ADVERTISEMENT

Union Budget 2022: ಕ್ರಿಪ್ಟೊಕರೆನ್ಸಿ ಆದಾಯಕ್ಕೆ ಶೇ 30ರಷ್ಟು ತೆರಿಗೆ

ಪಿಟಿಐ
Published 1 ಫೆಬ್ರುವರಿ 2022, 17:46 IST
Last Updated 1 ಫೆಬ್ರುವರಿ 2022, 17:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕ್ರಿಪ್ಟೊಕರೆನ್ಸಿಗಳ ವರ್ಗಾವಣೆಯಿಂದ ಬರುವ ಆದಾಯಕ್ಕೆ ಶೇಕಡ 30ರಷ್ಟು ತೆರಿಗೆ ವಿಧಿಸಲು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಸಂಸತ್‌ನಲ್ಲಿ ಕೇಂದ್ರ ಬಜೆಟ್‌ ಅಂಗೀಕಾರವಾದ ನಂತರ, ಏಪ್ರಿಲ್‌ 1ರಿಂದ ಪ್ರಸ್ತಾವಿತ ತೆರಿಗೆಯು ಜಾರಿಗೆ ಬರಲಿದೆ.

ಈ ಮೂಲಕ ಕ್ರಿಪ್ಟೊಕರೆನ್ಸಿಗಳನ್ನೂ ತೆರಿಗೆ ವ್ಯಾಪ್ತಿಗೆ ತರುವ ಕುರಿತು ಕೇಂದ್ರ ಸರ್ಕಾರವು ತನ್ನ ನಿರ್ಧಾರ ಸ್ಪಷ್ಟಪಡಿಸಿದೆ. ಒಂದು ವರ್ಷದಲ್ಲಿ ₹ 10 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ವರ್ಚುವಲ್‌ ಕರೆನ್ಸಿಗಳ ವರ್ಗಾವಣೆಯ ಮೇಲೆ ಶೇ 1ರಷ್ಟು ಟಿಡಿಎಸ್‌ (ಮೂಲದಲ್ಲೇ ತೆರಿಗೆ ಕಡಿತ) ಮಾಡುವ ಕುರಿತು ಪ್ರಸ್ತಾಪಿಸಲಾಗಿದೆ. ಕ್ರಿಪ್ಟೊ ಮತ್ತು ಡಿಜಿಟಲ್‌ ಸ್ವತ್ತನ್ನು ಉಡುಗೊರೆಯಾಗಿ ನೀಡುವುದಕ್ಕೂ ತೆರಿಗೆ ಕೊಡಬೇಕಾಗುತ್ತದೆ.

ಕ್ರಿಪ್ಟೊಕರೆನ್ಸಿ ಮಾರಾಟದಿಂದ ಬರುವ ಆದಾಯಕ್ಕೆ ಶೇ 30ರಷ್ಟು ತೆರಿಗೆ ವಿಧಿಸಿರುವುದು ಲಾಟರಿ, ಗೇಮ್‌ ಷೋ ಮತ್ತು ಪಜಲ್‌ಗಳಲ್ಲಿ ಗೆಲ್ಲುವುದರಿಂದ ಬರುವ ತೆರಿಗೆಗೆ ಸಮನಾಗಿದೆ ಎಂದು ತಜ್ಞರು ಹೇಳಿದ್ದಾರೆ. ಭಾರತವು ಅಂತಿಮವಾಗಿ ಕ್ರಿಪ್ಟೊ ವಲಯವನ್ನು ಕಾನೂನುಬದ್ಧಗೊಳಿಸುವ ಹಾದಿಯಲ್ಲಿದೆ ಎಂದು ಕ್ರಿಪ್ಟೊ ಎಕ್ಸ್‌ಚೇಂಜ್‌ ‘ವಜೀರ್‌ಎಕ್ಸ್‌’ನ ಸ್ಥಾಪಕ ನಿಶ್ಚಲ್‌ ಶೆಟ್ಟಿ ಹೇಳಿದ್ದಾರೆ.

ADVERTISEMENT

ಕ್ರಿಪ್ಟೊ ಕರೆನ್ಸಿಗಳ ಬಗ್ಗೆ ಕೇಂದ್ರ ಸರ್ಕಾರವು ಸ್ಪಷ್ಟತೆ ನೀಡಿರುವುದರಿಂದ, ಕ್ರಿಪ್ಟೊ ಉದ್ಯಮಕ್ಕೆ ಹಣಕಾಸಿನ ಸೇವೆಗಳನ್ನು ನೀಡುವುದು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಿಡಿಎಸ್‌ನಿಂದಾಗಿ ಕ್ರಿಪ್ಟೊ ವರ್ಗಾವಣೆಯ ಮೇಲೆ ಉತ್ತಮ ರೀತಿಯಲ್ಲಿ ನಿಗಾ ಇರಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಲಿದೆ ಎಂದು ಶಾರ್ದೂಲ್‌ ಅಮರ್‌ಚಂದ್‌ ಮಂಗಲ್‌ದಾಸ್‌ ಆ್ಯಂಡ್‌ ಕಂಪನಿಯ ಪಾಲುದಾರ ಅಮಿತ್‌ ಸಿಂಘಾನಿಯಾ ಹೇಳಿದ್ದಾರೆ.

ಡಿಜಿಟಲ್‌ ಸ್ವತ್ತು ಅಥವಾ ಕ್ರಿಪ್ಟೊ ಮೇಲೆ ತೆರಿಗೆ ವಿಧಿಸುವ ಕ್ರಮವು ಸರಿಯಾದುದು. ಉದ್ಯಮದ ಬಗ್ಗೆ ಸ್ಪಷ್ಟತೆ ಮತ್ತು ವಿಶ್ವಾಸವನ್ನು ಇದು ನೀಡುತ್ತದೆ ಎಂದು ಕಾಯಿನ್‌ಡಿಸಿಎಕ್ಸ್‌ನ ಸಹ ಸ್ಥಾಪಕ ಸುಮಿತ್‌ ಗುಪ್ತಾ ತಿಳಿಸಿದ್ದಾರೆ.

ಆರ್‌ಬಿಐನಿಂದ ಡಿಜಿಟಲ್‌ ಕರೆನ್ಸಿ
ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) 2022ರ ಏಪ್ರಿಲ್‌ನಿಂದ ಡಿಜಿಟಲ್ ಕರೆನ್ಸಿಯನ್ನು ಹೊರತರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್‌ ಕರೆನ್ಸಿಯನ್ನು (ಸಿಬಿಡಿಸಿ) ಪರಿಚಯಿಸುವುದರಿಂದ ಡಿಜಿಟಲ್‌ ಆರ್ಥಿಕತೆಗೆ ದೊಡ್ಡ ಉತ್ತೇಜನ ಸಿಗಲಿದೆ. ಡಿಜಿಟಲ್‌ ಕರೆನ್ಸಿಯಿಂದಾಗಿ ಕರೆನ್ಸಿ ನಿರ್ವಹಣಾ ವ್ಯವಸ್ಥೆಯಲ್ಲಿ ದಕ್ಷತೆಯೂ ಬರಲಿದೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಸಿಬಿಡಿಸಿ ಡಿಜಿಟಲ್‌ ಅಥವಾ ವರ್ಚುವಲ್‌ ಕರೆನ್ಸಿ ಆಗಿರಲಿದ್ದು, ಇದನ್ನು ಖಾಸಗಿ ವರ್ಚುವಲ್‌ ಕರೆನ್ಸಿ ಅಥವಾ ಕ್ರಿಪ್ಟೊಕರೆನ್ಸಿಗಳ ಜೊತೆ ಹೋಲಿಕೆ ಮಾಡಲಾಗದು. ನಿರ್ದಿಷ್ಟ ವಿತರಕರು ಇಲ್ಲದಿರುವುದರಿಂದ ಖಾಸಗಿ ವರ್ಚುವಲ್ ಕರೆನ್ಸಿಗಳು ಯಾವುದೇ ವ್ಯಕ್ತಿಯ ಸಾಲ ಅಥವಾ ಹೊಣೆಗಾರಿಕೆಗಳನ್ನು ಪ್ರತಿನಿಧಿಸುವುದಿಲ್ಲ. ಅವು ಹಣವಲ್ಲ ಮತ್ತು ಕರೆನ್ಸಿಯಂತೂ ಅಲ್ಲವೇ ಅಲ್ಲ.

ಡಿಜಿಟಲ್‌ ಕರೆನ್ಸಿ ಹೊರತರುವ ಬಗ್ಗೆ ಆರ್‌ಬಿಐನ ಹಿರಿಯ ಅಧಿಕಾರಿಗಳಿಂದ ಈಚಿನ ತಿಂಗಳುಗಳಲ್ಲಿ ಹಲವು ಬಾರಿ ಹೇಳಿಕೆಗಳು ಬಂದಿದ್ದವು. ಈಗ ಕೇಂದ್ರ ಬಜೆಟ್‌,ಆ ಕರೆನ್ಸಿ ಯಾವಾಗ ಸಿಗಲಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿದೆ.

ಅಂಚೆ ಕಚೇರಿ ಖಾತೆ ನಿರ್ವಹಣೆ ಸುಗಮ
ವಿತ್ತೀಯ ಒಳಗೊಳ್ಳುವಿಕೆಯ ಭಾಗವಾಗಿ ದೇಶದಲ್ಲಿ ಇರುವ 1.5 ಲಕ್ಷ ಅಂಚೆ ಕಚೇರಿಗಳನ್ನು ಬ್ಯಾಂಕಿಂಗ್‌ ವ್ಯವಸ್ಥೆಯೊಂದಿಗೆ ಸಂಪರ್ಕಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಜನರು ತಮ್ಮ ಅಂಚೆ ಕಚೇರಿ ಖಾತೆಗಳನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಬಹುದು. ಅಂಚೆ ಇಲಾಖೆಯ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಾಗೂ ಬೇರೆ ಬ್ಯಾಂಕ್‌ಗಳಿಗೆ ಹಣ ವರ್ಗಾವಣೆಯನ್ನೂ ಮಾಡಬಹುದಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಇರುವ ರೈತರು ಮತ್ತು ಹಿರಿಯ ನಾಗರಿಕರಿಗೆ ಇದರಿಂದ ಹೆಚ್ಚಿನ ಅನುಕೂಲ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಸದ್ಯ ಅಂಚೆ ಕಚೇರಿಗಳು ಉಳಿತಾಯ ಖಾತೆ ಸೇವೆಗಳನ್ನು ಹಾಗೂ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಮೂಲಕ ಪೇಮೆಂಟ್ಸ್‌ ಬ್ಯಾಂಕ್‌ ಸೇವೆಗಳನ್ನು ನೀಡುತ್ತಿವೆ.

75 ಡಿಜಿಟಲ್‌ ಬ್ಯಾಂಕಿಂಗ್: ಡಿಜಿಟಲ್ ಪಾವತಿಗೆ ಉತ್ತೇಜನ ನೀಡಲು ವಾಣಿಜ್ಯ ಬ್ಯಾಂಕ್‌ಗಳು ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್‌ ಬ್ಯಾಂಕ್‌ಗಳನ್ನು ಸ್ಥಾಪಿಸಲಿವೆ.

ಐಟಿಆರ್‌ ತಿದ್ದುಪಡಿಗೆ ಏಕಗವಾಕ್ಷಿ: ಆದಾಯ ತೆರಿಗೆ ಲೆಕ್ಕಪತ್ರ (ಐಟಿಆರ್‌) ಸಲ್ಲಿಕೆಯಲ್ಲಿ ಆಗುವ ದೋಷಗಳನ್ನು ಸರಿಪಡಿಸಲು ಏಕಗವಾಕ್ಷಿ ವ್ಯವಸ್ಥೆಯನ್ನು ಸರ್ಕಾರ ನೀಡಲಿದೆ. ಪರಿಷ್ಕೃತ ಐಟಿಆರ್ ಅನ್ನು ಎರಡು ವರ್ಷಗಳ ಒಳಗಾಗಿ ಸಲ್ಲಿಸಬೇಕು.

5ಜಿ: ದೂರಸಂಪರ್ಕ ಕಂಪನಿಗಳು 2022–23ನೇ ಹಣಕಾಸು ವರ್ಷದಲ್ಲಿಯೇ 5ಜಿ ಸೇವೆಗಳನ್ನು ಜಾರಿಗೊಳಿಸಲು ಅನುಕೂಲ ಆಗುವಂತೆ ತರಂಗಾಂತರ ಹರಾಜು ನಡೆಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ದೂರಸಂಪರ್ಕ ವಲಯ ಅದರಲ್ಲಿಯೂ ನಿರ್ದಿಷ್ಟವಾಗಿ 5ಜಿಯಿಂದ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆಯ ಭಾಗವಾಗಿ 5ಜಿ ವ್ಯವಸ್ಥೆಯನ್ನು ಬಲಪಡಿಸಲು ವಿನ್ಯಾಸ ಆಧಾರಿತ ತಯಾರಿಕೆಗೆ ಚಾಲನೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

ಬ್ಯಾಟರಿ ಸ್ವ್ಯಾಪಿಂಗ್‌ ನೀತಿ: ದೇಶದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸಲು ಬ್ಯಾಟರಿ ಸ್ವ್ಯಾಪಿಂಗ್ ನೀತಿ ಮತ್ತು ಪರಸ್ಪರ ಕಾರ್ಯಸಾಧ್ಯತೆಯ ಮಾನದಂಡಗಳನ್ನು ಪರಿಚಯಿಸುವುದಾಗಿ ಸರ್ಕಾರ ಹೇಳಿದೆ. ಇದರಿಂದಾಗಿ ಈ ಕ್ಷೇತ್ರದಲ್ಲಿನ ನವೋದ್ಯಮಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ.

ಬ್ಯಾಟರಿ ಸ್ವ್ಯಾಪಿಂಗ್‌ ಮತ್ತು ಚಾರ್ಜಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಉತ್ತೇಜನವನ್ನು ನೀಡುವುದರಿಂದ ಸುಸ್ಥಿರ ಮತ್ತು ನವೀನ ವ್ಯಾಪಾರ ಮಾದರಿಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ವಲಯಕ್ಕೆ ಪ್ರೋತ್ಸಾಹ ಸಿಗಲಿದೆ ಎಂದು ಮಜಂತಾ ಕಂಪನಿಯ ನಿರ್ದೇಶಕ ಸಿಇಒ ಮ್ಯಾಕ್ಸ್‌ವೆಲ್‌ ಲೆವಿಸ್‌ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.