ಪ್ರಧಾನಿ ಮೋದಿ
ನವದೆಹಲಿ: ಕೇಂದ್ರ ಬಜೆಟ್‌ಗೆ ಕೆಲ ದಿನಗಳು ಬಾಕಿ ಉಳಿದಿದ್ದು, ಆರ್ಥಿಕ ತಜ್ಞರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ಬಜೆಟ್ ಕುರಿತಂತೆ ಅವರ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಮೋದಿ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದೇ 23ರಂದು ಬಜೆಟ್ ಮಂಡಿಸಲಿದ್ದಾರೆ.
ಆರ್ಥಿಕ ತಜ್ಞರ ಜೊತೆಗೆ ವಲಯವಾರು ನುರಿತ ವ್ಯಕ್ತಿಗಳು, ನೀತಿ ಆಯೋಗದ ಉಪಾಧ್ಯಕ್ಷರಾದ ಸುಮನ್ ಬೆರ್ರಿ ಮತ್ತು ಇತರರು ಸಭೆಯಲ್ಲಿ ಹಾಜರಿದ್ದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಂಪನಿ ವ್ಯವಹಾರಗಳ ಖಾತೆ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್, ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಮತ್ತು ಆರ್ಥಿಕ ತಜ್ಞ ಸುರ್ಜಿತ್ ಭಲ್ಲಾ ಮತ್ತು ಅಶೋಕ್ ಗುಲಾಟಿ ಹಾಗೂ ಬ್ಯಾಂಕರ್ ಕೆ.ವಿ. ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ಮೋದಿಯವರ 3.0 ಸರ್ಕಾರದ ಮೊದಲ ಬಜೆಟ್ ಇದಾಗಿದ್ದು, 2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಘೋಷಿಸುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.
ಆರ್ಥಿಕ ತಜ್ಞರು, ಕೈಗಾರಿಕೋದ್ಯಮಿಗಳು ಸೇರಿದಂತೆ ಹಲವರ ಜೊತೆ ಈಗಾಗಲೇ ನಿರ್ಮಲಾ ಸೀತಾರಾಮನ್ ಸಭೆ ನಡೆಸಿದ್ದಾರೆ.
ಹಲವು ತಜ್ಞರು ಸಾಮಾನ್ಯ ಜನರಿಗೆ ತೆರಿಗೆಯಿಂದ ವಿನಾಯಿತಿ ಕೊಡುವಂತೆ ಮನವಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
2023-24ರ ಸಾಲಿನಲ್ಲಿ ಆರ್ಥಿಕ ಬೆಳವಣಿಗೆ ದರ ಶೇಕಡ 8.2ರಷ್ಟು ದಾಖಲಾಗಿದೆ.
ಲೋಕಸಭೆಯ ಚುನಾವಣೆ ಇದ್ದುದರಿಂದ ಹಿಂದಿನ ಸರ್ಕಾರದಲ್ಲೂ ವಿತ್ತ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರು ಕಳೆದ ಫೆಬ್ರುವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.