ಚಿನ್ನ
ಮಾರುಕಟ್ಟೆಯಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂ ಗೆ ₹1.28 ಲಕ್ಷದ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ. ಹೀಗಾಗಿ, ಮುಂಬರುವ ವರ್ಷಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ₹3 ಲಕ್ಷ ತಲುಪಬಹುದೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಇದನ್ನು ಅರ್ಥಮಾಡಿಕೊಳ್ಳಲು, ನಾವು ಹಳೆಯ ದತ್ತಾಂಶ, ಗೋಲ್ಡ್‌ಮನ್ ಸ್ಯಾಕ್ಸ್ ವರದಿ ಸೇರಿದಂತೆ ಜಾಗತಿಕ ವಿಶ್ಲೇಷಣೆಗಳು ಮತ್ತು ಭಾರತದ ಆರ್ಥಿಕತೆಯ ಮನ್ನೋಟವನ್ನು ಪರಿಶೀಲಿಸಬೇಕಾಗುತ್ತದೆ.
1964ರಲ್ಲಿ 10 ಗ್ರಾಂ ಚಿನ್ನದ ಬೆಲೆ ₹63 ಇತ್ತು. 1980ರಲ್ಲಿ ₹1,800, 1990ರಲ್ಲಿ ₹3,200, 2,000ನೇ ಇಸವಿಯಲ್ಲಿ ₹4,400, 2010ರಲ್ಲಿ ₹18,500, 2020ರಲ್ಲಿ ₹48,651 ಇದ್ದ 10 ಗ್ರಾಂ ಬಂಗಾರದ ದರ 2025ರ ಅಕ್ಟೋಬರ್‌ನಲ್ಲಿ ₹1.28 ಲಕ್ಷದ ಗಡಿ ದಾಟಿ ದಾಖಲೆ ಬರೆದಿದೆ.
ಭಾರತದಲ್ಲಿ ಬಂಗಾರದ ಬೆಲೆಯನ್ನು ಗಮನಿಸಿದಾಗ ಕಳೆದ ಆರು ದಶಕಗಳಲ್ಲಿ ಅದು ವಾರ್ಷಿಕ ಸರಾಸರಿ ಶೇ 12ರಿಂದ ಶೇ 13ರ ದರದಲ್ಲಿ ಬೆಳೆದಿರುವುದು ಗೊತ್ತಾಗುತ್ತದೆ. ಹಣದುಬ್ಬರ, ರೂಪಾಯಿ ಮೌಲ್ಯ ಕುಸಿತ ಮತ್ತು ಹೂಡಿಕೆದಾರಿಂದ ಬೇಡಿಕೆ ಹೆಚ್ಚಳ ಇದಕ್ಕೆ ಮುಖ್ಯ ಕಾರಣಗಳು.
ಗೋಲ್ಡ್‌ಮನ್ ಸ್ಯಾಕ್ಸ್ 2025ರ ವರದಿ ಮತ್ತು ಜಾಗತಿಕ ಬ್ಯಾಂಕ್‌ಗಳ ಅಂದಾಜಿನ ಪ್ರಕಾರ 2026ರ ಡಿಸೆಂಬರ್ ವೇಳೆಗೆ ಚಿನ್ನದ ಬೆಲೆ ಶೇ 23ರಷ್ಟು ಹೆಚ್ಚಾಗಿ, 10 ಗ್ರಾಂಗೆ ₹1,38,500 ತಲುಪಲಿದೆ. ಕೇಂದ್ರೀಯ ಬ್ಯಾಂಕ್‌ಗಳು ಚಿನ್ನ ಖರೀದಿಸುತ್ತಿರುವುದು, ಹಣದುಬ್ಬರದ ಆತಂಕ ಮತ್ತು ಅಮೆರಿಕದ ಡಾಲರ್ ಮೇಲಿನ ಅವಲಂಬನೆಯನ್ನು ಕೆಲವು ದೇಶಗಳು ಕಡಿಮೆ ಮಾಡುತ್ತಿರುವುದು ಈ ಏರಿಕೆಗೆ ಮುಖ್ಯ ಕಾರಣಗಳಾಗಿವೆ. ಅಂದರೆ ಚಿನ್ನದ ಬೆಲೆ ದಿಢೀರನೆ ಏರಿಕೆ ಆಗುವುದಿಲ್ಲ, ಬದಲಾಗಿ ಮಧ್ಯಮ ಗತಿಯಲ್ಲಿ ಸ್ಥಿರವಾಗಿ ಏರಿಕೆಯಾಗಲಿದೆ ಎಂಬುದನ್ನು ಈ ವರದಿ ಹೇಳುತ್ತದೆ. 2026ರ ವೇಳೆಗೆ 10 ಗ್ರಾಂಗೆ ಬೆಲೆ ₹1.42 ಲಕ್ಷ ಆಗಬಹುದು ಎಂದು ಬ್ಯಾಂಕ್ ಆಫ್ ಅಮೆರಿಕ ಊಹಿಸಿದೆ. ಬಜಾಜ್ ಫಿನ್‌ಸರ್ವ್, ರುಪೀಝಿ ಸಂಸ್ಥೆಗಳು ಹಣದುಬ್ಬರ ಇದೇ ರೀತಿ ಹೆಚ್ಚಾಗಿಯೇ ಉಳಿದರೆ 10 ಗ್ರಾಂ ಚಿನ್ನದ ಬೆಲೆ ₹1.55 ಲಕ್ಷದವರೆಗೆ ಹೋಗಬಹುದು ಎಂದು ಹೇಳಿವೆ.
ಭಾರತದಲ್ಲಿ 10 ಗ್ರಾಂ ಚಿನ್ನ ₹3 ಲಕ್ಷ ಆಗಬೇಕಾದರೆ, ಪ್ರಮುಖ ದೇಶಗಳಲ್ಲಿ ಅತಿ ಹೆಚ್ಚಿನ ಹಣದುಬ್ಬರ, ಜಾಗತಿಕ ಆರ್ಥಿಕ ವ್ಯವಸ್ಥೆಯ ಪತನ, ಅಂತರರಾಷ್ಟ್ರೀಯ ಸಂಘರ್ಷಗಳು ಸೇರಿದಂತೆ ತೀವ್ರ ತರಹದ ಘಟನೆಗಳು ನಡೆಯಬೇಕು. ಆದರೆ ಸದ್ಯಕ್ಕೆ ಯಾವುದೇ ಪ್ರಮುಖ ಹಣಕಾಸು ಸಂಸ್ಥೆಗಳು ಇಂತಹ ಸಂದರ್ಭವನ್ನು ಊಹಿಸಿಲ್ಲ. ಭಾರತದಲ್ಲಿ ಚಿನ್ನದ ಬೇಡಿಕೆಯು ಯಾವಾಗಲೂ ಸಂಸ್ಕೃತಿ ಮತ್ತು ಆರ್ಥಿಕತೆಯೊಂದಿಗೆ ಬೆರೆತುಹೋಗಿದೆ. ದೇಶೀಯವಾಗಿ ಹಲವು ಅಂಶಗಳು ಬಂಗಾರದ ಬೆಲೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ರೂಪಾಯಿ ಮೌಲ್ಯ ಕುಸಿತ, ಹಬ್ಬಗಳು ಮತ್ತು ಮದುವೆಗಳ ಸಮಯದಲ್ಲಿ ಚಿನ್ನಕ್ಕೆ ಸತತ ಬೇಡಿಕೆ, ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಬಂಗಾರದ ಮೀಸಲು ಸಂಗ್ರಹ ಹೆಚ್ಚಳ ಸೇರಿದಂತೆ ಕೆಲವು ಅಂಶಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ.
(ಐತಿಹಾಸಿಕ ದತ್ತಾಂಶ, ಗೋಲ್ಡ್‌ಮನ್ ಸ್ಯಾಕ್ಸ್ ಮತ್ತು ಬ್ಯಾಂಕ್ ಆಫ್ ಅಮೆರಿಕದ ವರದಿ ಆಧಾರದಲ್ಲಿ ಚಿನ್ನದ ಬೆಲೆ ಹೇಗೆ ಸಾಗಬಹುದು ಎಂಬ ಅಂದಾಜು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.