
ನವದೆಹಲಿ: ಭೌಗೋಳಿಕ ರಾಜಕೀಯ ಅನಿಶ್ಚಿತತೆ, ಬಂಡವಾಳದ ಹೊರ ಹರಿವು, ಅಮೆರಿಕದ ಸುಂಕ ಹೇರಿಕೆಯಿಂದ ಭಾರತದ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರದಂತೆ ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿ ಮಧ್ಯೆ ಸಮನ್ವಯ ಕಾಯ್ದುಕೊಳ್ಳುವ ಉಪಕ್ರಮಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026–27ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ.
ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಗಾತ್ರವನ್ನೇ ಕೇಂದ್ರ ಸರ್ಕಾರ ಅಭಿವೃದ್ಧಿಯ ಮಾನದಂಡವಾಗಿ ಬಿಂಬಿಸಿಕೊಳ್ಳುತ್ತಿದೆ ಎಂಬ ವಿರೋಧ ಪಕ್ಷಗಳ ಟೀಕೆಗಳ ನಡುವೆಯೇ, ಸೀತಾರಾಮನ್ ಒಂಬತ್ತನೆಯ ಬಾರಿಗೆ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ.
ಆರ್‌ಬಿಐ ರೆಪೊ ದರ ಇಳಿಕೆ ಮಾಡಿರುವುದು, ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಕಡಿತ ಮಾಡಿರುವುದು ಈಗಾಗಲೇ ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಹಣದುಬ್ಬರವೂ ಇಳಿಕೆ ಕಂಡಿದೆ. ಅಮೆರಿಕವು ಶೇಕಡ 50ರಷ್ಟು ಪ್ರತೀಕಾರದ ಸುಂಕ ವಿಧಿಸಿದರೂ ಭಾರತವು ಪ್ರಗತಿ ದರದಲ್ಲಿ ‘ಸ್ಥಿರತೆ’ ಕಾಯ್ದುಕೊಂಡಿದ್ದು ಇದೇ ಕಾರಣಕ್ಕೆ ಎನ್ನುತ್ತಾರೆ ಆರ್ಥಿಕ ವಿಶ್ಲೇಷಕರು.
ಈ ಹಂತದಲ್ಲಿ ಜಾಗತಿಕ ವ್ಯಾಪಾರ ಅಸ್ಥಿರತೆ, ಚಿನ್ನ ಬೆಳ್ಳಿ ಧಾರಣೆಯಲ್ಲಿ ಅಪಾಯಕಾರಿ ಏರಿಕೆ, ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಕುಸಿತ ಮತ್ತಿತರರ ಸವಾಲುಗಳನ್ನು ಮೆಟ್ಟಿ ನಿಲ್ಲಲು ಬೇಕಿರುವ ಕ್ರಮಗಳು ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆಗಳಿವೆ.
ದೇಶೀಯ ಮಟ್ಟದಲ್ಲಿ ತಯಾರಿಕೆಯನ್ನು ಹೆಚ್ಚಿಸಿ ಬಳಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ಕ್ರಮ ವಹಿಸಲಿದೆ. ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಹೆಚ್ಚಿಸುವುದರ ಜತೆಯಲ್ಲೇ, ವಿತ್ತೀಯ ಕೊರತೆ ಹೆಚ್ಚದಂತೆ ನೋಡಿಕೊಳ್ಳಲೂ ಗಮನ ಹರಿಸುವ ಸಾಧ್ಯತೆಗಳಿವೆ.
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು 10 ಬಾರಿ ಬಜೆಟ್ ಮಂಡಿಸಿದ್ದರು. ಅವರ ದಾಖಲೆಯ ಸಮೀಪಕ್ಕೆ ನಿರ್ಮಲಾ ಸೀತಾರಾಮನ್ ಬಂದಿದ್ದಾರೆ.
ಬಜೆಟ್ ಭಾನುವಾರ ಮಂಡನೆ ಆಗುತ್ತಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲನೆಯ ಬಾರಿ ಆಗಿದೆ. 1999ರ ಫೆಬ್ರುವರಿ 28ರಂದು ಅಂದಿನ ಹಣಕಾಸು ಸಚಿವರಾಗಿದ್ದ ಯಶವಂತ ಸಿನ್ಹಾ ಅವರು ಬಜೆಟ್ ಮಂಡಿಸಬೇಕಿತ್ತು. ಆದರೆ, ಅಂದು ಭಾನುವಾರವಾದ್ದರಿಂದ, ಒಂದು ದಿನ ಮುಂಚಿತವಾಗಿ ಫೆಬ್ರುವರಿ 27ರಂದು ಅವರು ಬಜೆಟ್ ಮಂಡಿಸಿದರು.
* ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ ಸಾಧ್ಯತೆ ಕಡಿಮೆ
* ಮಧ್ಯಮ ವರ್ಗದ ಮೇಲಿನ ಹೊರೆ ಕಡಿಮೆ ಮಾಡಿ, ಬಳಕೆಗೆ ಉತ್ತೇಜನ
* ಕಾರ್ಪೊರೇಟ್ ತೆರಿಗೆಯಲ್ಲಿ ಯಥಾಸ್ಥಿತಿ ಸಾಧ್ಯತೆ
* ಜಾಗತಿಕ ವ್ಯಾಪಾರ ಅಸ್ಥಿರತೆ, ಪ್ರತಿಸುಂಕ ಸುಂಕ ಎದುರಿಸಲು ಕ್ರಮ
* ಪೆಟ್ರೋಲ್– ಡೀಸೆಲ್ ಮೇಲಿನ ಅಬಕಾರಿ ಸುಂಕ ಏರಿಕೆ ಸಾಧ್ಯತೆ. ಆದರೆ, ಅದನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಕಡಿಮೆ
* ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ರಾಜ್ಯಗಳಿಗೆ ಹೊಸ ಕೊಡುಗೆಗಳ ಘೋಷಣೆ ಸಾಧ್ಯತೆ
* ಎಂಎಸ್‌ಎಂಇ ವಲಯಕ್ಕೆ ಪ್ರೋತ್ಸಾಹ– ಸಾಲ ಖಾತರಿ ಯೋಜನೆ
* ಎಲೆಕ್ಟ್ರಿಕ್ ಮೊಬಿಲಿಟಿ, ಗ್ರೀನ್ ಹೈಡ್ರೋಜನ್, ಶುದ್ಧ ಇಂಧನ ಉಪಕರಣ ವಲಯಕ್ಕೆ ಉತ್ತೇಜನ. ಈ ಕ್ಷೇತ್ರದಲ್ಲಿ ಆಮದು ತಗ್ಗಿಸಲು ಕ್ರಮ
* ಜಾಗತಿಕ ಅಸ್ಥಿರತೆ ಕಾರಣದಿಂದ ಇಂಧನ ಭದ್ರತೆಗೆ ಯೋಜನೆ
* ತೆರಿಗೆ ಕಡಿತವು ಸರ್ಕಾರದ ಆದಾಯಕ್ಕೆ ಹೊಡೆತ ನೀಡುವುದರಿಂದ ಈ ಆಯ್ಕೆಯನ್ನು ಕೆಲವು ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸಬಹುದು
* ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಸ್ಥಿರಗೊಳ್ಳದ ಹೊರತು ಹೂಡಿಕೆದಾರರ ವಿಶ್ವಾಸವನ್ನು ಶೀಘ್ರವಾಗಿ ಮರುಸ್ಥಾಪಿಸುವುದು ಕಷ್ಟ
* ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಕುಸಿಯುತ್ತಿರುವುದರಿಂದ ವಿದೇಶಿ ಹೂಡಿಕೆದಾರಿಂದ ಷೇರುಗಳ ಮಾರಾಟ ಹೆಚ್ಚಿದೆ
* ರಕ್ಷಣಾ ವಲಯ, ರೈಲ್ವೆ, ರಸ್ತೆ, ನಗರ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ವಿದ್ಯುತ್. ಬಡ್ಡಿರಹಿತ ಸಾಲಗಳ ಮೂಲಕ ಈ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಾಧ್ಯತೆ
* ತಯಾರಿಕಾ ವಲಯಕ್ಕೆ ಉತ್ತೇಜನ, ಕೌಶಲ ಅಭಿವೃದ್ಧಿಗೆ ಪ್ರೋತ್ಸಾಹ
* ತಯಾರಿಕಾ ಸಾಮರ್ಥ್ಯ ವೃದ್ಧಿ, ರಫ್ತು ಮತ್ತು ಉದ್ಯೋಗಾವಕಾಶ ಸೃಷ್ಟಿಗೆ ಹೊಸ ಉಪಕ್ರಮ (ಪಿಎಲ್‌ಐ) ಜಾರಿ
ಸರ್ಕಾರದ ಹಿಂದಿನ ದಾಖಲೆ ನೋಡಿದರೆ ಬಜೆಟ್ ಬಡವರ ನೋವು ಕಡಿಮೆ ಮಾಡುವ ಸಾಧ್ಯತೆ ಕಡಿಮೆ– ಕಪಿಲ್ ಸಿಬಲ್ ರಾಜ್ಯಸಭಾ ಸದಸ್ಯ
ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ. ಸದ್ಯ ವಿಶ್ವದ ನಾಲ್ಕನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿರುವ ಭಾರತ 2030ರ ವೇಳೆಗೆ ಜಪಾನನ್ನು ಹಿಂದಿಕ್ಕಿ ವಿಶ್ವದ ಮೂರನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಗುರುವಾರ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.8ರಿಂದ ಶೇ 7.2ರ ಮಟ್ಟದಲ್ಲಿ ಇರಲಿದೆ ಎಂದು ಅಂದಾಜು ಮಾಡಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.