ADVERTISEMENT

Budget: ಚುನಾವಣೆ ಹೊಸ್ತಿಲಲ್ಲಿರುವ ಬಿಹಾರಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ

ಪಿಟಿಐ
Published 1 ಫೆಬ್ರುವರಿ 2025, 10:46 IST
Last Updated 1 ಫೆಬ್ರುವರಿ 2025, 10:46 IST
   

ನವದೆಹಲಿ: ಬಿಹಾರದ ‘ಮಧುಬನಿ’ ಸೀರೆ ಉಟ್ಟು ಬಜೆಟ್‌ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಸಾಲಿನ ಬಜೆಟ್‌ನಲ್ಲಿ ಬಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ರಾಜ್ಯದಲ್ಲಿ ಮಖಾನಾ ಮಂಡಳಿ ಸ್ಥಾಪನೆ, ಪಶ್ಚಿಮ ಕೋಶಿ ಕಾಲುವೆ ಯೋಜನೆಗೆ ಹಣಕಾಸಿನ ನೆರವು ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.

ಎನ್‌ಡಿಎ ಆಡಳಿತವಿರುವ ಬಿಹಾರದಲ್ಲಿ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ.

‍‘ಕೇಂದ್ರ ಸರ್ಕಾರವು ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆಯನ್ನು ಸ್ಥಾಪಿಸಲಿದೆ’ ಎಂದು ಬಜೆಟ್‌ ಭಾಷಣದ ವೇಳೆ ನಿರ್ಮಲಾ ಸೀತಾರಾಮನ್‌ ಅವರು ಹೇಳಿದರು.

ADVERTISEMENT

‘ಪ್ರಯಾಣಿಕ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಿದ್ದು, ಇದಕ್ಕೆ ಪೂರಕವಾಗಿ ಬಿಹಾರದಲ್ಲಿ ಗ್ರೀನ್‌ ಫೀಲ್ಡ್‌ ವಿಮಾನ ನಿಲ್ದಾಣ ಮಂಜೂರು ಮಾಡಲಾಗುತ್ತದೆ. ಅಲ್ಲದೇ ಪಟ್ನಾ ವಿಮಾನ ನಿಲ್ದಾಣದ ಸಾಮರ್ಥ್ಯ ಹೆಚ್ಚಳ ಮತ್ತು ಬ್ರೌನ್‌ಫೀಲ್ಡ್‌ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗುವುದು’ ಎಂದರು.

‘ಮಖಾನಾ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯನ್ನು ಸುಧಾರಿಸಲು ಬಿಹಾರದಲ್ಲಿ ಮಖಾನಾ ಮಂಡಳಿಯನ್ನು ಸ್ಥಾಪಿಸಲಾಗುತ್ತದೆ. ಈ ಮಂಡಳಿಯು ಮಖಾನಾ ಬೆಳಗಾರರಿಗೆ ತರಬೇತಿಯನ್ನು ನೀಡುವುದರ ಜೊತೆಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತದೆ’ ಎಂದು ಅವರು ಹೇಳಿದರು.

‘ಪಶ್ಚಿಮ ಕೋಶಿ ಕಾಲುವೆ ಯೋಜನೆಗಾಗಿ ಹಣಕಾಸು ನೆರವು ನೀಡಲಿದೆ. ಇದರಿಂದ ಮಿಥಿಲಾಂಚಲ್ ಪ್ರದೇಶದಲ್ಲಿ ಸುಮಾರು 50 ಸಾವಿರ ಎಕರೆ ಭೂಮಿಯಲ್ಲಿ ಸಾಗುವಳಿ ಮಾಡುವ ರೈತರು ಪ್ರಯೋಜನ ಪಡೆಯಲಿದ್ದಾರೆ’ ಎಂದರು.

ಇನ್ನು, ರಾಜ್ಯದ ಐದು ಐಐಟಿಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸುವುದು ಮತ್ತು ಐಐಟಿ ಪಟ್ನಾದ ಸಾಮರ್ಥ್ಯ ಹೆಚ್ಚಿಸಲು ಬೆಂಬಲ ನೀಡುವುದಾಗಿಯೂ ಹೇಳಿದರು.

‘ಕಳೆದ 10 ವರ್ಷದಲ್ಲಿ ರಾಜ್ಯದ 23 ಐಐಟಿಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 65 ಸಾವಿರದಿಂದ 1.35 ಲಕ್ಷಕ್ಕೆ ಏರಿಕೆಯಾಗಿದೆ. 2014ರ ನಂತರ ಸ್ಥಾಪನೆಯಾದ 5 ಐಐಟಿಗಳಲ್ಲಿ 6,500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಲು ಹೆಚ್ಚಿನ ಮೂಲಸೌಕರ್ಯ ಒದಗಿಸಲಾಗುವುದು. ಅಲ್ಲದೇ ಐಐಟಿ ಪಟ್ನಾದಲ್ಲಿ ವಸತಿ ನಿಲಯ ಮತ್ತು ಇತರ ಮೂಲ ಸೌಕರ್ಯಗಳ ಸಾಮರ್ಥ್ಯವನ್ನು ವಿಸ್ತರಿಸಲಾಗುತ್ತದೆ’ ಎಂದು ಹೇಳಿದರು.

ಬಿಹಾರಾದಲ್ಲಿ ಮಖಾನಾ ಮಂಡಳಿ ಸ್ಥಾಪಿಸುವ ನಿರ್ಧಾರವನ್ನು ಜೆಡಿ(ಯು) ಕಾರ್ಯಾಧ್ಯಕ್ಷ ಸಂಜಯ್ ಝಾ ಶ್ಲಾಘಿಸಿದ್ದಾರೆ. ಇದು ರೈತರು ಮತ್ತು ಉದ್ಯಮಿಗಳಿಗೆ ಹೊಸ ಅವಕಾಶ ನೀಡುತ್ತದೆ ಎಂದಿದ್ದಾರೆ.

‘ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆ, ಉದ್ಯಮಶೀಲತೆ ಮತ್ತು ನಿರ್ವಹಣೆಯ ಸ್ಥಾಪನೆಯು ಪೂರ್ವ ಭಾಗದಲ್ಲಿ ಆಹಾರ ಸಂಸ್ಕರಣಾ ಚಟುವಟಿಕೆಗಳನ್ನು ಬಲಪಡಿಸುತ್ತದೆ. ರೈತರ ಉತ್ಪನ್ನಗಳ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ ಅವರ ಆದಾಯವನ್ನು ದ್ವಿಗುಣಗೊಳಿಸುತ್ತದೆ’ ಎಂದು ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಸಚಿವ ಚಿರಾಗ್ ಪಾಸ್ವಾನ್ ಹೇಳಿದರು.

‘ಮಧುಬನಿ’ ಸೀರೆ ಉಟ್ಟು ಬಜೆಟ್ ಮಂಡನೆ:

ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್ ಅವರು ಇಂದಿನ ಬಜೆಟ್‌ ಮಂಡನೆ ವೇಳೆ ಬಿಹಾರದ ಮಧುಬನಿ ಸೀರೆ ಉಟ್ಟು ಗಮನ ಸೆಳೆದಿದ್ದರು.

ನಿರ್ಮಲಾ ಅವರು ಇತ್ತೀಚೆಗೆ ಮಿಥಿಲಾ ಆರ್ಟ್‌ ಇನ್‌ಸ್ಟಿಟ್ಯೂಟ್‌ಗೆ ಹೋಗಿದ್ದಾಗ, ಪದ್ಮಶ್ರೀ ಪುರಸ್ಕೃತೆ ದುಲಾರಿ ದೇವಿ ಅವರನ್ನು ಭೇಟಿಯಾಗಿದ್ದರು. ಬಿಹಾರದಲ್ಲಿ ಮಧುಬನಿ ಕಲೆಯ ಕುರಿತು ಆತ್ಮೀಯವಾಗಿ ಮಾತುಕತೆ ನಡೆಸಿದ್ದರು. ಇದೇ ವೇಳೆ ದುಲಾರಿ ದೇವಿ ಅವರು ಸಚಿವೆಗೆ ಸೀರೆಯನ್ನು ನೀಡಿ, ಬಜೆಟ್‌ ದಿನ ಅದನ್ನು ಧರಿಸುವಂತೆ ಮನವಿ ಮಾಡಿದ್ದರು.

ದುಲಾರಿ ದೇವಿ ಅವರಿಗೆ 2021ರಲ್ಲಿ ಪದ್ಮಶ್ರೀ ಗೌರವ ನೀಡಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.