ADVERTISEMENT

ಬಂಡವಾಳ ಮಾರುಕಟ್ಟೆ | ಪಿಪಿಎಫ್: ಮೆಚ್ಯೂರಿಟಿಗೆ ಹತ್ತಿರ ಇದೆಯೇ?

ಕಾವ್ಯ ಡಿ.
Published 20 ಏಪ್ರಿಲ್ 2025, 23:43 IST
Last Updated 20 ಏಪ್ರಿಲ್ 2025, 23:43 IST
   

ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (ಪಿಪಿಎಫ್) 15 ವರ್ಷಗಳಿಂದ ಹೂಡಿಕೆ ಮಾಡುತ್ತಿದ್ದೇನೆ. ಇನ್ನೇನು ಅದು ಮೆಚ್ಯೂರಿಟಿ ಅವಧಿಗೆ ಹತ್ತಿರ ಇದೆ. ಈಗ ಅದರಲ್ಲಿರುವ ಹಣ ಹಿಂಪಡೆದುಕೊಳ್ಳಬೇಕೆ ಅಥವಾ ಹೂಡಿಕೆ ಮುಂದುವರಿಸಬೇಕೆ ಎನ್ನುವ ಪ್ರಶ್ನೆ ಅನೇಕ ಹೂಡಿಕೆದಾರರಿಗೆ ಕಾಡುತ್ತದೆ. ಈ ನಿಟ್ಟಿನಲ್ಲಿ ಪಿಪಿಎಫ್ ಮೆಚ್ಯೂರಿಟಿ ಸಂದರ್ಭದಲ್ಲಿ ಹೂಡಿಕೆದಾರನಿಗೆ ಇರುವ ವಿವಿಧ ಆಯ್ಕೆಯ ಬಗ್ಗೆ ವಿವರವಾಗಿ ತಿಳಿಯೋಣ.

ಪಿಪಿಎಫ್ ಎಂದರೇನು?: ಸಾರ್ವಜನಿಕ ಭವಿಷ್ಯ ನಿಧಿಯು 15 ವರ್ಷದ ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದ್ದು, ಕೇಂದ್ರ ಸರ್ಕಾರವು 1986ರಲ್ಲಿ ಇದನ್ನು ಪರಿಚಯಿಸಿದೆ. ಪ್ರಮುಖ ಬ್ಯಾಂಕ್‌ಗಳು, ಅಂಚೆ ಕಚೇರಿಯಲ್ಲಿ ಪಿಪಿಎಫ್ ಹೂಡಿಕೆ ಆರಂಭಿಸಬಹುದು.

ಪಿಪಿಎಫ್‌ನಲ್ಲಿ ಒಂದು ವರ್ಷಕ್ಕೆ ಕನಿಷ್ಠ ಹೂಡಿಕೆ ಮೊತ್ತ ₹500 ಆಗಿದ್ದು, ಗರಿಷ್ಠ ಹೂಡಿಕೆ ಮೊತ್ತ ₹1.5 ಲಕ್ಷ ಆಗಿದೆ. ಈ ಹೂಡಿಕೆಯಲ್ಲಿನ ಮೊತ್ತಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡುತ್ತದೆ. ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವಾಗ, ಅದರ ಮೇಲೆ ಗಳಿಸುವ ಬಡ್ಡಿ ಮತ್ತು ನಗದೀಕರಣದ ಸಂದರ್ಭದಲ್ಲಿ ತೆರಿಗೆ ವಿನಾಯಿತಿ ಇದೆ. ಇದು ಅದನ್ನು ಆಕರ್ಷಕ ಹೂಡಿಕೆಯ ಆಯ್ಕೆಯನ್ನಾಗಿಸಿದೆ.

ADVERTISEMENT

ಸರ್ಕಾರವೇ ಮೂರು ತಿಂಗಳಿಗೊಮ್ಮೆ ಪಿಪಿಎಫ್ ಬಡ್ಡಿದರವನ್ನು ಪರಿಷ್ಕರಿಸುತ್ತದೆ. ಪ್ರಸ್ತುತ ಶೇ 7.1ರಷ್ಟು ನಿಗದಿಪಡಿಸಲಾಗಿದೆ. ಇದರಲ್ಲಿ ಹೂಡಿಕೆ ಮಾಡಿದ ಹಣವನ್ನು 5 ವರ್ಷದ ನಂತರ ಭಾಗಶಃ ಬಿಡಿಸಿಕೊಳ್ಳಬಹುದು. ಆದರೆ, ಪೂರ್ತಿ ಹಣ ವಾಪಸ್ ಪಡೆಯಬೇಕಾದರೆ 15 ವರ್ಷಗಳ ನಂತರವಷ್ಟೇ ಸಾಧ್ಯ. 

ಮೆಚ್ಯೂರಿಟಿಗೆ ಬಂದಾಗ ಇರುವ ಆಯ್ಕೆಗಳೇನು?

ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿದ 15 ವರ್ಷಗಳ ಬಳಿಕ ಮೆಚ್ಯೂರಿಟಿ ಅವಧಿ ಬರುತ್ತದೆ. ಈ ಸಂದರ್ಭದಲ್ಲಿ ಹೂಡಿಕೆಯ ಮೊತ್ತ, ಅದರ ಮೇಲಿನ ಬಡ್ಡಿ ಗಳಿಕೆಯನ್ನೂ ಪೂರ್ತಿಯಾಗಿ ವಾಪಸ್ ಪಡೆದುಕೊಳ್ಳಬಹುದು. ವಿಶೇಷ ಅಂದರೆ, ಪಿಪಿಎಫ್ ನಗದೀಕರಣದ ಸಂದರ್ಭದಲ್ಲಿ ಯಾವುದೇ ತೆರಿಗೆ ಅನ್ವಯಿಸುವುದಿಲ್ಲ. ಪಿಪಿಎಫ್ ವಿತ್ ಡ್ರಾ ಮಾಡಲು ನಿಮ್ಮ ಪಿಪಿಎಫ್ ಪಾಸ್ ಪುಸ್ತಕ ಮತ್ತು ಕೆವೈಸಿ ವಿವರಗಳೊಂದಿಗೆ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಫಾರಂ ‘ಸಿ’ ಸಲ್ಲಿಕೆ ಮಾಡಬೇಕು.

ಪಿಪಿಎಫ್‌ನಲ್ಲಿನ ಹೂಡಿಕೆಯು ಮೆಚ್ಯೂರಿಟಿಗೆ ಬಂದ ನಂತರ ಹೊಸ ಹೂಡಿಕೆ ಮಾಡದೆ ಹೂಡಿಕೆ ಅವಧಿಯನ್ನು ವಿಸ್ತರಿಸಿಕೊಳ್ಳಲು ಅವಕಾಶವಿದೆ. ಹೂಡಿಕೆ ಅವಧಿ ಮುಗಿದ ಬಳಿಕ ನಿಮ್ಮ ಖಾತೆಯಲ್ಲಿರುವ ಅಸಲು ಮತ್ತು ಬಡ್ಡಿ ಮೊತ್ತವನ್ನು ಮತ್ತೆ ಐದು ವರ್ಷ ಹೂಡಿಕೆಯಾಗಿ ಮುಂದುವರಿಸಬಹುದು. ಯಾವುದೇ ಹೆಚ್ಚುವರಿ ಹೂಡಿಕೆ ಮಾಡದೆ ಇದ್ದರೂ ನಿಮ್ಮ ಖಾತೆಯಲ್ಲಿ ಈಗಾಗಲೇ ಇರುವ
ಮೊತ್ತದ ಮೇಲೆ ಪ್ರಸ್ತುತ ನಿಗದಿಯಾಗಿರುವ ಬಡ್ಡಿದರದ ಲೆಕ್ಕಾಚಾರದಲ್ಲಿ ಗಳಿಕೆ ಸಿಗುತ್ತದೆ. ಅಲ್ಲದೆ, ಹೂಡಿಕೆ ಅವಧಿ ವಿಸ್ತರಿಸಿದ ಬಳಿಕವೂ ವರ್ಷಕ್ಕೊಮ್ಮೆ ಭಾಗಶಃ ಮೊತ್ತವನ್ನು ನಗದೀಕರಣ ಮಾಡಿಕೊಳ್ಳಲು ಅವಕಾಶವಿದೆ.

ಹೂಡಿಕೆಯು ಮೆಚ್ಯೂರಿಟಿಗೆ ಬಂದ ನಂತರ ಹೊಸ ಹೂಡಿಕೆಯನ್ನು ಮುಂದುವರಿಸುವ ಜೊತೆ ಜೊತೆಗೆ ಹೂಡಿಕೆ ಅವಧಿಯನ್ನು ವಿಸ್ತರಿಸಿಕೊಳ್ಳಲು ಅವಕಾಶವಿದೆ. 15 ವರ್ಷಗಳ ಹೂಡಿಕೆ ಅವಧಿ ಮುಗಿದ ಬಳಿಕ ಮತ್ತೆ ಐದು ವರ್ಷಕ್ಕೆ ಹೂಡಿಕೆ ಮುಂದುವರಿಸಲು ಸಾಧ್ಯವಿದೆ. ಆದರೆ, ಮೆಚ್ಯೂರಿಟಿಯ ನಂತರದ ಒಂದು ವರ್ಷದ ಒಳಗೆ ಹೂಡಿಕೆ ಮುಂದುವರಿಸುವ ಬಗ್ಗೆ ನೀವು ನಿಮ್ಮ ಬ್ಯಾಂಕ್/ ಅಂಚೆ ಕಚೇರಿಗೆ ಮಾಹಿತಿ ಒದಗಿಸಬೇಕು. ಹೂಡಿಕೆ ಅವಧಿ ಮುಂದುವರಿಸಿದಾಗ ವರ್ಷಕ್ಕೆ ಕನಿಷ್ಠ ₹500 ಮತ್ತು ಗರಿಷ್ಠ ₹1.5 ಲಕ್ಷದ ವರೆಗೆ ಹೂಡಿಕೆ ಮಾಡುವ ಅವಕಾಶ ಸಿಗುತ್ತದೆ

ಈ ಅಂಶಗಳು ತಿಳಿದಿರಲಿ

* ಪಿಪಿಎಫ್ ಹೂಡಿಕೆ ಅವಧಿ ವಿಸ್ತರಿಸುವಾಗ ತಪ್ಪದೇ ಫಾರಂ ‘ಎಚ್’ ಸಲ್ಲಿಸಿ. ಇಲ್ಲದಿದ್ದರೆ ಪಿಪಿಎಫ್‌ನಲ್ಲಿ ಹೂಡಿಕೆ ಮುಂದುವರಿಸಲು ಸಾಧ್ಯವಾಗುವುದಿಲ್ಲ.

* ಪಿಪಿಎಫ್ ಮೆಚ್ಯೂರಿಟಿ ಅವಧಿ ಮುಗಿದ ಬಳಿಕ ನಗದೀಕರಣಕ್ಕೆ ಮುಂದಾಗದಿದ್ದರೆ ಹೂಡಿಕೆ ಅವಧಿ ಸ್ವಯಂ ಚಾಲಿತವಾಗಿ ಮತ್ತೆ ಐದು ವರ್ಷಗಳಿಗೆ ವಿಸ್ತಾರವಾಗುತ್ತದೆ. ಆದರೆ, ಸ್ವಯಂ ಚಾಲಿತವಾಗಿ ವಿಸ್ತರಿತವಾದರೆ ಪಿಪಿಎಫ್ ಖಾತೆಯಲ್ಲಿ ಹೊಸ ಮೊತ್ತ ಡೆಪಾಸಿಟ್ ಮಾಡಲು ಸಾಧ್ಯವಾಗುವುದಿಲ್ಲ. ಫಾರಂ ‘ಎಚ್’ ಸಲ್ಲಿಸಿದರೆ ಮಾತ್ರ ಹೊಸ ಮೊತ್ತ ಡೆಪಾಸಿಟ್ ಮಾಡಬಹುದು. 

* ಪಿಪಿಎಫ್ ಹೂಡಿಕೆ ವಿಸ್ತರಿಸುವಾಗಲೂ ಅದರ ಮೇಲಿನ ಬಡ್ಡಿ ಗಳಿಕೆ ಮತ್ತು ನಗದೀಕರಣದ ವೇಳೆ ಯಾವುದೇ ತೆರಿಗೆ ಅನ್ವಯಿಸುವುದಿಲ್ಲ.

ಹೆಚ್ಚಿದ ಖರೀದಿ ಉತ್ಸಾಹ

ಏಪ್ರಿಲ್ 17ಕ್ಕೆ ಕೊನೆಗೊಂಡ ವಾರದಲ್ಲಿ ಷೇರು ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ. 78553 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 4.52ರಷ್ಟು ಗಳಿಸಿಕೊಂಡಿದೆ. 23851 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ಶೇ 4.48ರಷ್ಟು ಜಿಗಿದಿದೆ. ಉಳಿದಂತೆ ಬಿಎಸ್ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ 4.24ರಷ್ಟು ಗಳಿಸಿಕೊಂಡಿದ್ದರೆ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ 4.69ರಷ್ಟು ಜಿಗಿದಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಖರೀದಿ ಉತ್ಸಾಹ ಸಗಟು ಮತ್ತು ಚಿಲ್ಲರೆ ಹಣದುಬ್ಬರ ಇಳಿಕೆ ಆರ್‌ಬಿಐ ಮತ್ತಷ್ಟು ರೆಪೊ ದರ ಇಳಿಕೆ ಮಾಡಬಹುದು ಎಂಬ ವಿಶ್ವಾಸ ಕಂಪ್ಯೂಟರ್ ಮೊಬೈಲ್ ಫೋನ್ ಮತ್ತು ಇನ್ನಿತರ ಕೆಲ ಉತ್ಪನ್ನಗಳ ಮೇಲೆ ಪ್ರತಿ ಸುಂಕ ವಿನಾಯಿತಿ ಸೇರಿ ಹಲವು ಅಂಶಗಳು ಷೇರುಪೇಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ. ವಾರದ ಲೆಕ್ಕಾಚಾರದಲ್ಲಿ ವಲಯವಾರು ಪ್ರಗತಿ ನೋಡಿದಾಗ ಬಿಎಸ್ಇ ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 7.08 ಬ್ಯಾಂಕ್ ಸೂಚ್ಯಂಕ ಶೇ 6.66 ಫೈನಾನ್ಸ್ ಶೇ 6.13 ಬಿಎಸ್ಇ ಗ್ರಾಹಕ ಬಳಕೆ ವಸ್ತುಗಳ ಸೂಚ್ಯಂಕ ಶೇ 4.48 ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕ ಶೇ 4.38ರಷ್ಟು ಗಳಿಸಿಕೊಂಡಿವೆ. ಬಿಎಸ್ಇ ಸೂಚ್ಯಂಕದಲ್ಲಿ ಯಾವುದೇ ವಲಯ ಸಹ ಕುಸಿತ ಕಂಡಿಲ್ಲ. ವಾರದ ಗಳಿಕೆ ಲೆಕ್ಕಾಚಾರದಲ್ಲಿ ನಿಫ್ಟಿ ಸೂಚ್ಯಂಕ ನೋಡಿದಾಗ ಇಂಡಸ್‌ ಇಂಡ್ ಬ್ಯಾಂಕ್ ಶೇ 17.1 ಎಕ್ಸಿಸ್ ಬ್ಯಾಂಕ್ ಶೇ 12.15 ಜಿಯೊ ಫೈನಾನ್ಶಿಯಲ್ ಶೇ 11.57 ಅದಾನಿ ಪೋರ್ಟ್ಸ್ ಶೇ 11.43 ಟ್ರೆಂಟ್ ಶೇ 11.01 ಶ್ರೀರಾಮ್ ಫೈನಾನ್ಸ್ ಶೇ 10.78 ಏರ್‌ಟೆಲ್ ಶೇ 9.98 ಒಎನ್‌ಜಿಸಿ ಶೇ 9.61 ಎಟರ್‌ನಲ್ ಲಿಮಿಟೆಡ್ ಶೇ 9.57 ಐಷರ್ ಮೋಟರ್ಸ್ ಶೇ 8.14 ಐಸಿಐಸಿಐ ಬ್ಯಾಂಕ್ ಶೇ 8.11 ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 7.99ರಷ್ಟು ಗಳಿಸಿಕೊಂಡಿವೆ. ನಿಫ್ಟಿ 50 ಸೂಚ್ಯಂಕದಲ್ಲಿ ಯಾವುದೇ ಕಂಪನಿ ಕುಸಿತ ಕಂಡಿಲ್ಲ. ಮುನ್ನೋಟ: ಈ ವಾರ ಹ್ಯಾವೆಲ್ಸ್ ಇಂಡಿಯಾ ಎಚ್‌ಸಿಎಲ್ ಟೆಕ್ನಾಲಜೀಸ್ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಡೆಲ್ಟಾ ಕಾರ್ಪ್ ಟಾಟಾ ಕಮ್ಯೂನಿಕೇಷನ್ಸ್ ವಾರಿ ಎಂಜಿನಿಯರ್ಸ್ ಬಜಾಜ್ ಹೌಸಿಂಗ್ ಫೈನಾನ್ಸ್ ಮೈಂಡ್ ಟ್ರೀ ಹಿಂದೂಸ್ಥಾನ್ ಯುನಿಲಿವರ್ ಎಕ್ಸಿಸ್ ಬ್ಯಾಂಕ್ ನೆಸ್ಲೆ ಇಂಡಿಯಾ ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂಪನಿ ಮಾರುತಿ ಸುಜುಕಿ ಶ್ರೀರಾಮ್ ಫೈನಾನ್ಸ್ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.