ADVERTISEMENT

Karnataka Budget 2025: ಕುಸ್ತಿ, ವಾಲಿಬಾಲ್‌, ಕೊಕ್ಕೊ ಅಕಾಡೆಮಿಗಳ ಸ್ಥಾಪನೆ

ಯುವ ಸಬಲೀಕರಣ ಮತ್ತು ಕ್ರೀಡೆಗೆ ರಾಜ್ಯ ಬಜೆಟ್‌ನಲ್ಲಿ ಅನುದಾನ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 23:30 IST
Last Updated 7 ಮಾರ್ಚ್ 2025, 23:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಮೈಸೂರಿನಲ್ಲಿ ₹ 2 ಕೋಟಿ ಅನುದಾನದಲ್ಲಿ ಕುಸ್ತಿ, ವಾಲಿಬಾಲ್‌, ಕೊಕ್ಕೊ ಅಕಾಡೆಮಿಗಳ ಸ್ಥಾಪನೆ, 2028ರ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಧುನಿಕ ಸೈಕ್ಲಿಂಗ್‌ ವೆಲೋಡ್ರೋಮ್‌ ನಿರ್ಮಾಣ ಸೇರಿದಂತೆ ಯುವ ಸಬಲೀಕರಣ ಮತ್ತು ಕ್ರೀಡೆಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಶೇ 5ರಷ್ಟು ಕೃಪಾಂಕವನ್ನು ವೃತ್ತಿಪರ, ಪದವಿ ಮತ್ತು ಉನ್ನತ ಶಿಕ್ಷಣದ ಪ್ರವೇಶದಲ್ಲಿ ನೀಡುವ ಘೋಷಣೆಯೂ ಬಜೆಟ್‌ನಲ್ಲಿದೆ. ಬಜೆಟ್‌ನಲ್ಲಿರುವ ಪ್ರಮುಖ ಅಂಶಗಳು ಇಲ್ಲಿವೆ.

* 2028ರ ಒಲಿಂಪಿಕ್ಸ್‌ಗೆ ತಯಾರಿ ಕೈಗೊಳ್ಳಲು ‘ಒಲಿಂಪಿಕ್‌ ಪದಕ ಯೋಜನೆ’ಯಡಿ ರಾಜ್ಯದ ಅತ್ಯಂತ ಪ್ರತಿಭಾನ್ವಿತ 60 ಕ್ರೀಡಾಪಟುಗಳಿಗೆ ವಾರ್ಷಿಕ ತಲಾ ₹10 ಲಕ್ಷದಂತೆ ಪ್ರೋತ್ಸಾಹಧನ ಮೂರು ವರ್ಷ ನೀಡಲಾಗುವುದು.

ADVERTISEMENT

* ಕೂಡಿಗೆ ಕ್ರೀಡಾ ಶಾಲೆಯ ಸೌಲಭ್ಯಗಳ ಉನ್ನತೀಕರಣಕ್ಕಾಗಿ ₹ 3 ಕೋಟಿ ಅನುದಾನ. ಯಾದಗಿರಿಯ ಶಹಾಪುರದಲ್ಲಿ ಕ್ರೀಡಾ ವಸತಿ ಶಾಲೆ ₹10 ಕೋಟಿ ವೆಚ್ಚದಲ್ಲಿ ಆರಂಭ

* ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆದಿನಾರಾಯಣ ಹೊಸಹಳ್ಳಿಯಲ್ಲಿರುವ 20 ಎಕರೆ ನಿವೇಶನದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಹಾಗೂ ಸೈಕ್ಲಿಂಗ್‌ ಕ್ರೀಡೆಗೆ ಉತ್ತೇಜನ ನೀಡಲು ₹ 5 ಕೋಟಿ ವೆಚ್ಚದಲ್ಲಿ ಆಧುನಿಕ ಸೈಕ್ಲಿಂಗ್‌ ವೆಲೋಡ್ರೋಮ್‌ ಸ್ಥಾಪನೆ.

* ಯಲಬುರ್ಗಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲ್ಲೂಕು ಕ್ರೀಡಾಂಗಣ ಹಾಗೂ ಟಿ.ನರಸೀಪುರ ತಾಲ್ಲೂಕು ಕ್ರೀಡಾಂಗಣವನ್ನು ₹6 ಕೋಟಿ ಅನುದಾನದಲ್ಲಿ ಅಭಿವೃದ್ಧಿ

* ರಾಜ್ಯದ ನಾಲ್ಕು ವಿಭಾಗಗಳಲ್ಲಿ ತಲಾ ಒಂದರಂತೆ ಜಿಲ್ಲಾ ಕ್ರೀಡಾಂಗಣಗಳಲ್ಲಿ ಶೂಟಿಂಗ್‌ ರೇಂಜ್‌ಗಳನ್ನು ಒಟ್ಟು ₹3 ಕೋಟಿ ವೆಚ್ಚದಲ್ಲಿ ನಿರ್ಮಾಣ

* ಮೈಸೂರು ಮತ್ತು ಬೆಳಗಾವಿಯಲ್ಲಿ ಹೊಸದಾಗಿ ಕ್ರೀಡಾ ವಿಜ್ಞಾನ ಕೇಂದ್ರ ₹7 ಕೋಟಿ ವೆಚ್ಚದಲ್ಲಿ ಸ್ಥಾಪನೆ

* ಬೆಂಗಳೂರಿನ ವಿದ್ಯಾನಗರದಲ್ಲಿರುವ ಈಜುಕೊಳವನ್ನು ಹೀಟಿಂಗ್‌ ಮತ್ತು ಡೈವಿಂಗ್‌ ಪೂಲ್‌ ವ್ಯವಸ್ಥೆಗಳನ್ನೊಳಗೊಂಡು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಕೆ. ಚಾಮರಾಜನಗರದಲ್ಲಿ ₹2 ಕೋಟಿ ವೆಚ್ಚದಲ್ಲಿ ಒಲಿಂಪಿಕ್ಸ್ ಮಾದರಿಯ (50 ಮೀ.) ಈಜುಕೊಳ ನಿರ್ಮಾಣ

* ನಿವೃತ್ತಿ ಹೊಂದಿದ ಕುಸ್ತಿಪಟುಗಳ ಮಾಶಾಸನ ಹೆಚ್ಚಳ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದವರಿಗೆ ₹6,000, ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿದವರಿಗೆ ₹5,000 ಹಾಗೂ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿದವರಿಗೆ ₹4,500ಕ್ಕೆ ಹೆಚ್ಚಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.