ಹೂಡಿಕೆ ಮಾಡಿ ಮರೆತು ಹೋಗಿರುವ, ಚಾಲ್ತಿಯಲ್ಲಿ ಇರದೆ ನಿಷ್ಕ್ರಿಯಗೊಂಡಿರುವ ಹಾಗೂ ವಾರಸುದಾರರನ್ನು ಪತ್ತೆ ಹಚ್ಚಲು ಸಾಧ್ಯವಾಗದ ಮ್ಯೂಚುವಲ್ ಫಂಡ್ (ಎಂ.ಎಫ್) ಹೂಡಿಕೆ ಖಾತೆಗಳ ಪತ್ತೆಗೆ ಅನುವಾಗುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ‘ಮಿತ್ರ’ ಹೆಸರಿನ ವೇದಿಕೆಯನ್ನು ರೂಪಿಸಿದೆ.
ಮ್ಯೂಚುವಲ್ ಫಂಡ್ ಇನ್‌ವೆಸ್ಟ್‌ಮೆಂಟ್ ಟ್ರೇಸಿಂಗ್ ಮತ್ತು ರಿಟ್ರೀವಲ್ ಅಸಿಸ್ಟೆಂಟ್ ಎಂಬುದು ‘ಮಿತ್ರ’ದ ವಿಸ್ತೃತ ರೂಪ. ಹಲವಾರು ಹಳೆಯ ಮ್ಯೂಚುವಲ್ ಫಂಡ್ ಖಾತೆಗಳು ಚಾಲ್ತಿಯಲ್ಲಿರದ ಕಾರಣ ಹೂಡಿಕೆದಾರರು ಅಥವಾ ಅವರ ವಾರಸುದಾರರು ಹಣ ಪಡೆಯುವುದು ಕಷ್ಟಕರವಾಗಿದೆ. ಸೆಬಿ ಪ್ರಕಾರ ಬರೋಬ್ಬರಿ ₹500 ಕೋಟಿ ಮೊತ್ತವು ಯಾರೂ ದಿಕ್ಕಿಲ್ಲದೆ ಮ್ಯೂಚುವಲ್ ಫಂಡ್ ಕಂಪನಿಗಳ ಬಳಿ ಕೊಳೆಯುತ್ತಿದೆ.
ಅಂತಹ ಕ್ಲೇಮು ಮಾಡದ ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಪತ್ತೆ ಹಚ್ಚಲು ಮತ್ತು ದುಡ್ಡನ್ನು ಅರ್ಹರು ಮರಳಿ ಪಡೆದುಕೊಳ್ಳಲು ‘ಮಿತ್ರ’ ನೆರವಿಗೆ ಬರುತ್ತದೆ. ಅಲ್ಲದೆ, ಕೆವೈಸಿ ಪೂರ್ಣಗೊಳಿಸದ, ಮ್ಯೂಚುವಲ್ ಫಂಡ್ ಖಾತೆಗಳನ್ನು ಅಪ್‌ಡೇಟ್ ಮಾಡಿ ಸಂಭಾವ್ಯ ವಂಚನೆ ತಪ್ಪಿಸಲು ಸಹ ಸಹಾಯ ಮಾಡಲಿದೆ.
ಮಿತ್ರ ಪೋರ್ಟಲ್ ಏಕೆ ಅಗತ್ಯ?: ಆರಂಭಿಕ ಹಂತಗಳಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗಳ ಡಿಜಿಟಲೀಕರಣ ಆಗಿರಲಿಲ್ಲ. ಪತ್ರದ ರೂಪದಲ್ಲಿ ಹೂಡಿಕೆ ದಾಖಲೆಗಳನ್ನು ಹೂಡಿಕೆದಾರನಿಗೆ ನೀಡಲಾಗುತ್ತಿತ್ತು. ತಂತ್ರಜ್ಞಾನದ ಬೆಳವಣಿಗೆ ಮತ್ತು ಕೆವೈಸಿ ಪದ್ಧತಿ ಪರಿಚಯಿಸಿದ ನಂತರ ಮ್ಯೂಚುವಲ್ ಫಂಡ್ ಹೂಡಿಕೆ ಕಂಪನಿಗಳು ಡಿಜಿಟಲ್ ದಾಖಲೆಗಳ ವಿತರಣೆಗೆ ಮುಂದಾದವು.
ಆದರೆ, ಅನೇಕರು ತಂತ್ರಜ್ಞಾನದ ಅಳವಡಿಕೆ ನಂತರವೂ ಮ್ಯೂಚುವಲ್ ಫಂಡ್ ಹೂಡಿಕೆಗಳ ಕೆವೈಸಿ ಮತ್ತು ಡಿಜಿಟಲೀಕರಣ ಮಾಡಿಕೊಳ್ಳಲಿಲ್ಲ. ಇದರ ಪರಿಣಾಮ ಹಲವರಿಗೆ ಮ್ಯೂಚುವಲ್ ಫಂಡ್ ಹೂಡಿಕೆ ವಿವರವನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, 10 ವರ್ಷಕ್ಕಿಂತಲೂ ಹೆಚ್ಚಿನ ಕಾಲದಿಂದ ವಹಿವಾಟು ನಡೆಸದ ಹಲವು ಮ್ಯೂಚುವಲ್ ಫಂಡ್ ಖಾತೆಗಳು ನಿಷ್ಕ್ರಿಯ ವಾಗಿವೆ. ಅವೆಲ್ಲವನ್ನೂ ಪತ್ತೆ ಮಾಡಬೇಕಾದರೆ ‘ಮಿತ್ರ’ ಪೋರ್ಟಲ್ ನೆರವಾಗುತ್ತದೆ.
ಹೂಡಿಕೆ ಪತ್ತೆ ಹೇಗೆ?: ಮ್ಯೂಚುವಲ್ ಫಂಡ್ ಸೆಂಟ್ರಲ್ ಡಾಟ್ ಕಾಂಗೆ (https://www.mfcentral.com/) ಭೇಟಿ ನೀಡಿದರೆ ಅಲ್ಲಿ ‘ಮಿತ್ರ’ ಎನ್ನುವ ಹೈಪರ್ ಲಿಂಕ್ ಇದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪ್ಯಾನ್ ಕಾರ್ಡ್ ನಂಬರ್ ಮತ್ತು ಮೊಬೈಲ್ ನಂಬರ್ ನಮೂದಿಸುವಂತೆ ಕೇಳುತ್ತದೆ. ಮೊಬೈಲ್ ನಂಬರ್ ನಮೂದಿಸಿದ ನಂತರ ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ನಮೂದಿಸಿದರೆ ‘ಮಿತ್ರ’ ಪೋರ್ಟಲ್‌ಗೆ ನೀವು ಲಾಗಿನ್ ಆಗುತ್ತೀರಿ.
ಮೊದಲನೇ ಬಾಕ್ಸ್‌ನಲ್ಲಿ ಹೂಡಿಕೆದಾರರ ಹೆಸರನ್ನು ಬರೆಯ ಬೇಕಾಗುತ್ತದೆ. ಹೂಡಿಕೆದಾರರ ಪ್ಯಾನ್ ನಂಬರ್, ಇ–ಮೇಲ್ ವಿಳಾಸ, ಮೊಬೈಲ್ ನಂಬರ್, ಹುಟ್ಟಿದ ದಿನಾಂಕ, ಬ್ಯಾಂಕ್ ಖಾತೆ ಸಂಖ್ಯೆ, ಪ್ಯಾನ್ ಎಕ್ಸೆಂಪ್ಟ್ ಕೆವೈಸಿ ರೆಫರೆನ್ಸ್ ನಂಬರ್ (ಪಿಇಕೆಆರ್‌ಎನ್) ಬಳಸಿ ಹುಡುಕಲು ಸಾಧ್ಯವಿದೆ.
ಹೂಡಿಕೆದಾರರ ವಿಳಾಸ ಗೊತ್ತಿದ್ದರೆ ವಿಳಾಸ, ಇಲ್ಲ ನಾಮಿನಿ ಹೆಸರು, ಅದೂ ಗೊತ್ತಿಲ್ಲ ಅಂದರೆ ನಗರ ಅಥವಾ ಪಿನ್‌ಕೋಡ್ ನಮೂದಿ ಸಬಹುದಾಗಿದೆ. ಒಂದೊಮ್ಮೆ ಮ್ಯೂಚುವಲ್ ಫಂಡ್ ಹೂಡಿಕೆಯ ಫೋಲಿಯೊ ನಂಬರ್ ಇದ್ದರೆ ಅಥವಾ ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿರುವ ಕಂಪನಿಯ ಹೆಸರು ಗೊತ್ತಿದ್ದರೆ ನಮೂದಿಸಬಹುದಾಗಿದೆ. ‘ಮಿತ್ರ’ದಲ್ಲಿ ಕಳೆದು ಹೋಗಿರುವ, ನಿಷ್ಕ್ರಿಯವಾಗಿರುವ ನಿಮ್ಮದೇ ಮ್ಯೂಚುವಲ್ ಫಂಡ್ ಹೂಡಿಕೆಗಳು ಅಥವಾ ಬೇರೆಯವರು ಕಳೆದುಕೊಂಡಿರುವ ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಹುಡುಕಲು ಸಾಧ್ಯವಿದೆ.
ಒಬ್ಬ ವ್ಯಕ್ತಿ ಲಾಗಿನ್ ಆದರೆ ಗರಿಷ್ಠ 25 ಬಾರಿ ಹುಡುಕಾಟ ನಡೆಸಲು ಅವಕಾಶ ನೀಡಲಾಗಿದೆ. ನಿಮ್ಮ ಅಥವಾ ನಿಮ್ಮವರ ಹೆಸರಿನಲ್ಲಿ ಮ್ಯೂಚುವಲ್ ಫಂಡ್ ಇದೆ ಎನ್ನುವ ಸಂದೇಶ ಬಂದರೆ ಪ್ಯಾನ್ ನಂಬರ್, ವಿಳಾಸ ದೃಢೀಕರಣ, ಆಧಾರ್, ಫೋಟೊ, ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ಇನ್ನಿತರ ಸೂಚಿತ ದಾಖಲೆಗಳೊಂದಿಗೆ ಮ್ಯೂಚುವಲ್ ಫಂಡ್ ಕಚೇರಿ, ಕೇಫಿನ್ ಕಚೇರಿ ಅಥವಾ ಕ್ಯಾಮ್ಸ್ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನಿಮ್ಮ ಹೂಡಿಕೆಯಿಂದ ಬರಬೇಕಾದ ಮೊತ್ತ ನಿಮಗೆ ಲಭಿಸುತ್ತದೆ.
ಗಳಿಕೆ ದಾಖಲಿಸಿದ ಷೇರುಪೇಟೆ
ಮಾರ್ಚ್ 7ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ. 74,332 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.55ರಷ್ಟು ಗಳಿಸಿಕೊಂಡಿದೆ. 22,552 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ಶೇ 1.93ರಷ್ಟು ಹೆಚ್ಚಳವಾಗಿದೆ.
ನಿಫ್ಟಿ ಮಿಡ್‌ಕ್ಯಾಪ್ ಸೂಚ್ಯಂಕ ಶೇ 2.66ರಷ್ಟು ಗಳಿಸಿದ್ದರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ 5.47ರಷ್ಟು ಹೆಚ್ಚಳ ಕಂಡಿದೆ. ಪ್ರಸಕ್ತ ವರ್ಷದ ಆರಂಭದಿಂದ ಈವರೆಗೆ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ವಾರದ ಅವಧಿಯಲ್ಲಿ ಕಂಡಿರುವ ಗರಿಷ್ಠ ಜಿಗಿತ ಇದಾಗಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬರುತ್ತಿರುವ ಮಂದಗತಿಯ ವಹಿವಾಟು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾ, ಮೆಕ್ಸಿಕೊ ಮತ್ತು ಚೀನಾ ಮೇಲೆ ಸುಂಕ ಸಮರ ಸಾರಿರುವುದು, ಅದಕ್ಕೆ ಪ್ರತಿಯಾಗಿ ಚೀನಾ, ಕೆನಡಾ ದೇಶಗಳು ಅಮೆರಿಕದ ಮೇಲೆ ಸುಂಕ ಹಾಕಿರುವುದು ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿವೆ.
ವಲಯವಾರು ಪ್ರಗತಿಯಲ್ಲಿ ಲೋಹ ಶೇ 8.61, ಮಾಧ್ಯಮ ಶೇ 7.36, ಎನರ್ಜಿ ಶೇ 5.9, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 4.94, ಫಾರ್ಮಾ ಶೇ 2.85, ಆಟೊ ಶೇ 2.49, ಎಫ್‌ಎಂಸಿಜಿ ಶೇ 2.37, ರಿಯಲ್ ಎಸ್ಟೇಟ್ ಶೇ 2.31, ಮಾಹಿತಿ ತಂತ್ರಜ್ಞಾನ ಶೇ 1.35, ಸರ್ವಿಸಸ್ ಶೇ 0.88, ಫೈನಾನ್ಸ್ ಶೇ 0.47 ಮತ್ತು ಬ್ಯಾಂಕ್ ಶೇ 0.32ರಷ್ಟು ಗಳಿಸಿಕೊಂಡಿವೆ.
ಇಳಿಕೆ–ಗಳಿಕೆ: ವಾರದ ಲೆಕ್ಕಾಚಾರ ನೋಡಿದಾಗ ನಿಫ್ಟಿಯಲ್ಲಿ ಇಂಡಸ್ ಇಂಡ್ ಬ್ಯಾಂಕ್
ಶೇ 5.27, ಬಜಾಜ್ ಆಟೊ ಶೇ 4.34, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 2.55, ಮಾರುತಿ ಸುಜುಕಿ ಶೇ 2.23, ಬಜಾಜ್ ಫಿನ್‌ಸರ್ವ್ ಶೇ 1.73, ಹೀರೊ ಮೋಟೊಕಾರ್ಪ್ ಶೇ 1.64, ಬಜಾಜ್ ಫೈನಾನ್ಸ್ ಶೇ 1.63, ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಶೇ 1.08, ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 0.91, ಟೈಟನ್ ಕಂಪನಿ ಶೇ 0.15 ಮತ್ತು ಇನ್ಫೊಸಿಸ್ ಶೇ 0.14ರಷ್ಟು ಕುಸಿದಿವೆ.
ಭಾರತ್ ಎಲೆಕ್ಟ್ರಾನಿಕ್ಸ್ ಶೇ 12.42, ಟಾಟಾ ಸ್ಟೀಲ್ ಶೇ 10.46, ಬಿಪಿಸಿಎಲ್ ಶೇ 9.96, ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 8.63, ಅದಾನಿ ಎಂಟರ್ ಪ್ರೈಸಸ್ ಶೇ 7.35, ಅದಾನಿ ಪೋರ್ಟ್ಸ್ ಶೇ 6.94, ಐಷರ್ ಮೋಟರ್ಸ್ ಶೇ 6.9, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 6.47, ಎನ್‌ಟಿಪಿಸಿ ಶೇ 5.92, ಜೆಎಸ್‌ಡಬ್ಲ್ಯು ಸ್ಟೀಲ್ ಶೇ 5.77, ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 5.69 ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಶೇ 4.99ರಷ್ಟು ಗಳಿಸಿಕೊಂಡಿವೆ.
ಮುನ್ನೋಟ: ಅಮೆರಿಕದ ಸುಂಕ ಸಮರದಿಂದ ಜಾಗತಿಕವಾಗಿ ಮಾರುಕಟ್ಟೆಗಳು ಅನಿಶ್ಚಿತ ಸ್ಥಿತಿ ಎದುರಿಸುತ್ತಿವೆ. ಈ ಕಾರಣದಿಂದಾಗಿ ಹೂಡಿಕೆದಾರರು ಷೇರುಗಳ ಮೇಲೆ ತೊಡಗಿಸಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಮಾರುಕಟ್ಟೆಗಳು ಒಂದಷ್ಟು ಚೇತರಿಕೆ ಕಂಡಿದ್ದರೂ ಅನಿಶ್ಚಿತ ವಾತಾವರಣ ಹೂಡಿಕೆದಾರರನ್ನು ಆತಂಕಕ್ಕೆ ತಳ್ಳಿದೆ. ಮುಂದಿನ ದಿನಗಳಲ್ಲಿ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಸಕಾರಾತ್ಮಕವಾಗಿ ಕಂಡುಬಂದರೆ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ.
(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.