ADVERTISEMENT

Karnataka Budget 2025: ಬಜೆಟ್‌ನಲ್ಲಿ ಸಿಗುವುದೇ ಯುಕೆಪಿಗೆ ನಿರೀಕ್ಷಿತ ಅನುದಾನ

ಕೃಷ್ಣಾ ಮೇಲ್ದಂಡೆ ಯೋಜನೆಗೆ ಬೇಕಿದೆ ಕಾಯಕಲ್ಪ

ಬಸವರಾಜ ಹವಾಲ್ದಾರ
Published 28 ಜನವರಿ 2025, 4:30 IST
Last Updated 28 ಜನವರಿ 2025, 4:30 IST
ಆಲಮಟ್ಟಿ ಜಲಾಶಯದ ನೋಟ
ಆಲಮಟ್ಟಿ ಜಲಾಶಯದ ನೋಟ   

ಬಾಗಲಕೋಟೆ: ರಾಜ್ಯ ಬಜೆಟ್‌ ಮಂಡನೆಗೆ ಪೂರ್ವಭಾವಿ ಸಭೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಆ ಪಟ್ಟಿಯಲ್ಲಿ ಉತ್ತರ ಕರ್ನಾಟಕದ ಆರ್ಥಿಕ ಚಹರೆ ಬದಲಾವಣೆ ಮಾಡಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತ ಪೂರ್ಣಗೊಳಿಸುವ ನಿರೀಕ್ಷೆಗಳು ಹೆಚ್ಚಿವೆ.

ಆಲಮಟ್ಟಿ ಜಲಾಶಯದ ಈಗಿರುವ 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿ 130 ಟಿಎಂಸಿ ಅಡಿ ನೀರು ಸಂಗ್ರಹಿಸಬೇಕಿದೆ. ಇದಕ್ಕೆ 1.33 ಲಕ್ಷ ಎಕರೆ ಭೂಸ್ವಾಧೀನ ಪಡಿಸಿಕೊಳ್ಳಬೇಕಿದೆ. ಮುಳುಗಡೆಯಾಗುವ 20 ಗ್ರಾಮಗಳನ್ನು ಸ್ಥಳಾಂತರಿಸಬೇಕಿದೆ. ಈ ಕಾರ್ಯಕ್ಕೆ ₹1 ಲಕ್ಷ ಕೋಟಿಗೂ ಹೆಚ್ಚು ಹಣ ಬೇಕಿದೆ.

ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಅವಧಿಯಲ್ಲಿ ₹2 ಲಕ್ಷ ಕೋಟಿ ವೆಚ್ಚದಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಆದರೆ, ನಂತರ ಮಂಡಿಸಿದ ಬಜೆಟ್‌ನಲ್ಲಿ ಯುಕೆಪಿಗೆ ಸಿಗಬೇಕಾದ ಆದ್ಯತೆ ಸಿಕ್ಕಿಲ್ಲ.

ADVERTISEMENT

ಯುಕೆಪಿ ಯೋಜನೆ ಜಾರಿಗಾಗಿ ಯುಕೆಪಿ ಸಂತ್ರಸ್ತರ ಹೋರಾಟ ಸಮಿತಿ 15 ದಿನಕ್ಕೂ ಹೆಚ್ಚು ಕಾಲ ಪ್ರತಿಭಟನೆಗೆ ಮುಂದಾಯಿತು. ಬೆಳಗಾವಿಯ ವಿಧಾನಮಂಡಲ ಅಧಿವೇಶನದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖಂಡರನ್ನು ಕರೆದು ಒಂದೇ ಹಂತದಲ್ಲಿ ಭೂಸ್ವಾಧೀನ ಪಡಿಸಿಕೊಳ್ಳುವ ಹಾಗೂ ಮೂರುವರೆ ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ತಿಂಗಳಾದರೂ ಆ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ಭೂಸ್ವಾಧಿನ ಬೆಲೆ ಹೆಚ್ಚಳ ಮಾಡಿದ್ದರಿಂದ ₹51 ಸಾವಿರ ಕೋಟಿ ಇದ್ದ ಯೋಜನೆ ಹಂತ– 3ರ ವೆಚ್ಚ ₹78 ಸಾವಿರ ಕೋಟಿಗೆ ಹೆಚ್ಚಳಗೊಂಡಿತ್ತು. ಅದು ಜಾರಿಯ ಹೊತ್ತಿಗೆ ಲಕ್ಷ ಕೋಟಿಗೆ ಏರಲಿದೆ ಎಂದು ಅಂದಾಜಿಸಲಾಗಿದೆ. 2010ರಲ್ಲಿ ನ್ಯಾಯಾಧೀಕರಣದ ತೀರ್ಪು ಬಂದಿದ್ದರೂ, ಇಲ್ಲಿಯವರೆಗೆ ಅರ್ಧದಷ್ಟು ಭೂಮಿಯೂ ಸ್ವಾಧೀನ ಕಾರ್ಯವಾಗಿಲ್ಲ.

ಕಲಬುರಗಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳ 5.30 ಲಕ್ಷ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.

ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯನ್ನು ಸಂಪೂರ್ಣವಾಗಿ ಆಲಮಟ್ಟಿಗೆ ಸ್ಥಳಾಂತರಿಸಬೇಕು ಎಂಬುದು ಹಲವು ವರ್ಷಗಳ ಹಿಂದೆಯೇ ನಿರ್ಧಾರವಾಗಿದೆ. ಆದರೆ, ಇಲ್ಲಿಯವರೆಗೆ ಸ್ಥಳಾಂತರ ಕಾರ್ಯ ಮಾತ್ರವಾಗಿಲ್ಲ. ಯುಕೆಪಿ ಪುನರ್ವಸತಿ ಮತ್ತು ಪುನರ್ ನಿರ್ಮಾಣ ವಿಭಾಗದಲ್ಲಿ ಸಿಬ್ಬಂದಿ ಕೊರತೆ ದೊಡ್ಡ ಪ್ರಮಾಣದಲ್ಲಿದೆ.

ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಪ್ರಕಟವಾಗಿ ದಶಕಕ್ಕೂ ಹೆಚ್ಚು ಸಮಯ ಕಳೆದಿದ್ದರೂ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿಲ್ಲ. ಸಂಬಂಧಿಸಿದ ರಾಜ್ಯಗಳು ನ್ಯಾಯಾಲಯಕ್ಕೆ ಹೋಗಿರುವುದು ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ರಾಜ್ಯ ಸರ್ಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಲು ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕಿದೆ.

ಮುಂ‌ದಿನ ಒಂದೆರಡು ಕ್ಯಾಬಿನೆಟ್‌ಗಳಲ್ಲಿ ಯುಕೆಪಿ ಕಾಮಗಾರಿ ಬಗ್ಗೆ ಅಧಿಕೃತವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಭರವಸೆ ನೀಡಿದ್ದಾರೆ
ಪ್ರಕಾಶ ಅಂತರಗೊಂಡ ಸಂಚಾಲಕ ಯುಕೆಪಿ ಸಂತ್ರಸ್ತರ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.