ADVERTISEMENT

ಸಂಸತ್ ಬಜೆಟ್ ಅಧಿವೇಶನ: ಜನವರಿ 27ರಂದು ಸರ್ವಪಕ್ಷ ಸಭೆ

ಪಿಟಿಐ
Published 24 ಜನವರಿ 2026, 15:04 IST
Last Updated 24 ಜನವರಿ 2026, 15:04 IST
ಸಂಸತ್ ಭವನ
ಸಂಸತ್ ಭವನ   

ನವದೆಹಲಿ: ಸಂಸತ್‌ನ ಬಜೆಟ್‌ ಅಧಿವೇಶನದ ಅಂಗವಾಗಿ ಶಾಸನಗಳಿಗೆ ಸಂಬಂಧಿಸಿದಂತೆ ಮತ್ತು ಕಾರ್ಯಸೂಚಿಗಳ ಕುರಿತು ಚರ್ಚಿಸಲು ಸರ್ಕಾರ ಇದೇ 27ರಂದು ಸರ್ವಪಕ್ಷಗಳ ಸಭೆ ಕರೆದಿದೆ.

‘ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸರ್ವಪಕ್ಷ ಸಭೆ ಕರೆದಿದ್ದಾರೆ. ಮಂಗಳವಾರ ಬೆಳಗ್ಗೆ 11ಕ್ಕೆ ಸಂಸತ್‌ ಭವನದ ಸಮಿತಿ ಕೊಠಡಿಯಲ್ಲಿ ಸಭೆ ನಡೆಯಲಿದೆ’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಜನವರಿ 28ರಿಂದ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ.

ADVERTISEMENT
ಇತಿಹಾಸ ನಿರ್ಮಿಸುವ ಬಜೆಟ್‌
ಸಂಸತ್ತಿನ ಇತಿಹಾಸದಲ್ಲಿ ಅಪರೂಪ ಎಂಬಂತೆ ಇದೇ ಮೊದಲ ಬಾರಿ ಕೇಂದ್ರ ಬಜೆಟ್‌ ಫೆಬ್ರುವರಿ 1ರಂದು ಭಾನುವಾರ ಮಂಡನೆಯಾಗುತ್ತಿದೆ. ಇದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಸತತ ಒಂಬತ್ತನೇ ಬಜೆಟ್‌ ಆಗಿದೆ. ಬಜೆಟ್‌ ಅಧಿವೇಶನದ ಮೊದಲ ಹಂತ ಫೆಬ್ರವರಿ 13ಕ್ಕೆ ಮುಕ್ತಾಯವಾಗಲಿದೆ. ಮಾರ್ಚ್‌ 9ರಂದು ಬಜೆಟ್ ಅಧಿವೇಶನದ ಎರಡನೇ ಹಂತ ಶುರುವಾಗಿ, ಏಪ್ರಿಲ್‌ 2ರಂದು ಅಂತ್ಯಗೊಳ್ಳಲಿದೆ.

‘ವಿಬಿ–ಜಿ ರಾಮ್‌ ಜಿ‘

ಕೋಲಾಹಲ ಸಾಧ್ಯತೆ ಬಜೆಟ್‌ ಅಧಿವೇಶನದಲ್ಲಿ ವಿಬಿ– ಜಿ ರಾಮ್‌ ಜಿ ಕಾಯ್ದೆಯ ಕುರಿತು ವಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ಕೋಲಾಹಲ ನಡೆಯುವ ಸಾಧ್ಯತೆ ಇದೆ.

ನರೇಗಾವನ್ನು ಬದಲಿಸಿ ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಆಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆಯನ್ನಾಗಿ ಪರಿವರ್ತಿಸಿದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ದೇಶವ್ಯಾಪಿ ಹೋರಾಟ ಮಾಡುತ್ತಿದೆ. ಈ ಸಂದರ್ಭದಲ್ಲೇ ಬಜೆಟ್ ಅಧಿವೇಶನ ಆರಂಭಗೊಳ್ಳುತ್ತಿದೆ.

ಕಾಂಗ್ರೆಸ್ ನಡೆಸುತ್ತಿರುವ ಹೋರಾಟಕ್ಕೆ ಪ್ರತಿಯಾಗಿ ಬಿಜೆಪಿ ಕೂಡಾ ಹೊಸ ಕಾಯ್ದೆ ಕುರಿತು ಅಭಿಯಾನ ನಡೆಸುತ್ತಿದ್ದು ಹಳೆಯ ಕಾಯ್ದೆಯ ಲೋಪಗಳನ್ನು ಸರಿಪಡಿಸಲಾಗಿದೆ. ಇದೊಂದು ಸುಧಾರಣಾವಾದಿ ಕಾಯ್ದೆ ಎಂದು ಸಮರ್ಥಿಸಿಕೊಳ್ಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.