ADVERTISEMENT

ಬಂಡವಾಳ ಮಾರುಕಟ್ಟೆ: ಹಣಕಾಸಿನ ಭದ್ರತೆಗೆ ನಾಲ್ಕು ಸೂತ್ರಗಳು

ಅವಿನಾಶ್ ಕೆ.ಟಿ
Published 27 ಫೆಬ್ರುವರಿ 2022, 22:30 IST
Last Updated 27 ಫೆಬ್ರುವರಿ 2022, 22:30 IST
ಅವಿನಾಶ್ ಕೆ.ಟಿ.
ಅವಿನಾಶ್ ಕೆ.ಟಿ.   

ಆರ್ಥಿಕವಾಗಿ ಸಬಲರಾಗಲು ಬೇಕಿರುವ ಅಡಿಪಾಯ ಆರ್ಥಿಕ ಶಿಸ್ತು. ಹೌದು, ಹಣಕಾಸು ನಿರ್ವಹಣೆಯನ್ನು ಸರಿಯಾಗಿ ಕಲಿತರೆ ಮುಗ್ಗಟ್ಟಿನ ಪರಿಸ್ಥಿತಿಯನ್ನೂ ಸಮರ್ಥವಾಗಿ ನಿಭಾಯಿಸಬಹುದು. ಬನ್ನಿ, ವೈಯಕ್ತಿಕ ಹಣಕಾಸು ನಿರ್ವಹಣೆಯಲ್ಲಿ ಬಹಳ ಮುಖ್ಯ ಅನ್ನಿಸುವ ನಾಲ್ಕು ಪ್ರಮುಖ ಸೂತ್ರಗಳ ಬಗ್ಗೆ ತಿಳಿದುಕೊಳ್ಳೋಣ.

ಸುಲಭವಾಗಿ ಸಿಗುತ್ತದೆ ಎಂದು ಸಾಲ ಮಾಡಬೇಡಿ: ನಾನು ಬಹಳಷ್ಟು ಜನರನ್ನು ‘ಸಾಲ ಯಾಕೆ ಮಾಡಿದ್ದೀರಿ’ ಎಂದು ಕೇಳಿದಾಗ ಅವರಿಂದ ಬರುವ ಉತ್ತರ ‘ಸಾಲ ಸಿಗುತ್ತೆ ಅಂದ್ರು, ಅದಕ್ಕೆ ಸಾಲ ತೆಗೆದುಕೊಂಡ್ವಿ’ ಅಂತ. ಹೀಗೆ ಗೊತ್ತು ಗುರಿಯಿಲ್ಲದೆ ಸಾಲ ಮಾಡುವವರ ಸಂಖ್ಯೆಯೇ ಹೆಚ್ಚು. 25ರಿಂದ 30 ವರ್ಷ ವಯಸ್ಸಿನ ನಡುವೆ ಇರುವಾಗ ಹಲವು ರೀತಿಯ ಜವಾಬ್ದಾರಿಗಳಿರುತ್ತವೆ. ಗೃಹ ಸಾಲ, ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಸಾಲ, ಇಎಂಐ ಹೀಗೆ ಹತ್ತಾರು ಬಗೆಯ ಸಾಲಗಳನ್ನು ಪಡೆಯುವಾಗ ಮುಂದೆ ಎದುರಿಸಬಹುದಾದ ಸಮಸ್ಯೆಗಳ ಬಗ್ಗೆ ಅರಿವಿರಬೇಕು. ಎಲ್ಲ ಮಾದರಿಗಳ ಸಾಲ ಪಡೆದು ತಿಂಗಳ ಸಂಬಳದಲ್ಲೇ ಅವನ್ನು ತೀರಿಸುತ್ತೇವೆ ಎನ್ನುವುದು ಮೂರ್ಖತನವಾಗುತ್ತದೆ.

ಶೇಕಡ 8.5ರಿಂದ ಶೇ 13ರವರೆಗೆ ಬಡ್ಡಿದರ ಇರುವ ಸಾಲದ ಹೊರೆಯನ್ನು ಇಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಸರಳವಾಗಿ ಹೇಳುವುದಾದರೆ, ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚಬೇಕು ಎನ್ನುವ ಗಾದೆಯನ್ನು ಅರಿತು ಮುನ್ನಡೆದರೆ ಸಂಕಷ್ಟ ನಿಮ್ಮ ಹತ್ತಿರ ಸುಳಿಯುವುದಿಲ್ಲ.

ADVERTISEMENT

ಎಲ್ಲ ಖರ್ಚುಗಳಿಗೂ ಯೆಸ್ ಎನ್ನಬೇಡಿ: ಯಾವುದಕ್ಕೆ ಹಣ ಖರ್ಚು ಮಾಡಬೇಕು, ಯಾವುದಕ್ಕೆ ಖರ್ಚು ಮಾಡಬಾರದು ಎನ್ನುವುದನ್ನು ನಿರ್ದಾಕ್ಷಿಣ್ಯವಾಗಿ ಹೇಳುವ ಜಾಣ್ಮೆಯನ್ನು ಯಾವ ವ್ಯಕ್ತಿ ರೂಢಿಸಿಕೊಂಡಿದ್ದಾನೋ ಆತ ಹಣಕಾಸಿನ ನಿರ್ವಹಣೆಯಲ್ಲಿ ಯಶಸ್ಸು ಗಳಿಸುತ್ತಾನೆ. ಯಾವ ವ್ಯಕ್ತಿ ಕುಟಂಬದವರ, ಸಂಬಂಧಿಕರ ಮುಲಾಜಿಗೆ ಸಿಲುಕಿ ಹಣ ವ್ಯಯಿಸುವ ಬಗ್ಗೆ ತೀರ್ಮಾನಿಸುತ್ತಾನೋ ಆ ವ್ಯಕ್ತಿ ಆರ್ಥಿಕ ಹಿನ್ನಡೆ ಅನುಭವಿಸುತ್ತಾನೆ ಎಂದು ಖ್ಯಾತ ಹೂಡಿಕೆ ತಜ್ಞ ವಾರನ್ ಬಫೆಟ್ ಹೇಳುತ್ತಾರೆ.

ಮಕ್ಕಳು, ಪತ್ನಿ ಮತ್ತು ತಂದೆ–ತಾಯಿಯೊಂದಿಗಿನ ಭಾವನಾತ್ಮಕ ಸಂಬಂಧಕ್ಕೆ ಜೋತು ಬಿದ್ದು ಮನೆಯ ಯಜಮಾನ ಹಣಕಾಸಿನ ತೀರ್ಮಾನಗಳನ್ನು ತೆಗೆದುಕೊಂಡರೆ ಹಣಕಾಸಿನ ಕೊರತೆ ನಿರಂತರವಾಗಿ ಕಾಡುವುದು ನಿಶ್ಚಿತ. ಹಣ ವ್ಯಯಿಸುವಾಗ ದೀರ್ಘಾವಧಿ ಉದ್ದೇಶಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ವಿಮೆ ಮತ್ತು ಹೂಡಿಕೆ ನಡುವೆ ವ್ಯತ್ಯಾಸ ತಿಳಿಯಿರಿ: ಅನೇಕರು ವಿಮೆ ಮತ್ತು ಹೂಡಿಕೆಯನ್ನು ಒಂದೇ ತಕ್ಕಡಿಯಲ್ಲಿ ಇರಿಸಿ ತೂಗುತ್ತಾರೆ. ಆದರೆ ವಿಮೆಯನ್ನು ಹೂಡಿಕೆ ಎಂದು ತಿಳಿಯಬಾರದು. ವಿಮೆ ಎನ್ನುವುದು ನಿಮ್ಮ ಪಾಲಿನ ರಕ್ಷಾ ಕವಚ. ಸಂಕಷ್ಟದ ಸಮಯದಲ್ಲಿ ಅದು ನಿಮ್ಮ ನೆರವಿಗೆ ಬರುತ್ತದೆ. ಹೂಡಿಕೆ ಎಂದರೆ ನೀವು ಗಳಿಸಿರುವ ಹಣವನ್ನು ಮತ್ತಷ್ಟು ಹೆಚ್ಚು ಮಾಡಲು ಇರುವ ಮಾರ್ಗ. ಹೂಡಿಕೆಯಿಂದ ಸಂಪತ್ತು ವೃದ್ಧಿಯಾದರೆ, ಅನಿಶ್ಚಿತ ಸಂದರ್ಭಗಳನ್ನು ಎದುರಿಸಲು ವಿಮೆ ನೆರವು ನೀಡುತ್ತದೆ. ಹಾಗಾಗಿ ನೀವು ವಿಮೆ ಹೊಂದುವುದು ಅವಶ್ಯಕ.

ಒಂದೇ ಕಡೆ ಹೂಡಿಕೆ ಸಲ್ಲದು: ನಾವು ಆರೋಗ್ಯವಾಗಿ ಇರಬೇಕಾದರೆ, ಸಮತೂಕದ ಆಹಾರ ಅಗತ್ಯ. ಅಂತೆಯೇ ಉಳಿತಾಯದಲ್ಲಿಯೂ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ಒಂದೇ ಕಡೆ ಹೆಚ್ಚು ಹೂಡಿಕೆ ಮಾಡಿದಾಗ ಆ ಹೂಡಿಕೆ ಉತ್ಪನ್ನ ನಷ್ಟ ಅನುಭವಿಸಿದರೆ ನಿಮಗೂ ದೊಡ್ಡ ಮಟ್ಟದಲ್ಲಿ ನಷ್ಟವಾಗುತ್ತದೆ. ನಿಮ್ಮ ಹೂಡಿಕೆಯು ವಿವಿಧ ಕಂಪನಿಗಳ ಷೇರು, ಬಾಂಡ್‌ಗಳಲ್ಲಿ ಹಾಗೂ ವಿವಿಧ ಸಾಂಪ್ರದಾಯಿಕ ಹೂಡಿಕೆ ಉತ್ಪನ್ನಗಳಲ್ಲಿ ಇದ್ದಾಗ ರಿಸ್ಕ್ ಪ್ರಮಾಣ ಕಡಿಮೆ. ಉದಾಹರಣೆಗೆ: ನಿವೇಶನ ಖರೀದಿ, ಕೃಷಿ ಜಮೀನು ಖರೀದಿ, ಪಿಪಿಎಫ್ ಹೂಡಿಕೆ, ಎಫ್.ಡಿ, ಮ್ಯೂಚುವಲ್ ಫಂಡ್ ಹೂಡಿಕೆ, ಷೇರುಗಳಲ್ಲಿ ಹೂಡಿಕೆ, ಪಿಂಚಣಿ ಯೋಜನೆಯಲ್ಲಿ ಹೂಡಿಕೆ... ಹೀಗೆ ಹತ್ತಾರು ಕಡೆ ಹೂಡಿಕೆ ಮಾಡಿದಾಗ ಭದ್ರತೆ ಹೆಚ್ಚು.

ಅನಿಶ್ಚಿತತೆಯತ್ತ ಮುಖ ಮಾಡಿದ ಷೇರುಪೇಟೆ

ಫೆಬ್ರುವರಿ 25ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿವೆ. 55,858 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 3.41ರಷ್ಟು ತಗ್ಗಿದ್ದರೆ, 16,658 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 3.58ರಷ್ಟು ಇಳಿಕೆಯಾಗಿದೆ. ರಷ್ಯಾ–ಉಕ್ರೇನ್ ನಡುವಿನ ಯುದ್ಧ, ಕಚ್ಚಾ ತೈಲದ ಬೆಲೆ ಏರಿಕೆ, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಹಿಂಜರಿಕೆ ಸೇರಿ ಹಲವು ಅಂಶಗಳು ಷೇರುಪೇಟೆ ಕುಸಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಬ್ಯಾಂಕ್ ಶೇ 3ರಷ್ಟು, ಮಿಡ್ ಕ್ಯಾಪ್ ಶೇ 3.5ರಷ್ಟು, ಸ್ಮಾಲ್ ಕ್ಯಾಪ್ ಶೇ 5.3ರಷ್ಟು, ಸರ್ಕಾರಿ ಸ್ವಾಮ್ಯದ ಸೂಚ್ಯಂಕ ಶೇ 6ರಷ್ಟು, ನಿಫ್ಟಿ ರಿಯಲ್ ಎಸ್ಟೇಟ್ ಶೇ 3.40ರಷ್ಟು ಮತ್ತು ನಿಫ್ಟಿ ಮೂಲಸೌಕರ್ಯ ಸೂಚ್ಯಂಕ ಶೇ 4.92ರಷ್ಟು ಕುಸಿದಿವೆ.

ಇಳಿಕೆ–ಗಳಿಕೆ: ನಿಫ್ಟಿಯಲ್ಲಿ ಬಿಪಿಸಿಎಲ್ ಶೇ 10ರಷ್ಟು, ಯುಪಿಎಲ್ ಶೇ 10ರಷ್ಟು, ಗ್ರಾಸಿಮ್ ಶೇ 9ರಷ್ಟು, ಎಚ್‌ಡಿಎಫ್‌ಸಿ ಲೈಫ್ ಶೇ 9ರಷ್ಟು, ಎಸ್‌ಬಿಐ ಲೈಫ್ ಶೇ 9ರಷ್ಟು ಇಳಿಕೆ ಕಂಡಿವೆ. ಸಿಪ್ಲಾ ಶೇ 1.7ರಷ್ಟು, ಕೋಟಕ್ ಬ್ಯಾಂಕ್ ಶೇ 1.5ರಷ್ಟು, ಪವರ್ ಗ್ರಿಡ್ ಶೇ 0.8ರಷ್ಟು ಮತ್ತು ಹಿಂಡಾಲ್ಕೊ ಶೇ 0.8ರಷ್ಟು ಗಳಿಕೆ ಕಂಡಿವೆ.

ಪ್ಯೂಚರ್ ಆ್ಯಂಡ್ ಆಪ್ಶನ್‌ನಲ್ಲಿ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಶೇ 19ರಷ್ಟು, ಇಂಡಸ್ ಟವರ್ಸ್ ಶೇ 15ರಷ್ಟು, ರೇನ್ ಇಂಡಸ್ಟ್ರೀಸ್ ಶೇ 13ರಷ್ಟು, ದಾಲ್ಮಿಯಾ ಸಿಮೆಂಟ್ ಶೇ 12ರಷ್ಟು, ಜೀ ಶೇ 12ರಷ್ಟು ಕುಸಿದಿವೆ. ಡಿಕ್ಸಾನ್ ಟೆಕ್ನಾಲಜೀಸ್ ಶೇ 10ರಷ್ಟು, ಕ್ರಾಂಪ್ಟನ್ ಕನ್ಸೂಮರ್ ಶೇ 7ರಷ್ಟು, ಅಬೋಟ್ ಶೇ 6.5ರಷ್ಟು, ಯುನೈಟೆಡ್ ಸ್ಪಿರಿಟ್ಸ್ ಶೇ 5ರಷ್ಟು ಗಳಿಸಿವೆ.

ಮುನ್ನೋಟ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದೆ ಯಾವ ತಿರುವು ಪಡೆಯಲಿದೆ ಎನ್ನುವುದು ಷೇರುಪೇಟೆ ಸೂಚ್ಯಂಕದ ಗತಿ ನಿರ್ಧರಿಸಲಿದೆ. ಬಿಕ್ಕಟ್ಟು ಶಮನಗೊಳ್ಳದಿದ್ದರೆ ಸೂಚ್ಯಂಕಗಳು ಮತ್ತಷ್ಟು ಕುಸಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕುಸಿತದ ಸಮಯದಲ್ಲಿ ಉತ್ತಮ ಕಂಪನಿಗಳ ಷೇರುಗಳನ್ನು ಕಡಿಮೆ ದರದಲ್ಲಿ ಕೊಂಡುಕೊಳ್ಳಲು ಅಡ್ಡಿಯಿಲ್ಲ.

ಮಾರ್ಚ್ 10ರಂದು ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಕಚ್ಚಾ ತೈಲ ಬೆಲೆ ಎಷ್ಟರ ಮಟ್ಟಿಗೆ ಏರಿಕೆ ಕಾಣಲಿದೆ ಎನ್ನುವುದು ಕೂಡ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿದೆ. ಇದಲ್ಲದೆ ಹಣದುಬ್ಬರದ ಕುರಿತಾಗಿ ಹೊರಬೀಳುವ ದತ್ತಾಂಶ, ವಿದೇಶಿ ಸಾಂಸ್ಥಿಕ ಹೂಡಿಕೆದಾರರ ನಡೆ ಕೂಡ ಮುಖ್ಯವಾಗಲಿದೆ. ಮಾರ್ಚ್ 15-16ರಂದು ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರದ ಕುರಿತು ನಿರ್ಣಯ ಮಾಡುವ ಸಾಧ್ಯತೆಯಿದೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.