ADVERTISEMENT

ಹೊನ್ನಿದ್ದರೂ ವೆಚ್ಚಕ್ಕೆ ಹಿಡಿತವಿರಲಿ!

ನರಸಿಂಹ ಬಿ
Published 14 ಜುಲೈ 2019, 20:00 IST
Last Updated 14 ಜುಲೈ 2019, 20:00 IST
ನರಸಿಂಹ ಬಿ.
ನರಸಿಂಹ ಬಿ.   

ಕೈಯಲ್ಲಿ ಹಣವಿರುವಾಗ ಖರ್ಚು ಮಾಡುವ ಮನಸ್ಸು ಬರುವುದು ಸಹಜ. ರಿಯಾಯ್ತಿ ಹೆಸರಿನಲ್ಲಿ ಪೇಟೆಯಲ್ಲಿ ಕಂಡು ಬರುವ ಮಾರಾಟದ ತಂತ್ರಗಾರಿಕೆಗೆ ಜನಸಾಮಾನ್ಯರು ಸುಲಭದಲ್ಲಿ ಮರುಳಾಗಿ ಬಿಡುತ್ತಾರೆ. ಅವಶ್ಯಕತೆ, ಅಗತ್ಯ ಹಾಗೂ ಅನಿವಾರ್ಯತೆಯ ಲೆಕ್ಕಾಚಾರ ಮೀರಿ ಕೊಳ್ಳುಬಾಕ ಸಂಸ್ಕೃತಿಗೆ ಜೋತು ಬೀಳುತ್ತಾರೆ. ಕೊನೆಗೆ ಜೇಬು ಖಾಲಿಯಾಯ್ತು ಅಂತ ತಮಗೆ ತಾವೇ ಶಪಿಸಿಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಕೊಳ್ಳುಬಾಕ ಪ್ರವೃತ್ತಿಗೆ ಕಡಿವಾಣ ಹಾಕಿ, ಆರ್ಥಿಕ ಶಿಸ್ತು ರೂಢಿಸಿಕೊಳ್ಳಲು ಯಾವ ಸೂತ್ರಗಳನ್ನು ಅನುಸರಿಸಬೇಕು ಎನ್ನುವ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ರಿಯಾಯ್ತಿ ಮಾರಾಟ; ವಿವೇಚನೆ ಬಳಸಿ: ರಿಯಾಯ್ತಿ ಮಾರಾಟವಿದ್ದಾಗ ವಸ್ತುಗಳನ್ನು ಖರೀದಿಸುವುದರಲ್ಲಿ ತಪ್ಪಿಲ್ಲ. ಆದರೆ,ರಿಯಾಯ್ತಿಯ ಕಾರಣಕ್ಕೆ ಅವಶ್ಯಕವಲ್ಲದ ವಸ್ತುವನ್ನು ಖರೀದಿಸುವುದು ತಪ್ಪಾಗುತ್ತದೆ.

ಉದಾಹರಣೆಗೆ ಕೇವಲ ₹ 30 ಸಾವಿರ ನೀಡಿ 55 ಇಂಚಿನ ಸ್ಮಾರ್ಟ್ ಟಿವಿ ಖರೀದಿಸಿ ಎಂಬ ಜಾಹೀರಾತನ್ನು ನೀವು ನೋಡುತ್ತೀರಿ ಎಂದಿಟ್ಟುಕೊಳ್ಳಿ. ಆ ಸ್ಮಾರ್ಟ್ ಟಿವಿ ನಿಮಗೆ ನಿಜಕ್ಕೂ ಅಗತ್ಯವೇ ಎನ್ನುವುದನ್ನು ಒಂದು ನಿಮಿಷ ಯೋಚಿಸಿ. ಈಗಾಗಲೇ ನಿಮ್ಮ ಮನೆಯಲ್ಲಿರುವ ಟಿವಿಯನ್ನು ಬದಲಾಯಿಸಿ ಹೊಸದನ್ನು ಕೊಳ್ಳುವ ಅಗತ್ಯ ಸದ್ಯಕ್ಕಿದೆಯೇ ಎಂದು ಪ್ರಶ್ನೆ ಹಾಕಿಕೊಳ್ಳಿ. ಆಗಲೂ ಹೊಸ ಟಿವಿ ಅಗತ್ಯ ಎನಿಸಿದರೆ ಮುಂದುವರಿಯಿರಿ. ಹೀಗೆ ಮಾಡುವುದರಿಂದ ತಪ್ಪು ನಿರ್ಧಾರಗಳನ್ನು ತಪ್ಪಿಸಿ ಹಣ ಉಳಿಸಬಹುದು.

ADVERTISEMENT

ಅಗತ್ಯ ವಸ್ತುಗಳ ಪಟ್ಚಿ ಮಾಡಿಕೊಳ್ಳಿ: ಶಾಪಿಂಗ್ ಮಾಲ್‌ ಸಂಸ್ಕೃತಿ ಬರುವ ಮುನ್ನ ಬೇಕಿರುವ ವಸ್ತುಗಳ ಪಟ್ಟಿಯನ್ನು ಮಾಡಿಕೊಂಡು ಕಿರಾಣಿ ಅಂಗಡಿಯಲ್ಲಿ ಖರೀದಿ ಮಾಡುತ್ತಿದ್ದವು. ಆದರೆ, ಈಗಿನ ದಿನಗಳಲ್ಲಿ ಮಾಲ್ ಗಳಿಗೆ ಹೋದ ಮೇಲೆ ಯಾವೆಲ್ಲಾ ವಸ್ತುಗಳು ರಿಯಾಯ್ತಿಯಲ್ಲಿ ಸಿಗುತ್ತವೆ ಎನ್ನುವುದನ್ನು ಆಧರಿಸಿ ನಾವು ಖರೀದಿಗೆ ಮುಂದಾಗುತ್ತೇವೆ.

ಇಂತಹ ಸಂದರ್ಭದಲ್ಲಿ ಅವಶ್ಯಕತೆ, ಅಗತ್ಯ ಹಾಗೂ ಅನಿವಾರ್ಯತೆಯ ಲಕ್ಷ್ಮಣ ರೇಖೆಯನ್ನು ದಾಟಿ ನಾವು ಮುಂದುವರಿಯುವುದರಿಂದ ತಿಂಗಳ ಬಜೆಟ್‌ ಏರುಪೇರಾಗುತ್ತದೆ.

ಕ್ಯಾಷ್‌ ಬ್ಯಾಕ್ ಬಲೆಗೆ ಬೀಳದಿರಿ: ದಸರಾ ಧಮಾಕಾ ಕ್ಯಾಷ್‌ ಬ್ಯಾಕ್ ಸೇಲ್, ₹ 2 ಸಾವಿರಕ್ಕೆ ಖರೀದಿಸಿದರೆ ₹ 500 ಕ್ಯಾಷ್‌ ಬ್ಯಾಕ್, ಹೀಗೆ ಬಣ್ಣ ಬಣ್ಣದ ಕೊಡುಗೆಗಳ ಹೆಸರಲ್ಲಿ ಗ್ರಾಹಕರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿರುತ್ತವೆ.ಕ್ಯಾಷ್‌ ಬ್ಯಾಕ್ ಆಸೆಗೆ ಬೀಳುವ ಗ್ರಾಹಕರು, ಖರೀದಿಯನ್ನು ₹ 2 ಸಾವಿರದ ಗಡಿ ಮುಟ್ಟಿಸಲು ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಕೊಳ್ಳುತ್ತಾರೆ.

ಅಷ್ಟೇ ಅಲ್ಲ, ಬಂದ ಕ್ಯಾಷ್‌ ಬ್ಯಾಕ್‌ನಿಂದ ಮತ್ತೊಂದು ವಸ್ತು ಖರೀದಿಸಲು ಮತ್ತೆ ಹಣ ಖರ್ಚು ಮಾಡುತ್ತಾರೆ. ಹೀಗೆ ಮಾಡಿ ಜೇಬು ಖಾಲಿ ಮಾಡಿಕೊಂಡು ಆರ್ಥಿಕ ಸಂಕಷ್ಟವನ್ನು ಅನಗತ್ಯವಾಗಿ ಆಹ್ವಾನಿಸಿಕೊಳ್ಳುತ್ತಾರೆ.

ಎಲ್ಲದಕ್ಕೂ ಕ್ರೆಡಿಟ್ ಕಾರ್ಡ್ ಬೇಡ: ಅನಿರೀಕ್ಷಿತ ಸಂದರ್ಭಗಳಲ್ಲಿ ಹಣಕಾಸಿನ ಕೊರತೆ ನೀಗಿಸಲು ಕ್ರೆಡಿಟ್ ಕಾರ್ಡ್ ಇಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ, ಸಾಲ ಮಾಡಿ ಖರೀದಿ ಮಾಡಲು ಕ್ರೆಡಿಟ್ ಕಾರ್ಡ್ ಪಡೆದಿದ್ದೇನೆ ಎಂಬ ಧೋರಣೆ ಹಣಕಾಸಿನ ಪರಿಸ್ಥಿತಿಯನ್ನು ಹದಗೆಡಿಸುತ್ತದೆ.

ಶಾಪಿಂಗ್ ಆಸೆಗೆ ಬಿದ್ದು ಸಿಕ್ಕಾಪಟ್ಟೆ ಖರೀದಿ ಮಾಡಿದ ಬಳಿಕ ಸರಿಯಾದ ಸಮಯಕ್ಕೆ ಕ್ರೆಡಿಟ್ ಕಾರ್ಡ್ ಬಾಕಿ ಪಾವತಿ ಮಾಡದಿದ್ದರೆ ಬಡ್ಡಿ, ಚಕ್ರಬಡ್ಡಿ ನಿಮ್ಮ ನಿದ್ದೆಗೆಡಿಸುತ್ತದೆ.

ದುಡ್ಡಿದೆ ಎನ್ನುವ ಕಾರಣಕ್ಕೆ ಖರ್ಚು ಬೇಡ: ಕೆಲವರು ತಿಂಗಳಿಗೆ ₹ 60 ಸಾವಿರ ₹ 70 ಸಾವಿರ ದುಡಿಯುತ್ತಿರುತ್ತಾರೆ. ತಿಂಗಳ ಕೊನೆಯಲ್ಲಿ ಅವರ ಜೇಬಿನಲ್ಲಿ ₹ 500 ಕೂಡ ಉಳಿದಿರುವುದಿಲ್ಲ. ಇದಕ್ಕೆ ಕಾರಣ ವಿವೇಚನೆ ಇಲ್ಲದೆ ಖರ್ಚು ಮಾಡುವುದು.

ಹೌದು, ನಮ್ಮ ಗಳಿಕೆಗೆ ಅನುಗುಣವಾಗಿ ನಾವು ಖರ್ಚು ವೆಚ್ಚಗಳ ಲೆಕ್ಕಾಚಾರ ಮಾಡಬೇಕು. ಉಳಿತಾಯ ಎಂಬುದು ಕಷ್ಟಕಾಲಕ್ಕೆ ನೆರವಾಗುವ ನಿಧಿ ಎಂಬುದನ್ನು ಅರಿತಿರಬೇಕು.

ಷೇರುಪೇಟೆಯಲ್ಲಿ ಅಸ್ಥಿರ ವಾತಾವರಣ

ಬಜೆಟ್ ನಂತರದಲ್ಲಿ ನಕಾರಾತ್ಮಕ ದಿಕ್ಕಿನಲ್ಲಿ ಸಾಗಿದ್ದ ಷೇರುಪೇಟೆ ವಹಿವಾಟು ಈ ವಾರವೂ ಚೇತರಿಕೆ ಕಾಣಲಿಲ್ಲ. ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 1.9 ರಷ್ಟು ಇಳಿಕೆ ಕಂಡು 38,736 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ್ದರೆ, ನಿಫ್ಟಿ ಶೇ 2.2 ರಷ್ಟು ಕುಸಿದು 11,552 ರಲ್ಲಿ ವಹಿವಾಟು ಮುಗಿಸಿದೆ.

ಬಜೆಟ್‌ನ ಕೆಲ ಪ್ರಸ್ತಾವಗಳು ಷೇರುಪೇಟೆ ಹೂಡಿಕೆದಾರರಲ್ಲಿ ದಿಗಿಲು ಮೂಡಿಸಿದ್ದು, ಖರೀದಿ ಉತ್ಸಾಹ ತಗ್ಗಿದೆ. ಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳಲ್ಲಿನ ಸಾರ್ವಜನಿಕರ ಪಾಲು ಬಂಡವಾಳವನ್ನು ಶೇ 25 ರಿಂದ ಶೇ 35 ಕ್ಕೆ ಹೆಚ್ಚಿಸಿರುವುದು, ಕಂಪನಿಗಳ ಷೇರು ಮರುಖರೀದಿ ಮೇಲೆ ಶೇ 20 ರಷ್ಟು ತೆರಿಗೆ, ವಿದೇಶಿ ಹೂಡಿಕೆದಾರರಿಗೆ ಸರ್ಚಾರ್ಜ್ ಹೆಚ್ಚಳ ಸೇರಿ ಬಜೆಟ್‌ನ ಹಲವು ಘೋಷಣೆಗಳು ಸೂಚ್ಯಂಕಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ.

ಗಳಿಕೆ: ಶೇ 8.6 ರಷ್ಟು ಗಳಿಕೆಯೊಂದಿಗೆ ಸನ್ ಫಾರ್ಮಾ, ನಿಫ್ಟಿಯ ಅಗ್ರಪಟ್ಟಿಯಲ್ಲಿದೆ. ಯೆಸ್ ಬ್ಯಾಂಕ್ , ವೇದಾಂತ , ಹೀರೊ ಮೋಟೊ ಕಾರ್ಪ್, ಇನ್ಫೊಸಿಸ್, ಜೀ ಎಂಟರ್‌ಟೇನ್‌ಮೆಂಟ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ 1 ರಿಂದ ಶೇ 8.6 ರಷ್ಟು ಗಳಿಸಿಕೊಂಡಿವೆ.

ಯೆಸ್ ಬ್ಯಾಂಕ್‌ನ ಹಣಕಾಸು ಸ್ಥಿತಿ ಉತ್ತಮವಾಗಿದೆ ಎಂದು ಆಡಳಿತ ಮಂಡಳಿಯಲ್ಲಿರುವ ನಾಯಕರು ಖಚಿತಪಡಿಸಿದ ಕಾರಣ ಷೇರುಗಳಲ್ಲಿ ಶೇ 7 ರಷ್ಟು ಏರಿಕೆಯಾಗಿದೆ. ಕಂಪನಿಯ ಗಳಿಕೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಶೇ 60 ರಿಂದ ಶೇ 70 ರಷ್ಟು ಹೆಚ್ಚಳ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದ ಪರಿಣಾಮ ವೇದಾಂತ ಷೇರುಗಳು ಶೇ 2.4 ರಷ್ಟು ಜಿಗಿದವು.

ಕುಸಿತ: ಚಿನ್ನಾಭರಣ ವಹಿವಾಟಿನಲ್ಲಿ ನಿಧಾನಗತಿಯ ಪ್ರಗತಿ ಕಂಡುಬರುತ್ತಿರುವುದರಿಂದ ಟೈಟಾನ್ ಕಂಪನಿಯ ಷೇರುಗಳು ಶೇ 13.8 ರಷ್ಟು ಕುಸಿದವು. ಪೆಟ್ರೋಲ್ ಮತ್ತು ಡೀಸಲ್ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ಸರ್ಕಾರ ಮುಂದಾಗಿರುವ ಕಾರಣ ಬಿಪಿಸಿಎಲ್‌ನ ಷೇರುಗಳು ಶೇ 6.6 ರಷ್ಟು ಹಿನ್ನಡೆ ಕಂಡವು.

ಮುನ್ನೋಟ: ಸಗಟು ಮಾರಾಟ ಸೂಚ್ಯಂಕ, ವ್ಯಾಪಾರ ವಹಿವಾಟಿನ ಹೊಸ ಅಂಕಿ-ಅಂಶ ಸೇರಿ ಪ್ರಮುಖ ದತ್ತಾಂಶಗಳು ಈ ವಾರದ ಮಾರುಕಟ್ಟೆ ಮೇಲೆ ಪ್ರಭಾವ ಬೀರಲಿವೆ.

ವಿಪ್ರೊ, ಯೆಸ್ ಬ್ಯಾಂಕ್ ಸೇರಿ ಪ್ರಮುಖ ಕಂಪನಿಗಳು ಈ ವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ತ್ರೈಮಾಸಿಕ ಹಣಕಾಸು ಸಾಧನೆ ಪರ್ವ ಈಗಷ್ಟೇ ಆರಂಭವಾಗಿರುವುದರಿಂದ ಅನಿಶ್ಚಿತತೆಯ ಓಟ ಪೇಟೆಯಲ್ಲಿ ಮುಂದುವರಿಯಲಿದೆ.

(ಲೇಖಕ: ಇಂಡಿಯನ್ ಮನಿಡಾಟ್ ಕಾಂ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.