ADVERTISEMENT

ಬಜೆಟ್‌ 2025: ಸುಗಮ ಆಡಳಿತಕ್ಕೆ ‘ಇ–ಆಫೀಸ್’ ಕಡ್ಡಾಯ

ಪಾಲಿಕೆಗಳ ಮೂಲಸೌಕರ್ಯಕ್ಕೆ ₹ 2 ಸಾವಿರ ಕೋಟಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 23:35 IST
Last Updated 7 ಮಾರ್ಚ್ 2025, 23:35 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಮಹಾತ್ಮ ಗಾಂಧಿ ನಗರ ವಿಕಾಸ್ 2.0 ಯೋಜನೆಗೆ ಬಜೆಟ್‌ನಲ್ಲಿ ₹2 ಸಾವಿರ ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಯುಐಡಿಎಫ್ ಅಡಿ ₹ 600 ಕೋಟಿ ಅನುದಾನ ಒದಗಿಸಲಾಗಿದೆ.

ನಗರೋತ್ಥಾನ 4ನೇ ಹಂತದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು 2024-26ನೇ ಸಾಲಿಗೆ ₹ 500 ಕೋಟಿ ಒದಗಿಸಲಾಗುತ್ತದೆ. ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು, ಜಿಲ್ಲಾ ನಗರಾಭಿವೃದ್ಧಿ ಕೋಶಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಸೆಂಟರ್ ಫಾರ್ ಇ-ಗವರ್ನೆನ್ಸ್​ ಇಲಾಖೆಯ ಸಹಯೋಗದೊಂದಿಗೆ ಕಚೇರಿಯ ಸುಗಮ ಆಡಳಿತಕ್ಕೆ ‘ಇ–ಆಫೀಸ್’ ವ್ಯವಸ್ಥೆ ಕಡ್ಡಾಯಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ADVERTISEMENT

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ರಾಮನಗರ ಮತ್ತು ಉಲ್ಲಾಳಕ್ಕೆ ₹705 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. 

ಅಮೃತ್-2 ಯೋಜನೆಯಡಿ 233 ಕುಡಿಯುವ ನೀರು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಉದ್ದೇಶಿಸಿದೆ. ಇದರೊಂದಿಗೆ ₹142 ಕೋಟಿ ವೆಚ್ಚದಲ್ಲಿ ಶಿಕಾರಿಪುರ, ಸಾಗರ, ಐನಾಪುರ, ಎಂ.ಕೆ ಹುಬ್ಬಳ್ಳಿ, ಕುಡಚಿ, ಬೈಲಹೊಂಗಲ, ಶಹಾಪುರ ಹಾಗೂ ಶ್ರೀರಂಗಪಟ್ಟಣಕ್ಕೆ ಒಳಚರಂಡಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ.

ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುವ ಬೆಂಗಳೂರು ನಗರದ ಮೂಲಸೌಲಭ್ಯಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸರ್ಕಾರ ಆದ್ಯತೆ ನೀಡಿದ್ದು, ಈವರೆಗೂ ₹ 3 ಸಾವಿರ ಕೋಟಿ ನೀಡುತ್ತಿದ್ದ ಅನುದಾನವನ್ನು ಈ ಬಾರಿ ₹ 7 ಸಾವಿರಕ್ಕೆ ಕೋಟಿಗೆ ಹೆಚ್ಚಿಸಿದೆ.

ಈ ಅನುದಾನ ಬಳಸಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಲು ಹೊಸದಾಗಿ ವಿಶೇಷ ಉದ್ದೇಶಿತ ಸಂಸ್ಥೆ ಸ್ಥಾಪಿಸಲು ನಿರ್ಧರಿಸಿದೆ.

ಬೆಂಗಳೂರು ಮಹಾನಗರ ಪಾಲಿಕೆ ಕೈಗೊಂಡಿರುವ ವಿವಿಧ ಸುಧಾರಣಾ ಕ್ರಮಗಳಿಂದ ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ತಂತ್ರಜ್ಞಾನ ಬಳಸಿ ಆನ್‌ಲೈನ್ ಮೂಲಕ ಇ–ಖಾತಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ರಾಜಸ್ವ ಸಂಗ್ರಹ ಹೆಚ್ಚು ಮಾಡುವುದರೊಂದಿಗೆ ನಾಗರಿಕ ಸೇವೆಗಳನ್ನು ಸರಳವಾಗಿ ನೀಡಲಾಗುತ್ತಿದೆ. ಈ ಎಲ್ಲಾ ಸುಧಾರಣಾ ಕ್ರಮಗಳಿಂದ 2024–25ನೇ ಸಾಲಿನಲ್ಲಿ ಈವರೆಗೂ ₹4,556 ಕೋಟಿ ಸಂಗ್ರಹ ಮಾಡಲಾಗಿದೆ. ಇದರೊಂದಿಗೆ ಪಾಲಿಕೆಯ ಜಾಹೀರಾತು ಉಪ–ವಿಧಿಗಳು 2025ರ ಅನುಷ್ಠಾನದಿಂದ ವರ್ಷಕ್ಕೆ ₹ 750 ಕೋಟಿ ಆದಾಯ ಸಿಗುವುದಾಗಿ ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.