ADVERTISEMENT

ಕೇಂದ್ರ ಬಜೆಟ್‌: ಕೃಷಿ ಸಾಲದ ಗುರಿ ₹20 ಲಕ್ಷ ಕೋಟಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 18:38 IST
Last Updated 1 ಫೆಬ್ರುವರಿ 2023, 18:38 IST
.
.   

ನವದೆಹಲಿ (ಪಿಟಿಐ): ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಯನ್ನು ಕೇಂದ್ರೀಕರಿಸಿ ಮುಂದಿನ ಹಣಕಾಸು ವರ್ಷದಲ್ಲಿ ಕೃಷಿ ಸಾಲದ ಗುರಿಯನ್ನು ₹ 20 ಲಕ್ಷ ಕೋಟಿಗೆ (ಶೇ 11ರಷ್ಟು ಏರಿಕೆ) ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಬುಧವಾರ ಘೋಷಿಸಿದೆ.

ಇದು ರೈತ ಸಮುದಾಯಕ್ಕೆ ಹೆಚ್ಚಿನ ಕೃಷಿ ಸಾಲವನ್ನು ಸಬ್ಸಿಡಿ ದರದಲ್ಲಿ ಒದಗಿಸುವ ಗುರಿಯನ್ನು ಹೊಂದಿದೆ.

ರೈತ ಕೇಂದ್ರಿತ ಪರಿಹಾರ ಕ್ರಮಗಳ ಭಾಗವಾಗಿ ‘ಡಿಜಿಟಲ್‌ ಮೂಲಸೌಕರ್ಯ’ ಅಭಿವೃದ್ಧಿ, ‘ಅಗ್ರಿ ಸ್ಟಾರ್ಟ್ಅಪ್’ಗಳ ಉತ್ತೇಜನಕ್ಕೆ ‘ಕೃಷಿ ವೇಗವರ್ಧಕ ನಿಧಿ’ ಸ್ಥಾಪನೆ, ತೋಟಗಾರಿಕೆಯನ್ನು ಪ್ರೋತ್ಸಾಹಿಸಲು ‘ಆತ್ಮನಿರ್ಭರ ತೋಟಗಾರಿಕಾ ಕ್ಲೀನ್‌ ಪ್ಲಾಂಟ್‌’ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ADVERTISEMENT

ಮೀನುಗಾರರು, ಮೀನು ಮಾರಾಟಗಾರರು ಹಾಗೂ ಈ ಕ್ಷೇತ್ರದ ಸೂಕ್ಷ್ಮ, ಸಣ್ಣ ಉದ್ಯಮಗಳ ಚಟುವಟಿಕೆಗಳನ್ನು ಮತ್ತಷ್ಟು ಸಕ್ರಿಯಗೊಳಿಸಿ, ಮಾರುಕಟ್ಟೆ ವಿಸ್ತರಿಸಲು ‘ಪಿ.ಎಂ ಮತ್ಸ್ಯ ಸಂಪದ’ದಲ್ಲಿ ಹೊಸ ಉಪ ಯೋಜನೆಯನ್ನು ₹6,000 ಕೋಟಿ ಹೂಡಿಕೆಯ ಗುರಿಯೊಂದಿಗೆ ಜಾರಿಗೊಳಿಸಲಾಗುತ್ತದೆ.

ರೈತ ಕೇಂದ್ರಿತ ಪರಿಹಾರ ಕ್ರಮಗಳ ಭಾಗವಾಗಿ ‘ಡಿಜಿಟಲ್‌ ಮೂಲಸೌಕರ್ಯ’ ಅಭಿವೃದ್ಧಿಪಡಿಸಲಾಗುವುದು. ಇದು ಎಲ್ಲ ರೈತರಿಗೂ ಮುಕ್ತವಾಗಿ ದೊರೆಯುವಂತೆ ಮಾಡಲಾಗುವುದು. ರೈತರಿಗೆ ಅಗತ್ಯವಿರುವ ಬೆಳೆ ಯೋಜನೆಗಳ ಕುರಿತ ಸಮಗ್ರ ಮಾಹಿತಿಯನ್ನು ಇದು ಒದಗಿಸುತ್ತದೆ. ಬೆಳೆಗೆ ಅಗತ್ಯವಿರುವ ಬೀಜ, ರಸಗೊಬ್ಬರ, ಕೀಟನಾಶಕದ ಮಾಹಿತಿ, ಕೃಷಿ ಸಾಲ, ಬೆಳೆ ವಿಮೆ, ಬೆಳೆಯ ಅಂದಾಜು, ಮಾರುಕಟ್ಟೆಯ ಜ್ಞಾನ, ‘ಅಗ್ರಿ– ಟೆಕ್‌’ ಉದ್ಯಮಗಳು ಮತ್ತು ‘ಸ್ಟಾರ್ಟ್‌ಅಪ್‌’ ಗಳ ಸ್ಥಾಪನೆಗೆ ಪೂರಕ ಮಾಹಿತಿ ಇದರಿಂದ ಲಭ್ಯವಾಗುತ್ತದೆ.

ಗ್ರಾಮೀಣ ಭಾಗದ ಯುವ ಉದ್ಯಮಿಗಳಿಗೆ ‘ಅಗ್ರಿ ಸ್ಟಾರ್ಟ್‌ಅಪ್‌’ಗಳನ್ನು ಆರಂಭಿಸಲು ಉತ್ತೇಜಿಸುವುದಕ್ಕೆ ‘ಕೃಷಿ ವೇಗವರ್ಧಕ ನಿಧಿ’ ಸ್ಥಾಪಿಸಲಾಗುವುದು. ರೈತರು ಎದುರಿಸುತ್ತಿರುವ ಸವಾಲುಗಳಿಗೆ ಹೊಸ ಮತ್ತು ಸುಲಭ ಪರಿಹಾರ ಒದಗಿಸುವ ಗುರಿಯನ್ನು ಈ ನಿಧಿ ಹೊಂದಿದೆ. ಇದು ಕೃಷಿ ಪದ್ಧತಿಯನ್ನು ಪರಿವರ್ತಿಸಲು, ಉತ್ಪಾದಕತೆ ಮತ್ತು ಲಾಭವನ್ನು ಹೆಚ್ಚಿಸಲು ಆಧುನಿಕ ತಂತ್ರಜ್ಞಾನಗಳನ್ನು ಒದಗಿಸುತ್ತದೆ.

ಹೆಚ್ಚು ಉದ್ದ ನೂಲಿನ ಹತ್ತಿಯ ಉತ್ಪಾದನೆ ವೃದ್ಧಿಸಲು ಸರ್ಕಾರಿ– ಖಾಸಗಿ ಸಹಭಾಗಿತ್ವದ (ಪಿಪಿಪಿ) ಮೂಲಕ ‘ಕ್ಲಸ್ಟರ್’ ಆಧಾರಿತ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು. ಈ ಮೂಲಕ ರೈತರು, ಸರ್ಕಾರ ಮತ್ತು ಉದ್ಯಮಗಳು ಸಂಬಂಧಿತ ವಸ್ತುಗಳ ಪೂರೈಕೆ, ವಿಸ್ತರಣೆ ಮತ್ತು ಮಾರುಕಟ್ಟೆ ಸಂಪರ್ಕ ವಿಷಯದಲ್ಲಿ ಜತೆಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.

ಅಧಿಕ ಮೌಲ್ಯದ ತೋಟಗಾರಿಕೆ ಬೆಳೆಗಳಿಗೆ ರೋಗಮುಕ್ತ, ಗುಣಮಟ್ಟದ ನೆಡು ಸಾಮಗ್ರಿಗಳನ್ನು ಲಭ್ಯವಾಗುವಂತೆ ಮಾಡಲು ‘ಆತ್ಮನಿರ್ಭರ ಕ್ಲೀನ್ ಪ್ಲಾಂಟ್ ಕಾರ್ಯಕ್ರಮ’ ರೂಪಿಸಲು ₹2,200 ಕೋಟಿ ಮೀಸಲಿಡಲಾಗುವುದು ಎಂದು ತಿಳಿಸಲಾಗಿದೆ.

ಪಿಎಂ ಪ್ರಣಾಮ್‌

ಭೂಮಿಯ ಫಲವತ್ತತೆ ಸಂರಕ್ಷಣೆ ಕುರಿತು ಅರಿವು ಮೂಡಿಸಲು ‘ಪಿಎಂ– ಪ್ರಣಾಮ್’ ಎಂಬ ಯೋಜನೆ ಆರಂಭಿಸಲಾಗುತ್ತಿದೆ. ಈ ಮೂಲಕ ಸಮತೋಲಿತ ರಸಗೊಬ್ಬರ ಬಳಕೆ ಮತ್ತು ಪರ್ಯಾಯ ಗೊಬ್ಬರಗಳ ಬಳಕೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ
ಪ್ರದೇಶಗಳನ್ನು ಉತ್ತೇಜಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.