ADVERTISEMENT

Karnataka Budget 2025: ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಒತ್ತು

ರಾಜ್ಯದ 328 ದೇವಸ್ಥಾನಗಳ ಆಸ್ತಿ ಒತ್ತುವರಿ ತೆರವಿಗೆ ಕ್ರಮ* ಜೈನ, ಬೌದ್ಧ, ಸಿಖ್‌ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ₹100 ಕೋಟಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 23:30 IST
Last Updated 7 ಮಾರ್ಚ್ 2025, 23:30 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ವಕ್ಫ್‌ ಸಂಸ್ಥೆಗಳ ದುರಸ್ತಿ, ಸಂರಕ್ಷಣೆಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ಮುಖ್ಯಮಂತ್ರಿಯವರು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಒತ್ತು ನೀಡಿದ್ದಾರೆ.

ಜತೆಗೆ, ದೇವಾಲಯಗಳ ಅರ್ಚಕರ ವಾರ್ಷಿಕ ತಸ್ತೀಕ್‌ ಮೊತ್ತವನ್ನೂ ಹೆಚ್ಚಿಸಿದ್ದಾರೆ. 328 ದೇವಸ್ಥಾನಗಳ ಆಸ್ತಿ ಉಳಿಸುವುದಾಗಿಯೂ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಜೈನ, ಬೌದ್ಧ, ಸಿಖ್‌ ಸಮುದಾಯಗಳ ಸಮಗ್ರ ಅಭಿವೃದ್ಧಿಗೂ ಅನುದಾನ ಮೀಸಲಿಡಲಾಗಿದೆ. 

ADVERTISEMENT

ವಕ್ಫ್‌ ಸಂಸ್ಥೆಗಳ ದುರಸ್ತಿ, ಜೀರ್ಣೋದ್ದಾರ, ಖಬರಸ್ತಾನಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದು ಹಾಗೂ ಅವುಗಳ ಆಸ್ತಿಗಳ ಸಂರಕ್ಷಣೆಗೆ ₹150 ಕೋಟಿ ಅನುದಾನ ಮೀಸಲಿಡಲಾಗಿದೆ.

ಹಜ್‌ ಯಾತ್ರಿಕರು, ಅವರ ಸಂಬಂಧಿಕರಿಗೆ ಸೌಲಭ್ಯ ಕಲ್ಪಿಸಲು ಬೆಂಗಳೂರಿನ ಹಜ್‌ ಭವನದ ಬಳಿಯೇ ಹೆಚ್ಚುವರಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಗುರುದ್ವಾರಗಳಿಗೆ ಮೂಲಸೌಕರ್ಯ ಕಲ್ಪಿಸಲು ₹2 ಕೋಟಿ ಅನುದಾನ ಒದಗಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ‘ಬೌದ್ಧ ಅಧ್ಯಯನ ಅಕಾಡೆಮಿ’ ಸ್ಥಾಪನೆ, ಮಹಾಬೋಧಿ ಅಧ್ಯಯನ ಕೇಂದ್ರದ ಹಳೆಯ ಗ್ರಂಥಾಲಯವನ್ನು ₹1 ಕೋಟಿ ವೆಚ್ಚದಲ್ಲಿ ಡಿಜಿಟಲೀಕರಣಗೊಳಿಸಲು ಉದ್ದೇಶಿಸಲಾಗಿದೆ. ಜೈನ, ಬೌದ್ಧ, ಸಿಖ್‌ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ₹100 ಕೋಟಿ ಅನುದಾನ ಘೋಷಿಸಲಾಗಿದೆ. ಕ್ರೈಸ್ತ ಸಮುದಾಯದ ಅಭಿವೃದ್ಧಿಗೂ ₹250 ಕೋಟಿ ಒದಗಿಸಲಾಗಿದೆ.     

ಜೈನ ಅರ್ಚಕರು, ಸಿಖ್‌ ಮುಖ್ಯಗ್ರಂಥಿಗಳು, ಮಸೀದಿಗಳ ಪೇಷ್‌ ಇಮಾಮ್‌ಗಳಿಗೆ ನೀಡುತ್ತಿರುವ ತಿಂಗಳ ಗೌರವಧನವನ್ನು ₹6 ಸಾವಿರಕ್ಕೆ ಏರಿಸಲಾಗಿದೆ. ಸಿಖ್‌ ಸಹಾಯಕ ಗ್ರಂಥಿಗಳು, ಮೋಝಿನ್‌ಗಳಿಗೆ ನೀಡುತ್ತಿರುವ ತಿಂಗಳ ಗೌರವಧನವನ್ನು ₹5 ಸಾವಿರಕ್ಕೆ ಏರಿಸಲಾಗಿದೆ. ಕಲಬುರಗಿಯ ಚಿತ್ತಾಪುರ ತಾಲ್ಲೂಕಿನಲ್ಲಿ ‘ಸನ್ನತಿ ಅಭಿವೃದ್ಧಿ ಪ್ರಾಧಿಕಾರ’ ರಚಿಸುವುದಾಗಿ ಘೋಷಿಸಲಾಗಿದೆ.

ಅಲ್ಪಸಂಖ್ಯಾತ ಸಮುದಾಯದವರಿಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆ ನಡೆಸಲು ಹೋಬಳಿ, ತಾಲ್ಲೂಕುಮಟ್ಟದಲ್ಲಿ ₹50 ಲಕ್ಷ ಅನುದಾನ ಒದಗಿಸಲಾಗಿದೆ. ‘ಭೂ–ವರಾಹ ಯೋಜನೆ’ ಅಡಿಯಲ್ಲಿ ದೇವಾಲಯಗಳ ಸ್ಥಿರಾಸ್ತಿ ದಾಖಲೀಕರಣಕ್ಕೆ ಒತ್ತು ನೀಡುವುದಾಗಿಯೂ ಘೋಷಿಸಲಾಗಿದೆ.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ 25,551 ಧಾರ್ಮಿಕ ಸಂಸ್ಥೆ/ದೇವಾಲಯಗಳ ಅರ್ಚಕರಿಗೆ ಪಾವತಿಸುತ್ತಿರುವ ವಾರ್ಷಿಕ ತಸ್ತೀಕ್‌ ಮೊತ್ತವನ್ನು ₹60 ಸಾವಿರದಿಂದ ₹72 ಸಾವಿರಕ್ಕೆ ಏರಿಸಲಾಗಿದೆ. ‘ಕರ್ನಾಟಕ ದೇವಾಲಯಗಳ ವಸತಿ ಕೋಶ’ ಸ್ಥಾಪಿಸಲು ನಿರ್ಧರಿಸಲಾಗಿದೆ. ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರ ರಚಿಸುವುದಾಗಿಯೂ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.