ಬೆಂಗಳೂರು: ರಾಜ್ಯದಲ್ಲಿ ಗ್ರಾಮೀಣ ಕ್ರೀಡೆ ಮತ್ತು ಒಲಿಂಪಿಕ್ಸ್ ತಯಾರಾಗುತ್ತಿರುವವರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಮಂಡಿಸಿದ ಬಜೆಟ್ನಲ್ಲಿ ಕೆಲ ಘೋಷಣೆಗಳನ್ನು ಮಾಡಿದ್ದಾರೆ.
* ಒಲಿಂಪಿಕ್ ಪದಕ ಯೋಜನೆಯಡಿ ರಾಜ್ಯದ ಅತ್ಯಂತ ಪ್ರತಿಭಾನ್ವಿತ 60 ಕ್ರೀಡಾಪಟುಗಳನ್ನು ಗುರುತಿಸಿ, ಒಲಂಪಿಕ್ಸ್ 2028ಕ್ಕೆ ತಯಾರಿ ಕೈಗೊಳ್ಳಲು ವಾರ್ಷಿಕ ತಲಾ ₹10 ಲಕ್ಷದಂತೆ ಪ್ರೋತ್ಸಾಹ ಧನವನ್ನು ಮೂರು ವರ್ಷ ನೀಡಲಾಗುವುದು ಎಂದು ಹೇಳಿದ್ದಾರೆ. ಇದಕ್ಕಾಗಿ, ಈ ವರ್ಷಕ್ಕೆ ₹6 ಕೋಟಿ . ಒದಗಿಸಲಾಗುವುದು ಎಂದಿದ್ದಾರೆ.
* ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆದಿನಾರಾಯಣ ಹೊಸಹಳ್ಳಿಯಲ್ಲಿರುವ 20 ಎಕರೆ ನಿವೇಶನದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗುವುದು ಹಾಗೂ ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡಲು ₹5 ಕೋಟಿ ವೆಚ್ಚದಲ್ಲಿ ಆಧುನಿಕ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಿಸಲಾಗುವುದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ತಲಾ ₹3 ಕೋಟಿಯಂತೆ ಒಟ್ಟು ₹6 ಕೋಟಿ ಒದಗಿಸಲಾಗುವುದು.
* ನಿವೇಶನ ಲಭ್ಯವಿರುವ 12 ತಾಲ್ಲೂಕು ಕೇಂದ್ರಗಳಲ್ಲಿ ₹2 ಕೋಟಿ ವೆಚ್ಚದಲ್ಲಿ ತಾಲ್ಲೂಕು ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಒಟ್ಟು ₹12 ಕೋಟಿ ಒದಗಿಸಲಾಗುವುದು.
* ಯಲಬುರ್ಗಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲ್ಲೂಕು ಕ್ರೀಡಾಂಗಣ ಹಾಗೂ ಟಿ.ನರಸೀಪುರ ತಾಲ್ಲೂಕು ಕ್ರೀಡಾಂಗಣವನ್ನು ಆರು ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಗೊಳಿಸಲಾಗುವುದು.
* ರಾಜ್ಯದ ನಾಲ್ಕು ವಿಭಾಗಗಳಲ್ಲಿ ತಲಾ ಒಂದರಂತೆ ಜಿಲ್ಲಾ ಕ್ರೀಡಾಂಗಣಗಳಲ್ಲಿ ಶೂಟಿಂಗ್ ರೇಂಜ್ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು.
ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ
* ಗ್ರಾಮೀಣ ಕ್ರೀಡೆಗಳಾದ ಕಂಬಳ, ಎತ್ತಿನಬಂಡಿ ಓಟ ಮತ್ತು ಮಲ್ಲಕಂಬ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುವುದು. ಅತೀ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗದವರಿಗೆ ಪ್ರತಿ ವರ್ಷ ಕ್ರೀಡಾಕೂಟ ಆಯೋಜಿಸಲಾಗುವುದು. 2025-26 ನೇ ಸಾಲಿನಲ್ಲಿ ಈ ಉದ್ದೇಶಕ್ಕೆ 2 ಕೋಟಿ ಒದಗಿಸಲಾಗುವುದು.
* ಕೂಡಿಗೆ ಕ್ರೀಡಾ ಶಾಲೆಯ ಸೌಲಭ್ಯಗಳ ಉನ್ನತೀಕರಣಕ್ಕಾಗಿ₹3 ಕೋಟಿ ಒದಗಿಸಲಾಗುವುದು. ಯಾದಗಿರಿಯ ಶಹಾಪುರದಲ್ಲಿ ಸುಸಜ್ಜಿತವಾದ ಕ್ರೀಡಾ ವಸತಿ ಶಾಲೆಯನ್ನು
₹10 ಕೋಟಿ ವೆಚ್ಚದಲ್ಲಿ ಆರಂಭಿಸಲಾಗುವುದು ಎಣದು ಹೇಳಿದ್ದಾರೆ.
* ಮೈಸೂರು ಮತ್ತು ಬೆಳಗಾವಿಯಲ್ಲಿ ಹೊಸದಾಗಿ ಕ್ರೀಡಾ ವಿಜ್ಞಾನ ಕೇಂದ್ರಗಳನ್ನು 7 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
* ಬೆಂಗಳೂರಿನ ವಿದ್ಯಾನಗರದಲ್ಲಿರುವ ಈಜುಕೊಳವನ್ನು ಹೀಟಿಂಗ್ ಮತ್ತು ಡೈವಿಂಗ್ ಪೂಲ್ ವ್ಯವಸ್ಥೆಗಳನ್ನೊಳಗೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು. ಚಾಮರಾಜನಗರದಲ್ಲಿ ಒಲಂಪಿಕ್ಸ್ ಮಾದರಿಯ (50 ಮೀಟರ್) ಈಜುಕೊಳವನ್ನು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.
* ಮೈಸೂರಿನಲ್ಲಿ ಕುಸ್ತಿ, ವಾಲಿಬಾಲ್, ಖೋಖೋ ಅಕಾಡೆಮಿಗಳನ್ನು ಸ್ಥಾಪಿಸಲು 2 ಕೋಟಿ ರೂ. ಒದಗಿಸಲಾಗುವುದು.
* ಕ್ರೀಡಾಪಟುಗಳು ತರಬೇತಿ ಪಡೆಯಲು ಹಾಗೂ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸಹಕಾರಿಯಾಗುವಂತೆ ಶಾಲಾ-ಕಾಲೇಜುಗಳ (ವೃತ್ತಿಪರ ಕಾಲೇಜುಗಳು ಸೇರಿದಂತೆ) ವಾರ್ಷಿಕ ಹಾಜರಾತಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದವರೆಗಿನ ಕ್ರೀಡಾಪಟುಗಳಿಗೆ ಶೇ.15 ರಷ್ಟು ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಶೇ.25ರಷ್ಟು ಹಾಜರಾತಿ ವಿನಾಯಿತಿ ನೀಡಲಾಗುವುದು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಶೇ.5ರಷ್ಟು ಕೃಪಾಂಕವನ್ನು ವೃತ್ತಿಪರ, ಪದವಿ ಮತ್ತು ಉನ್ನತ ಶಿಕ್ಷಣದ ಪ್ರವೇಶದಲ್ಲಿ ನೀಡಲಾಗುವುದು.
* ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ 100 ಶಾಲೆಗಳಲ್ಲಿ ಆಟದ ಮೈದಾನ ನಿರ್ಮಿಸಲು ತಲಾ ₹5 ಲಕ್ಷ ವರೆಗೆ ನೆರವು ನೀಡಲಾಗುವುದು.
* ನಿವೃತ್ತಿ ಹೊಂದಿದ ಕುಸ್ತಿಪಟುಗಳಿಗೆ ನೀಡಲಾಗುತ್ತಿರುವ ಮಾಸಾಶನವನ್ನು, ಅಂತರರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳಿಗೆ ₹6,000ಗಳಿಗೆ, ರಾಷ್ಟ್ರ ಮಟ್ಟದ ಕುಸ್ತಿಪಟುಗಳಿಗೆ ₹5,000ಗಳಿಗೆ ಹಾಗೂ ರಾಜ್ಯ ಮಟ್ಟದ ಕುಸ್ತಿಪಟುಗಳಿಗೆ ₹4,500 ಗಳಿಗೆ ಹೆಚ್ಚಿಸಲಾಗುವುದು.
* ಒಲಂಪಿಕ್ಸ್, ಕಾಮನ್ ವೆಲ್ತ್ ಹಾಗೂ ಏಷಿಯನ್ ಗೇಮ್ಸ್ ಗಳಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳ ಸೇವೆಯನ್ನು ವಿವಿಧ ಕ್ರೀಡಾ ಸಂಸ್ಥೆಗಳಲ್ಲಿ ಮಾರ್ಗದರ್ಶಕರಾಗಿ ಪಡೆಯಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.