ADVERTISEMENT

ಆನ್‌ಲೈನ್‌ನಲ್ಲಿ ಪದವಿ ಕೋರ್ಸ್‌: ಕೌಶಲ ಅಭಿವೃದ್ಧಿಗೆ ಒತ್ತು

ಪೊಲೀಸ್‌, ವಿಧಿವಿಜ್ಞಾನ ವಿಶ್ವಿದ್ಯಾಲಯ ಸ್ಥಾಪನೆ

ಪಿಟಿಐ
Published 1 ಫೆಬ್ರುವರಿ 2020, 20:00 IST
Last Updated 1 ಫೆಬ್ರುವರಿ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ: ಉನ್ನತ ಶಿಕ್ಷಣ ವಂಚಿತರಿಗಾಗಿ ಆನ್‌ಲೈನ್‌ ಕೋರ್ಸ್‌ಗಳು, ಪೊಲೀಸ್‌ ಹಾಗೂ ವಿಧಿವಿಜ್ಞಾನಕ್ಕೆ ವಿಶ್ವವಿದ್ಯಾಲಯ ಆರಂಭ, ಕೌಶಲ ಅಭಿವೃದ್ಧಿಗೆ ಹೊಸ ವ್ಯವಸ್ಥೆ... ಹೀಗೆ ಶಿಕ್ಷಣ ಕ್ಷೇತ್ರಕ್ಕೆ ಕೆಲವು ಸುಧಾರಣೆಯ ಪ್ರಸ್ತಾವವನ್ನು ಸಚಿವೆ ನಿರ್ಮಲಾ ಅವರು ಮಾಡಿದ್ದಾರೆ.

ಹೊಸ ಶಿಕ್ಷಣ ನೀತಿ ರೂಪಿಸಲು ಸರ್ಕಾರ ಮುಂದಾಗಿದ್ದು, ಶೀಘ್ರದಲ್ಲೇ ಅದನ್ನು ಘೋಷಿಸಲಾಗುವುದು. ಈ ನಿಟ್ಟಿನಲ್ಲಿ ಸಂಸದರು, ಶಿಕ್ಷಣ ಕ್ಷೇತ್ರದ ಅನುಭವಿಗಳು ಹಾಗೂ ವಿವಿಧ ಕ್ಷೇತ್ರಗಳ ತಜ್ಞರ ಜತೆ ಸಂವಾದ ನಡೆಸಲಾಗಿದೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಸಲಹೆಗಳು ಬಂದಿವೆ.

ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅನುಕೂಲವಾಗುವಂತೆ ಬಾಹ್ಯ ಸಾಲದ ವ್ಯವಸ್ಥೆ, ಹಾಗೂ ವಿದೇಶಿ ನೇರ ಹೂಡಿಕೆಯ ಅವಕಾಶಗಳನ್ನೂ ಕಲ್ಪಿಸಲಾಗುವುದು ಎಂದರು. 2020–21ನೇ ಸಾಲಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒಟ್ಟು ₹99,300 ಕೋಟಿ ಒದಗಿಸುವುದಾಗಿ ನಿರ್ಮಲಾ ತಿಳಿಸಿದರು.

ADVERTISEMENT

ಭಾರತವನ್ನು ಉನ್ನತ ಶಿಕ್ಷಣ ಕ್ಷೇತ್ರದ ಆದ್ಯತೆಯ ರಾಷ್ಟ್ರವಾಗಿಸುವ ನಿಟ್ಟಿನಲ್ಲಿ ‘ಸ್ಟಡಿ ಇನ್‌ ಇಂಡಿಯಾ’ ಕಾರ್ಯಕ್ರಮದಡಿ ‘ಐಎನ್‌ಡಿ–ಎಸ್‌ಎಟಿ’ ಪರೀಕ್ಷೆಗಳನ್ನು ಆಯೋಜಿಸಲಾಗುವುದು. ಆ ಮೂಲಕ ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯಲು ಏಷ್ಯಾ ಹಾಗೂ ಆಫ್ರಿಕಾದ ರಾಷ್ಟ್ರಗಳ ವಿದ್ಯಾರ್ಥಿಗಳ ಆಯ್ಕೆಗೆ ಮಾನದಂಡವನ್ನು ನಿರ್ಧರಿಸಲಾಗುವುದು.

ವಿಜ್ಞಾನ– ತಂತ್ರಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳಂತೆ ಇತರ ವಿಭಾಗಗಳ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗಾಗಿ ದೇಶದ 150 ಉನ್ನತ ಶಿಕ್ಷಣ ಸಂಸ್ಥೆಗಳು 2021ರ ಮಾರ್ಚ್‌ ವೇಳೆಗೆ ಅಪ್ರೆಂಟಿಷಿಪ್‌ ಆಧರಿತ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲಿವೆ. ಉನ್ನತ ಶಿಕ್ಷಣದಿಂದ ವಂಚಿತರಾದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಆನ್‌ಲೈನ್‌ನಲ್ಲೇ ಪೂರ್ಣ ಪ್ರಮಾಣದ ಪದವಿ ಕೋರ್ಸ್‌ ಆರಂಭಿಸಲಾಗುವುದು. ದೇಶದ ಮುಂಚೂಣಿಯ ನೂರು ಸಂಸ್ಥೆಗಳು ಆನ್‌ಲೈನ್‌ ಕೋರ್ಸ್‌ ನಡೆಸಲಿವೆ ಎಂದರು.

ಭಾರತೀಯ ಪೊಲೀಸ್‌ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯಗಳನ್ನು ಆರಂಭಿಸುವ ಪ್ರಸ್ತಾವವನ್ನೂ ಅವರು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.