ಸಿದ್ದರಾಮಯ್ಯ
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿನ ರಸ್ತೆ, ನೀರು ಹಾಗೂ ಇನ್ನಿತರ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಪ್ರಸಕ್ತ ಸಾಲಿನಲ್ಲಿ ₹8 ಸಾವಿರ ಕೋಟಿ ನೀಡಲು ರಾಜ್ಯ ಸರ್ಕಾರ ಉದ್ದೇಶಿಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಯಮಯ್ಯ ಹೇಳಿದ್ದಾರೆ.
2025–26ನೇ ಸಾಲಿನ ಬಜೆಟ್ ಅನ್ನು ಶುಕ್ರವಾರ ಮಂಡಿಸಿದ ಅವರು, ‘ಮುಖ್ಯಮಂತ್ರಿ ಕ್ಷೇತ್ರಾಭಿವೃದ್ಧಿ ಯೋಜನೆಯಡಿ ಅನುದಾನ ನೀಡಲು ನಿರ್ಧರಿಸಲಾಗಿದೆ’ ಎಂದರು.
‘ದೇಶದ ಬೆಳವಣಿಗೆಯಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದ್ದು, 2024–25ರಲ್ಲಿ ದೇಶದ ಜಿಡಿಪಿ ಶೇ 6.4ರಷ್ಟಿದ್ದರೆ, ಕರ್ನಾಟಕ ಇದೇ ಅವಧಿಯಲ್ಲಿ ಶೇ 7.4ರಷ್ಟು ಬೆಳವಣಿಗೆ ದಾಖಲಿಸಿದೆ. ವಿತ್ತೀಯ ಶಿಸ್ತು ಕಾಯ್ದುಕೊಂಡು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿದೆ. ಜತೆಗೆ ಬಂಡವಾಳ ಹೂಡಿಕೆ ಮತ್ತು ಕೃಷಿ ವಲಯದಲ್ಲಿ ಬೆಳವಣಿಗೆಯಿಂದ ರಾಜ್ಯದ ಆರ್ಥಿಕತೆ ಬೆಳವಣಿಗೆಯ ಹಾದಿಯಲ್ಲಿದೆ’ ಎಂದರು.
ಆದರೆ, ರಾಜ್ಯದಿಂದ ಸಂಗ್ರಹವಾಗುವ ಜಿಎಸ್‌ಟಿಯನ್ನು ಮರಳಿ ರಾಜ್ಯಕ್ಕೆ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದರ ಪರಿಣಾಮ ರಾಜ್ಯಕ್ಕೆ ₹12 ಸಾವಿರ ಕೋಟಿ ನಷ್ಟವಾಗಿದೆ. ತೆರಿಗೆ ಪಾಲು ಹಂಚಿಕೆಯನ್ನು ಸಮಾನತೆ ಕಾಪಾಡಬೇಕು. ಶೇ 50ರಷ್ಟು ಪಾಲನ್ನು ರಾಜ್ಯಗಳಿಗೆ ಮರಳಿ ನೀಡಬೇಕು. ಸೆಸ್ ಮತ್ತು ಸರ್‌ಚಾರ್ಜ್ ಶೇ 5ಕ್ಕೆ ಮಿತಿಗೊಳಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸಲಾಗಿದೆ’ ಎಂದು ಅವರು ಹೇಳಿದರು.
‘ರಾಜ್ಯದಲ್ಲಿ ಬಂಡವಾಳ ಹೂಡಿಕೆಯು ಶೇ 43.7ರಷ್ಟು ಹೆಚ್ಚಳವಾಗಿದೆ. ಆರೋಗ್ಯ ಕ್ಷೇತ್ರದಲ್ಲೂ ಹೂಡಿಕೆ ಹೆಚ್ಚಳವಾಗಿದೆ. ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಕೊಡುಗೆ ನೀಡುತ್ತಿರುವ ಬೆಂಗಳೂರಿಗೆ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿಯಲ್ಲೇ 2 ಹಾಗೂ 3ನೇ ಹಂತದ ನಗರಗಳ ಸಮಗ್ರ ಕೊಡುಗೆ ಮೂಲಕ ಬೆಂಗಳೂರು ಮೇಲಿನ ಒತ್ತಡ ಕಡಿಮೆ ಮಾಡಲಾಗುವುದು’ ಎಂದರು.
‘ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆಗೆ ನೀತಿಗಳ ಬದಲಾವಣೆ ಮೂಲಕ ಒತ್ತು ನೀಡಲಾಗುತ್ತಿದೆ. ಇದರಿಂದ ಈ ಕೈಗಾರಿಕೆಗಳ ಬೆಳವಣಿಗೆ ಮತ್ತು ಉದ್ಯೋಗ ಸೃಜನೆಗೆ ಹೆಚ್ಚಿ ಒತ್ತು ಸಿಗಲಿದೆ’ ಎಂದು ಹೇಳಿದರು.
‘ಆಡಳಿತ ಸುಧಾರಣೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಕೌನ್ಸಲಿಂಗ್ ಪ್ರಕ್ರಿಯೆ ಜಾರಿಗೆ ತರಲಾಗುತ್ತಿದೆ. ಇದರಿಂದ ಜನರ ಸಮಸ್ಯೆಗಳು ತ್ವರಿತಗತಿಯಲ್ಲಿ ಪರಿಹರಿಸಲು ನೆರವಾಗಲಿದೆ. ಕಳೆದ ವರ್ಷ ರಾಜ್ಯ ಸರ್ಕಾರದ ಫಲಾನುಭವಿಗಳ ಖಾತೆಗೆ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ₹1ಲಕ್ಷ ಕೋಟಿಯನ್ನು ನೇರವಾಗಿ ವರ್ಗಾಯಿಸಲಾಗಿದೆ’ ಎಂದರು. ಜತೆಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹233 ಕೋಟಿ ಮೊತ್ತವನ್ನು ನೇರವಾಗಿ ವರ್ಗಾಯಿಸಲಾಗಿದೆ’ ಎಂದು ಸಿದ್ದರಾಮಯ್ಯ ಹೇಳಿದರು.
‘ವರ್ಷದ ಹಿಂದೆ ಕೃಷಿ ವಲಯವು ಮೈನಸ್ ಶೇ 4.9ರಷ್ಟು ಇತ್ತು. 2024–25ರಲ್ಲಿ ಶೇ 4ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೈಗಾರಿಕೆಗಳ ಮೂಲಕ ₹1ಲಕ್ಷ ಕೋಟಿ ಬಂಡವಾಳ ಆಕರ್ಷಿಸುವ ಗುರಿ ಇದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.