ADVERTISEMENT

ಹಣಕಾಸು ನಿರ್ವಹಣೆಯ 6 ಲೆಕ್ಕಾಚಾರ

ಅವಿನಾಶ್ ಕೆ.ಟಿ
Published 4 ಅಕ್ಟೋಬರ್ 2020, 19:31 IST
Last Updated 4 ಅಕ್ಟೋಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿಂಗಳಿಗೆ ಎಷ್ಟು ಖರ್ಚು ಮಾಡಬೇಕು? ಉಳಿತಾಯಕ್ಕೆ ಎಷ್ಟು ಮೀಸಲಿಡಬೇಕು? ಸಾಲದ ಕಂತಿಗೆ ಎಷ್ಟು ಹಣ ಕಟ್ಟಬೇಕು? ತುರ್ತು ನಿಧಿಯಲ್ಲಿ ಇರಬೇಕಾದ ಹಣ ಎಷ್ಟು? ವ್ಯಕ್ತಿಯೊಬ್ಬ ಎಷ್ಟು ಮೊತ್ತಕ್ಕೆ ಜೀವ ವಿಮೆ ಮಾಡಿಸಬೇಕು? ನಿವೃತ್ತಿ ಜೀವನಕ್ಕೆ ಎಷ್ಟು ಹಣದ ಅಗತ್ಯವಿದೆ?

ವೈಯಕ್ತಿಕ ಹಣಕಾಸು ನಿರ್ವಹಣೆ ವಿಚಾರದಲ್ಲಿ ಈ ಆರು ಪ್ರಮುಖ ಪ್ರಶ್ನೆಗಳನ್ನು ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾಗುತ್ತದೆ. ಹಣಕಾಸಿನ ಸ್ಥಿತಿಗತಿ ಆಧರಿಸಿ ಈ ಆರೂ ಪ್ರಶ್ನೆಗಳಿಗೆ ಉತ್ತರ ಪ್ರತಿ ವ್ಯಕ್ತಿಗೂ ಬೇರೆಯೇ ಆಗಿರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಹಣಕಾಸು ನಿರ್ವಹಣೆಯ ಮಾನದಂಡಗಳ ಪ್ರಕಾರ ಇದನ್ನು ಹೇಗೆ ನೋಡಬೇಕು ಎನ್ನುವ ವಿವರ ಇಲ್ಲಿದೆ.

1. ತಿಂಗಳಿಗೆ ಎಷ್ಟು ಖರ್ಚು ಮಾಡಬೇಕು?

ADVERTISEMENT

ಕೈಗೆ ಸಿಗುವ ತಿಂಗಳ ಸಂಬಳದಲ್ಲಿ ಅರ್ಧದಷ್ಟು ಹಣವನ್ನು ನೀವು ಖರ್ಚು ಮಾಡುತ್ತಿದ್ದೀರಿ ಎಂದರೆ ಸಮಸ್ಯೆಯಿಲ್ಲ. ಅದಕ್ಕಿಂತ ಹೆಚ್ಚು ಖರ್ಚು ಮಾಡುತ್ತಿದ್ದರೆ ಹಣಕಾಸು ನಿರ್ವಹಣೆ ವಿಚಾರದಲ್ಲಿ ನೀವು ಹಳಿತಪ್ಪುವ ಸಾಧ್ಯತೆ ಇರುತ್ತದೆ. ‘ಅಗತ್ಯವಿಲ್ಲದ್ದಕ್ಕೆ ಖರ್ಚು ಮಾಡಿದರೆ ನಮಗೆ ಅಗತ್ಯ ಅನಿಸುವುದನ್ನು ಮಾರಾಟ ಮಾಡಬೇಕಾಗಿ ಬರುತ್ತದೆ’ ಎಂದು ಹೂಡಿಕೆ ತಜ್ಞ ವಾರನ್ ಬಫೆಟ್ ಹೇಳಿರುವ ಮಾತನ್ನು ನಾವು ಕಡೆಗಣಿಸಬಾರದು.

2. ತಿಂಗಳಿಗೆ ಎಷ್ಟು ಉಳಿತಾಯ ಮಾಡಬೇಕು?

ನಿಮ್ಮ ಕೈಗೆ ಸಿಗುವ ತಿಂಗಳ ಸಂಬಳದಲ್ಲಿ ಶೇಕಡ 20ರಷ್ಟನ್ನು ಉಳಿತಾಯ ಮಾಡಬೇಕು. ಇದಕ್ಕಿಂತ ಕಡಿಮೆ ಉಳಿತಾಯ ಮಾಡುತ್ತಿದ್ದರೆ ಭವಿಷ್ಯದ ಅನಿಶ್ಚಿತ ಸಂದರ್ಭಗಳನ್ನು ಎದುರಿಸಲು ನೀವು ಕಷ್ಟಪಡಬೇಕಾಗುತ್ತದೆ. ಇನ್ನು, ಯಾವುದೇ ಸಾಲ ಮಾಡಿಲ್ಲ ಎಂದಾದಲ್ಲಿ ಉಳಿತಾಯದ ಪ್ರಮಾಣ
ಶೇ 30ರಿಂದ ಶೇ 40ರವರೆಗೆ ಇದ್ದರೆ ಬಹಳ ಒಳ್ಳೆಯದು.

3. ಸಾಲದ ಮಾಸಿಕ ಕಂತು (ಇಎಂಐ) ಎಷ್ಟಿರಬೇಕು?

ಸಾಲದ ಮಾಸಿಕ ಕಂತು (ಇಎಂಐ) ತಿಂಗಳ ಆದಾಯದ ಶೇ 30ಕ್ಕಿಂತ ಹೆಚ್ಚಿಗೆ ಇರದಿದ್ದರೆ ಒಳ್ಳೆಯದು. ಶೇ 40ಕ್ಕಿಂತ ಹೆಚ್ಚಿಗೆ ಆಗಲೇಬಾರದು. ಈ ನಿಯಮಕ್ಕೆ ಅಂಟಿಕೊಳ್ಳದಿದ್ದರೆ ಮಕ್ಕಳ ಶಿಕ್ಷಣ, ವಿಮೆಗಳ ಮೇಲಿನ ವೆಚ್ಚ, ನಿವೃತ್ತಿಗಾಗಿ ಉಳಿತಾಯ ಸೇರಿದಂತೆ ಬೇರೆ ಬೇರೆ ಉದ್ದೇಶಗಳಿಗಾಗಿ ಹೊಂದಿಸಬೇಕಾದ ಹಣದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ.

4. ತುರ್ತು ನಿಧಿಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬೇಕು?

ಸರ್ಕಾರಿ ಉದ್ಯೋಗದಲ್ಲಿದ್ದರೆ 3ರಿಂದ 6 ತಿಂಗಳು ಕಳೆಯಲು ಬೇಕಾಗುವಷ್ಟು ಹಣವನ್ನು ತುರ್ತು ನಿಧಿಯಲಿ ಇಟ್ಟುಕೊಳ್ಳುವುದು ಒಳ್ಳೆಯದು. ಖಾಸಗಿ ಉದ್ಯೋಗದಲ್ಲಿದ್ದರೆ 6 ತಿಂಗಳಿಂದ 18 ತಿಂಗಳುಗಳ ವೆಚ್ಚವನ್ನು ತುರ್ತು ನಿಧಿಯಲ್ಲಿ ಮೀಸಲಿಟ್ಟರೆ ಅನುಕೂಲ. ಬಿಸಿನೆಸ್ ಮಾಡುವವರು 18 ತಿಂಗಳಿಂದ 24 ತಿಂಗಳ ವೆಚ್ಚವನ್ನು ತುರ್ತು ನಿಧಿಯಲ್ಲಿ ಇರಿಸುವುದು ಸೂಕ್ತ.

5. ಎಷ್ಟು ಮೊತ್ತದ ಟರ್ಮ್ ಲೈಫ್ ಇನ್ಶೂರೆನ್ಸ್ (ವಿಮೆ) ಕವರೇಜ್ ಇರಬೇಕು?

ನಿಮ್ಮ ವಾರ್ಷಿಕ ಆದಾಯದ ಕನಿಷ್ಠ 10ರಿಂದ 15 ಪಟ್ಟು ಹೆಚ್ಚು ಟರ್ಮ್ ಲೈಫ್ ಇನ್ಶೂರೆನ್ಸ್ ಹೊಂದಿರಬೇಕು. ಅಂದರೆ ವರ್ಷಕ್ಕೆ ₹ 10 ಲಕ್ಷ ಆದಾಯವಿದೆ ಎಂದಾದರೆ ಆ ವ್ಯಕ್ತಿಗೆ ಕನಿಷ್ಠ ₹ 1 ಕೋಟಿ ಮೊತ್ತದ ವಿಮೆ ಕವರೇಜ್ ಇರಬೇಕು.

6. ನಿವೃತ್ತಿ ಜೀವನಕ್ಕೆ ಎಷ್ಟು ಹಣದ ಅಗತ್ಯವಿದೆ?

ನಿವೃತ್ತಿ ಜೀವನಕ್ಕೆ ಎಷ್ಟು ಹಣ ಬೇಕು ಎನ್ನುವ ಲೆಕ್ಕಾಚಾರ ಮಾಡುವಾಗ ಹಣದುಬ್ಬರ ಮತ್ತು ವೈದ್ಯಕೀಯ ವೆಚ್ಚಗಳ ಏರಿಕೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. 60 ವರ್ಷ ವಯಸ್ಸಿಗೆ ವ್ಯಕ್ತಿ ಉದ್ಯೋಗದಿಂದ ನಿವೃತ್ತಿ ಹೊಂದುತ್ತಾನೆ ಎಂದಾದರೆ ಆತ 50ನೇ ವಯಸ್ಸಿನಲ್ಲಿ ಪಡೆಯುತ್ತಿದ್ದ ವಾರ್ಷಿಕ ಆದಾಯದ 8ರಿಂದ 22 ಪಟ್ಟು ಹೆಚ್ಚು ಹಣವನ್ನು ನಿವೃತ್ತಿ ಜೀವನಕ್ಕೆ ಮೀಸಲಿಡಬೇಕಾಗುತ್ತದೆ. ವ್ಯಕ್ತಿಗತವಾಗಿ ನೋಡಿದಾಗ ಪ್ರತಿಯೊಬ್ಬರಿಗೂ ಈ ಲೆಕ್ಕಾಚಾರವನ್ನು ಬೇರೆ ರೀತಿಯಲ್ಲಿ ಮಾಡಬೇಕಾಗುತ್ತದೆ. ಆದರೆ ವೈಯಕ್ತಿಕ ಹಣಕಾಸು ನಿರ್ವಹಣೆ ಮಾನದಂಡವನ್ನು ಇಲ್ಲಿ ಪರಿಗಣಿಸಲಾಗಿದೆ.

ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಾತಾವರಣ

ಅಕ್ಟೋಬರ್ 2ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಸಕಾರಾತ್ಮಕವಾಗಿ ಕಂಡುಬಂದಿವೆ. 38,697 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 3.5ರಷ್ಟು ಗಳಿಕೆ ಕಂಡಿದೆ. 11,417 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 3.32ರಷ್ಟು ಏರಿಕೆ ದಾಖಲಿಸಿದೆ. ಇದರ ಪರಿಣಾಮವಾಗಿ ಸೂಚ್ಯಂಕಗಳು ವಾರದ ಅವಧಿಯಲ್ಲಿ 3 ತಿಂಗಳ ಗರಿಷ್ಠ ಮಟ್ಟಕ್ಕೆ ಜಿಗಿದಿವೆ. ನಿಫ್ಟಿ ಬ್ಯಾಂಕ್ ಸೂಚ್ಯಂಕ ಸಹ ನಾಲ್ಕು ವಾರಗಳ ಸತತ ಕುಸಿತದಿಂದ ಹೊರಬಂದು ಶೇ 6ರಷ್ಟು ಏರಿಕೆ ಕಂಡಿದೆ.

ಗಳಿಕೆ–ಇಳಿಕೆ: ನಿಫ್ಟಿಯಲ್ಲಿ ಇಂಡಸ್ ಇಂಡ್ ಬ್ಯಾಂಕ್ ಶೇ 14.9ರಷ್ಟು, ಬಜಾಜ್ ಫೈನಾನ್ಸ್ ಶೇ 9.8ರಷ್ಟು, ಶ್ರೀ ಸಿಮೆಂಟ್ ಶೇ 8.4ರಷ್ಟು ಮತ್ತು ಅದಾನಿ ಪೋರ್ಟ್ಸ್ ಶೇ 8.3ರಷ್ಟು ಗಳಿಸಿವೆ. ಬ್ರಾಡರ್ ಮಾರ್ಕೆಟ್‌ನಲ್ಲಿ ಹಿಮತ್ ಸಿಂಗ್ ಕಾ ಶೇ 35.6ರಷ್ಟು, ರ್‍ಯಾಮ್ಕೋ ಸಿಸ್ಟಮ್ಸ್ ಶೇ 21.5ರಷ್ಟು, ಪಿವಿಆರ್ ಶೇ 18.1ರಷ್ಟು ಮತ್ತು ಇಂಡಿಯಾ ಬುಲ್ಸ್ ವೆಂಚರ್ಸ್ ಶೇ 17.5ರಷ್ಟು ಗಳಿಸಿವೆ.

ನಿಫ್ಟಿಯಲ್ಲಿ ಬಿಪಿಸಿಎಲ್ ಶೇ 6.2ರಷ್ಟು, ಏರ್‌ಟೆಲ್ ಶೇ 2ರಷ್ಟು, ಎಚ್‌ಸಿಎಲ್ ಟೆಕ್ ಶೇ 1.7ರಷ್ಟು, ಎಚ್‌ಡಿಎಫ್‌ಸಿ ಲೈಫ್ ಶೇ 1.2ರಷ್ಟು ಕುಸಿದಿವೆ. ಮಿಡ್ ಕ್ಯಾಪ್‌ನಲ್ಲಿ ರೂಟ್ ಮೊಬೈಲ್ ಶೇ 16.4ರಷ್ಟು, ಸ್ಟರ್ಲಿಂಗ್ ವಿಲ್ಸನ್ ಶೇ 6.4ರಷ್ಟು, ಸೋನಾಟಾ ಸಾಫ್ಟ್‌ವೇರ್ ಶೇ 5.5ರಷ್ಟು ಮತ್ತು ಕಾನ್‌ಕರ್ ಶೇ 5.1ರಷ್ಟು ಕುಸಿದಿವೆ.

ಐಪಿಒ: ಲಿಖಿತಾ ಇನ್ಫ್ರಾಸ್ಟ್ರಕ್ಚರ್ ಐಪಿಒ (ಆರಂಭಿಕ ಸಾರ್ವಜನಿಕ ಹೂಡಿಕೆ) ಅಕ್ಟೋಬರ್ 7ರವರೆಗೆ ವಿಸ್ತರಣೆ ಆಗಿದೆ. ರೇಲ್ ಟೆಲ್ ಕಾರ್ಪೊರೇಷನ್ 700 ಕೋಟಿ ಐಪಿಒಗಾಗಿ ಸೆಬಿಗೆ ಕರಡು ದಾಖಲೆ ಸಲ್ಲಿಸಿದೆ. ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಐಪಿಒಗಾಗಿ ಸಿದ್ಧತೆ ನಡೆಸಿದೆ.

ಮುನ್ನೋಟ: ಸೆಪ್ಟೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ₹ 95,480 ಕೋಟಿಗೆ ಏರಿಕೆಯಾಗಿದ್ದು, ಲಾಕ್‌ಡೌನ್ ನಂತರದಲ್ಲಿ ಕಂಡುಬಂದಿರುವ ಗರಿಷ್ಠ ಸಂಗ್ರಹ ಇದು. ಈ ಬೆಳವಣಿಗೆಯನ್ನು ಹೂಡಿಕೆದಾರರು ಸಕಾರಾತ್ಮಕವಾಗಿ ಪರಿಗಣಿಸಿದ್ದಾರೆ. ಹಬ್ಬಗಳ ಸರಣಿ ಆರಂಭಗೊಂಡಿರುವುದರಿಂದ ವಾಹನ ಮಾರಾಟದಲ್ಲಿ ಏರಿಕೆ ಕಂಡುಬರುವ ನಿರೀಕ್ಷೆಯಿದೆ. ಬಜಾಜ್ ಕಂಪನಿ ಸೆಪ್ಟೆಂಬರ್‌ನಲ್ಲಿ 4.41 ಲಕ್ಷ ವಾಹನಗಳನ್ನು ಮಾರಾಟ ಮಾಡಿರುವುದು ಮತ್ತು ಎಸ್ಕೋರ್ಟ್ಸ್ ಕಂಪನಿ ಸೆಪ್ಟೆಂಬರ್‌ನಲ್ಲಿ 11,851 ವಾಹನಗಳನ್ನು ಮಾರಾಟ ಮಾಡಿರುವುದು ಆಶಾದಾಯಕವಾಗಿದೆ. ಹೋಟೆಲ್ ವಲಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು ಮತ್ತೆ ಲಾಕ್‌ಡೌನ್ ಆಗದಿದ್ದರೆ ಪರಿಸ್ಥಿತಿ ಉತ್ತಮಗೊಳ್ಳಲಿದೆ. ಮೊರಟೋರಿಯಂ (ಸಾಲದ ಕಂತು ಮುಂದೂಡಿಕೆ ಅವಕಾಶ) ಪಡೆದಿರುವವರಿಗೆ ಬಡ್ಡಿ ಮೇಲೆ ಬಡ್ಡಿ (ಚಕ್ರಬಡ್ಡಿ) ವಿಧಿಸುವ ಸಂಬಂಧ ಸುಪ್ರೀಂ ಕೋರ್ಟ್‌ ತೀರ್ಪು ಕೂಡ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಹುದು. ಈ ಎಲ್ಲಾ ಬೆಳವಣಿಗೆಗಳ ಜತೆಗೆ ಜಾಗತಿಕ ವಿದ್ಯಮಾನಗಳಿಗೆ ಮಾರುಕಟ್ಟೆ ಸೂಚ್ಯಂಕಗಳು ಪ್ರತಿಕ್ರಿಯಿಸಲಿವೆ.

(ಲೇಖಕ: ‘ಇಂಡಿಯನ್ ಮನಿ ಡಾಟ್ ಕಾಂ’ನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.