ADVERTISEMENT

ಗೃಹ ಸಾಲದ ಬಡ್ಡಿ ಉಳಿತಾಯ ಹೇಗೆ

ನರಸಿಂಹ ಬಿ
Published 28 ಜುಲೈ 2019, 19:30 IST
Last Updated 28 ಜುಲೈ 2019, 19:30 IST
   

ಗೃಹ ಸಾಲ ಪಡೆದಿರುವವರಿಗೆ ಅವಧಿ ಪೂರ್ವ ಮರುಪಾವತಿಗೆ ಬಗ್ಗೆ ಅನೇಕ ಪ್ರಶ್ನೆಗಳು ಕಾಡುತ್ತಿರುತ್ತವೆ. ಅವಧಿಪೂರ್ವ ಮರುಪಾವತಿಯಿಂದ ನಿಜಕ್ಕೂ ಲಾಭವಿದೆಯೇ ಎಂದು ಅನೇಕರು ಲೆಕ್ಕಾಚಾರ ಮಾಡುತ್ತಿರುತ್ತಾರೆ, ಈ ಸಂಚಿಕೆಯಲ್ಲಿ ಉದಾಹರಣೆ ಸಮೇತ ಗೃಹ ಸಾಲದ ಮೇಲಿನ ಬಡ್ಡಿ ಉಳಿತಾಯದ ಬಗ್ಗೆ ವಿವರಿಸಲಾಗಿದೆ.

ಉದಾಹರಣೆ: ಮಿಥುನ್ ಎನ್ನುವವರು ವರ್ಷದ ಹಿಂದೆ ಬ್ಯಾಂಕ್‌ವೊಂದರಿಂದ ಶೇ 8.45 ರ ಬಡ್ಡಿ ದರದಲ್ಲಿ ₹ 35 ಲಕ್ಷ ಗೃಹ ಸಾಲ ಪಡೆದುಕೊಂಡಿದ್ದರು. 17 ವರ್ಷಗಳ ಅವಧಿಗೆ ಸಾಲ ಪಡೆದುಕೊಂಡಿದ್ದಕ್ಕೆ ಪ್ರತಿಯಾಗಿ ಪ್ರತಿ ತಿಂಗಳು ₹ 32,384 ಅನ್ನು ಸಮಾನ ಮಾಸಿಕ ಕಂತು (ಇಎಂಐ) ರೂಪದಲ್ಲಿ ಪಾವತಿ ಮಾಡುತ್ತಿದ್ದರು. ವರ್ಷದ ಬಳಿಕ ಮಿಥುನ್‌ಗೆ ಎಲ್ಐಸಿ ಪಾಲಿಸಿಯೊಂದರಿಂದ ಸುಮಾರು ₹ 2.5 ಲಕ್ಷ ಹಣ ಸಿಕ್ಕಿತು. ಹಣ ಸಿಕ್ಕಿದ ತಕ್ಷಣ ಅವರು ಗೃಹ ಸಾಲದ ಒಂದಿಷ್ಟು ಭಾಗವನ್ನು ಮರುಪಾವತಿ ಮಾಡುವ ಬಗ್ಗೆ ಯೋಚಿಸಿದರು. ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ₹ 34,15,074 ಗೃಹ ಸಾಲ ಬಾಕಿ ಇರುವುದಾಗಿ ತಿಳಿದುಬಂತು. ಅಲ್ಲದೆ ಬ್ಯಾಂಕ್‌ ನ ಅಧಿಕಾರಿಗಳು ಇನ್ನೂ 193 ಕಂತುಗಳ ಪಾವತಿ (ಒಂದು ಕಂತಿನ ಇಎಂಐ ₹ 32,384 ) ಬಾಕಿ ಇದೆ, ₹ 2.5 ಲಕ್ಷ ರೂಗಳನ್ನು ಪಾವತಿಸಿದರೆ ಕಂತುಗಳ ಸಂಖ್ಯೆ 169 ಕ್ಕೆ ಇಳಿಯುತ್ತದೆ ಎಂದು ತಿಳಿಸಿದರು.

ಮಿಥುನ್, ಪ್ರತಿ ತಿಂಗಳು ₹ 32,384 ರ ಇಎಂಐ ಆಧಾರದಲ್ಲೇ 17 ವರ್ಷಗಳ ಕಾಲ ಪಾವತಿ ಮಾಡುತ್ತಾ ಬಂದಿದ್ದರೆ ಬಡ್ಡಿ ಹೊರೆ ಹೆಚ್ಚುವ ಜತೆಗೆ ಸಾಲ ಮರುಪಾವತಿ ಅವಧಿಯೂ ಹೆಚ್ಚಾಗುತ್ತಿತ್ತು. ಮಿಥುನ್ ತಮಗೆ ಸಿಕ್ಕಿದ ₹ 2.5 ಲಕ್ಷಗಳನ್ನು ಮಧ್ಯದಲ್ಲಿಯೇ ಪಾವತಿಸಿದ್ದರಿಂದ ಮಾಸಿಕ ಕಂತುಗಳ ಸಂಖ್ಯೆ 193ರಿಂದ ಒಂದೇ ಬಾರಿ 169 ಕ್ಕೆ ಇಳಿಯಿತು. ಅಂದರೆ ಸಾಲದ ಹೆಚ್ಚುವರಿ ಕಂತುಗಳನ್ನು ಅವಧಿಗೂ ಮುನ್ನವೇ ಪಾವತಿ ಮಾಡಿದ ಪರಿಣಾಮ ಮಿಥುನ್‌ಗೆ ಬರೋಬ್ಬರಿ ₹ 5,27,216 ಲಕ್ಷ ಬಡ್ಡಿ ಉಳಿತಾಯವಾಯಿತು. (ಸ್ಪಷ್ಟತೆಗೆ ಪಟ್ಟಿ ಗಮನಿಸಿ)

ADVERTISEMENT

ಅವಧಿಪೂರ್ವ ಗೃಹ ಸಾಲ ಪಾವತಿಸುವಾಗ ಗಮನಿಸಿ: ಅವಧಿಗೆ ಮುನ್ನ ಗೃಹ ಸಾಲ ಪಾವತಿಸಿದಾಗ ಬಡ್ಡಿಗೆ ಹೋಗುವ ದೊಡ್ಡ ಮೊತ್ತ ಉಳಿಯುತ್ತದೆ. ಬಳಿಯಲ್ಲಿ ಹೆಚ್ಚುವರಿ ಹಣವಿದ್ದರೆ ಮಾತ್ರ ಅವಧಿಗೆ ಮುನ್ನ ಗೃಹ ಸಾಲದ ಕೆಲ ಭಾಗವನ್ನು ಅವಧಿಗೆ ಮುನ್ನ ಪಾವತಿಸುವ ಬಗ್ಗೆ ಯೋಚಿಸಿ. ಅವಧಿಪೂರ್ವ ಸಾಲ ಪಾವತಿಗೆ ಕೆಲ ಬ್ಯಾಂಕ್‌ಗಳು ಶುಲ್ಕ ವಿಧಿಸುತ್ತವೆ. ಈ ಬಗ್ಗೆ ಖಾತರಿಪಡಿಸಿಕೊಳ್ಳಿ. ಅವಧಿ ಪೂರ್ವ ಮರುಪಾವತಿ ಆರಂಭಿಕ ವರ್ಷಗಳಲ್ಲಿ ಮಾತ್ರ ಲಾಭದಾಯಕ ಎನ್ನುವುದು ತಪ್ಪು ಕಲ್ಪನೆ.

ಪೇಟೆಗೆ ತ್ರೈಮಾಸಿಕ ಫಲಿತಾಂಶಗಳ ಪೆಟ್ಟು
ಷೇರುಪೇಟೆಯಲ್ಲಿ ಈಗ ತ್ರೈಮಾಸಿಕ ಫಲಿತಾಂಶಗಳ ಪರ್ವ ಶುರುವಾಗಿದೆ. ಕೆಲ ಕಂಪನಿಗಳನ್ನು ಹೊರತುಪಡಿಸಿ ಬಹುತೇಕ ಕಂಪನಿಗಳ ತ್ರೈಮಾಸಿಕ ಸಾಧನೆ ವರದಿ ಉತ್ತಮವಾಗಿರದ ಕಾರಣ ಸೂಚ್ಯಂಕಗಳು ನಿರೀಕ್ಷಿತ ಏರಿಕೆ ಕಾಣುತ್ತಿಲ್ಲ. ಷೇರುಪೇಟೆ ಸತತ ಮೂರನೇ ವಾರವೂ ಕುಸಿತದ ಹಾದಿಯಲ್ಲೇ ಇದೆ. ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1 ರಷ್ಟು (37,882 ಅಂಶಗಳು) ಇಳಿಕೆ ಕಂಡಿದೆ. ನಿಫ್ಟಿ (50) ಶೇ 1.1 ರಷ್ಟು ಕುಸಿದು 11,284 ಅಂಶಗಳಲ್ಲಿ ವಹಿವಾಟು ಮುಗಿಸಿದೆ. ಸದ್ಯದ ಸ್ಥಿತಿ ನೋಡಿದಾಗ ಹೂಡಿಕೆದಾರರು ಇನ್ನಷ್ಟು ಕಾಲ ಷೇರುಗಳ ಆಯ್ಕೆಯಲ್ಲಿ ಎಚ್ಚರಿಕೆಯ ನಡೆ ಅನುಸರಿಸಬೇಕಿದೆ.

ವಲಯವಾರು: ವಲಯವಾರು ಪ್ರಗತಿಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ. ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ವಲಯ ಶೇ 5.1 ರಷ್ಟು ಕುಸಿದರೆ, ಲೋಹ (ಶೇ 1.8) , ಬ್ಯಾಂಕ್ (ಶೇ 1.5), ರಿಯಲ್ ಎಸ್ಟೇಟ್ (ಶೇ 1.1) ಮತ್ತು ಮೂಲಸೌಕರ್ಯ (ಶೇ 1) ರಷ್ಟು ಕುಸಿತ ಕಂಡಿವೆ. ಮಾಧ್ಯಮ ವಲಯ ಶೇ 5.6 ರಷ್ಟು ಏರಿಕೆ ದಾಖಲಿಸಿದ್ದರೆ, ಫಾರ್ಮಾ ವಲಯದಲ್ಲಿ ಶೇ 1.7 ರಷ್ಟು ಪ್ರಗತಿಯಾಗಿದೆ.

ಗಳಿಕೆ: ಯೆಸ್ ಬ್ಯಾಂಕ್‌ಗೆ ಬಂಡವಾಳ ಹರಿದು ಬರಲಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಕಂಪನಿಯ ಷೇರುಗಳ ಬೆಲೆ ಶೇ 15.44 ರಷ್ಟು ಏರಿಕೆ ದಾಖಲಿಸಿ ಕಳೆದ ವಾರ ಅಗ್ರ ಸ್ಥಾನದಲ್ಲಿವೆ.

ಜೀ ಕಂಪನಿಯು ವರ್ಷದಿಂದ ವರ್ಷದ ಲಾಭ ಗಳಿಕೆಯಲ್ಲಿ ಶೇ 54 ರಷ್ಟು ಪ್ರಗತಿ ತೋರಿಸಿದ್ದರ ಪರಿಣಾಮ ಕಂಪನಿಯ ಷೇರುಗಳು ಶೇ 14.34 ರಷ್ಟು ಏರಿಕೆ ದಾಖಲಿಸಿವೆ. ತ್ರೈಮಾಸಿಕ ಫಲಿತಾಂಶದಲ್ಲಿ ಪ್ರಗತಿ ತೋರಿದ ಕಾರಣದಿಂದಾಗಿ ಏಷಿಯನ್ ಪೇಂಟ್ಸ್‌ನ ಷೇರುಗಳು ಶೇ 11.45 ರಷ್ಟು ಏರಿಕೆಯಾಗಿವೆ. ಸನ್ ಫಾರ್ಮಾ ಶೇ 4.33, ಡಾ ರೆಡ್ಡಿಸ್ ಶೇ 3.5 ಮತ್ತು ಹೀರೊ ಮೋಟೊ ಕಾರ್ಪ್ ಶೇ 3.14 ರಷ್ಟು ಗಳಿಕೆ ದಾಖಲಿಸಿವೆ.

ಇಳಿಕೆ: ಕೃಷಿ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಹಿನ್ನಡೆ ಇರುವುದರಿಂದ ಎಚ್‌ಡಿಎಫ್‌ಸಿ ಶೇ 5.88 ರಷ್ಟು ಕುಸಿದಿದೆ. ನಷ್ಟ ಗಳಿಕೆಯ ಪ್ರಮಾಣ ₹ 3,679.66 ಕೋಟಿಗೆ ಏರಿಕೆಯಾಗಿದ್ದರಿಂದ ಟಾಟಾ ಮೋಟರ್ಸ್‌ನ ಷೇರುಗಳು ಶೇ 4.9 ರಷ್ಟು ಹಿನ್ನಡೆ ಕಂಡಿವೆ. ಯುಪಿಎಲ್ ಶೇ 6.8 ರಷ್ಟು ಕುಸಿದಿದ್ದರೆ ಅದಾನಿ ಪೋರ್ಟ್ಸ್ಶೇ 6.13 ರಷ್ಟು ತಗ್ಗಿದೆ.

ಮುನ್ನೋಟ: ಏರ್‌ಟೆಲ್, ಹೀರೊ, ಎಸ್‌ಬಿಐ, ಐಟಿಸಿ ಲಿ., ಟೆಕ್ ಮಹೀಂದ್ರ, ಐಒಸಿ, ಐಷರ್ ಮೋಟರ್ಸ್, ಆ್ಯಕ್ಸಿಸ್ ಬ್ಯಾಂಕ್, ಅಶೋಕ್ ಲೇಲೆಂಡ್, ಡಾ ರೆಡ್ಡೀಸ್, ಬಿಇಎಲ್, ಜೀ ಮೀಡಿಯಾ, ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಜೂನ್ ವರೆಗಿನ ವಿತ್ತೀಯ ಕೊರತೆ ಮತ್ತು ಪ್ರಮುಖ ವಲಯಗಳ ದತ್ತಾಂಶ ಈ ವಾರ ಹೊರಬೀಳಲಿದೆ. ಬ್ಯಾಂಕ್ ಆಫ್ ಜಪಾನ್ ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್‌ನ (ಫೆಡರಲ್) ಬಡ್ಡಿ ದರ ನಿರ್ಧಾರಗಳು ಕೂಡ ಪ್ರಕಟಗೊಳ್ಳಲಿವೆ. ಈ ಎಲ್ಲಾ ವಿದ್ಯಮಾನಗಳು ಮಾರುಕಟ್ಟೆಯ ದಿಕ್ಕು ತೀರ್ಮಾನಿಸಲಿವೆ.

(ಲೇಖಕ: ಇಂಡಿಯನ್ ಮನಿ ಡಾಟ್‌ಕಾಂ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.