಯೋಗ ಮಾಡುತ್ತಿದ್ದಾರೆ, ಸ್ವಾವಲಂಬಿಗಳಾಗುತ್ತಿದ್ದಾರೆ, ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ.

–ಜ್ಯೋತಿ, ಸಹ ಪ್ರಾಧ್ಯಾಪಕರು, ಇಂಗ್ಲಿಷ್ ವಿಭಾಗ, ತುಮಕೂರು ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.