
ಸಾಂದರ್ಭಿಕ ಚಿತ್ರ
ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಮರೆತಿದ್ದೀರಾ? ನಿಮ್ಮ ಕುಟುಂಬದವರ ಬ್ಯಾಂಕ್ ಖಾತೆಗಳಿದ್ದು, ಅದರಲ್ಲಿ ಹಣವೇನಾದರೂ ಇರಬಹುದಾ ಎಂಬ ಪ್ರಶ್ನೆ ನಿಮ್ಮಲ್ಲಿದೆಯಾ? ಹಾಗಾದರೆ ಚಿಂತಿಸಬೇಡಿ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಮ್ಮ ಸಹಾಯಕ್ಕೆ ಬರುತ್ತದೆ. ಹೌದು, ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ‘ನಿಮ್ಮ ಹಣ ನಿಮ್ಮ ಅಧಿಕಾರ’ ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ವಾರಸುದಾರರು ಯಾರು ಎಂದು ತಿಳಿಯದೆ ಬ್ಯಾಂಕ್ ಖಾತೆಗಳಲ್ಲಿ ಉಳಿದುಕೊಂಡಿರುವ ಹಣವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಈ ಅಭಿಯಾನದ ಉದ್ದೇಶ.
ವಾರಸುದಾರರಿಗಾಗಿ ಕಾದು ಕುಳಿತಿದೆ ₹1.84 ಲಕ್ಷ ಕೋಟಿ: ಯಾವುದೇ ಉಳಿತಾಯ ಖಾತೆ, ಚಾಲ್ತಿ ಖಾತೆ 10 ವರ್ಷ ಚಲಾವಣೆಯಲ್ಲಿ ಇಲ್ಲದಿದ್ದರೆ ಅಂತಹ ಖಾತೆಯನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಗುತ್ತದೆ. ನಿರ್ದಿಷ್ಟ ಖಾತೆಯಲ್ಲಿರುವ ಹಣವನ್ನು ವಾರಸುದಾರರಿಲ್ಲದ ಹಣ (ಅನ್ ಕ್ಲೇಮ್ಡ್ ಡೆಪಾಸಿಟ್) ಎಂದು ವರ್ಗೀಕರಿಸಲಾಗುತ್ತದೆ. ಆ ಹಣವನ್ನು ಆರ್‌ಬಿಐ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾಯಿಸುತ್ತದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ ವಾರಸುದಾರರಿಲ್ಲದೆ ಬ್ಯಾಂಕ್ ಖಾತೆಗಳಲ್ಲಿ ಬರೋಬ್ಬರಿ ಒಟ್ಟು ₹1.84 ಲಕ್ಷ ಕೋಟಿ ಕೊಳೆಯುತ್ತಿದೆ.
ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆಗಳಲ್ಲಿ ಎರಡು ವರ್ಷ ಯಾವುದೇ ವಹಿವಾಟು ನಡೆಯದಿದ್ದರೆ ಅಂತಹ ಖಾತೆಗಳನ್ನು ಚಲಾವಣೆಯಲ್ಲಿ ಇಲ್ಲದ ಖಾತೆ ಅಥವಾ ಡೋರ್‌ಮೆಂಟ್ ಖಾತೆ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ ನಿಶ್ಚಿತ ಠೇವಣಿಗಳು ಮೆಚ್ಯೂರಿಟಿ ಹೊಂದಿದ ಎರಡು ವರ್ಷಗಳ ಬಳಿಕವೂ ಹೂಡಿಕೆದಾರ ಆ ಹಣವನ್ನು ಹಿಂಪಡೆಯದಿದ್ದರೆ ಅದನ್ನೂ ಸಹ ಚಲಾವಣೆಯಲ್ಲಿ ಇಲ್ಲದ ಖಾತೆ ಎಂದು ವರ್ಗೀಕರಿಸಲಾಗುತ್ತದೆ. ಈ ಖಾತೆಗಳು ಮತ್ತೆ ಎಂಟು ವರ್ಷ ಸಕ್ರಿಯವಾಗಿ ಇರದಿದ್ದರೆ ಅಂತಹ ಖಾತೆಗಳನ್ನು ವಾರಸುದಾರರಿಲ್ಲದ ನಿಷ್ಕ್ರಿಯ ಬ್ಯಾಂಕ್ ಖಾತೆಗಳು ಎಂದು ವಿಂಗಡಿಸಿ ಅಲ್ಲಿರುವ ಮೊತ್ತವನ್ನು ಆರ್‌ಬಿಐ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾಯಿಸಲಾಗುತ್ತದೆ.
ನಿಷ್ಕ್ರಿಯ ಖಾತೆಗಳಲ್ಲಿ ಇರುವ ಹಣವನ್ನು ಅರ್ಹ ವಾರಸುದಾರರಿಗೆ ತಲುಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ 2023ರಲ್ಲಿ ಉದ್ಗಮ್ ಪೋರ್ಟಲ್ ಆರಂಭಿಸಿತು. ಈ ಉದ್ಗಮ್ ಪೋರ್ಟಲ್‌ನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದೆ ಉಳಿದುಕೊಂಡರುವ ಮಾಹಿತಿಯನ್ನು ಪತ್ತೆ ಮಾಡಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಧನಲಕ್ಷ್ಮಿ ಬ್ಯಾಂಕ್ ಲಿಮಿಟೆಡ್, ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್, ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್, ಸಿಟಿ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಯುಸಿಒ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಐಡಿಬಿಐ ಬ್ಯಾಂಕ್, ಜಮ್ಮು ಕಾಶ್ಮೀರ್ ಬ್ಯಾಂಕ್, ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಸ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಎಚ್‌ಎಸ್‌ಬಿಸಿ ಲಿಮಿಟೆಡ್, ಕರ್ನಾಟಕ ಬ್ಯಾಂಕ್ ಲಿಮಿಟೆಡ್, ದಿ ಕರೂರ್ ವೈಶ್ಯ ಬ್ಯಾಂಕ್, ಸಾರಸ್ವತ್ ಕೋ ಆಪರೇಟಿವ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ತಮಿಳುನಾಡು ಮರ್ಕಂಟೈಲ್ ಬ್ಯಾಂಕ್‌ಗಳ ಮಾಹಿತಿ ಉದ್ಗಮ್ ಪೋರ್ಟಲ್‌ನಲ್ಲಿ ಸಿಗುತ್ತದೆ.
ಉದ್ಗಮ್ ವೆಬ್‌ಸೈಟ್‌ಗೆ ಹೋಗಿ, ಮೊದಲಿಗೆ ನಿಮ್ಮ ಮೊಬೈಲ್ ನಂಬರ್ ಮತ್ತು ಹೆಸರು ನಮೂದಿಸಿ, ಪಾಸ್ ವರ್ಡ್ ರಚನೆ ಮಾಡಿ. ಆರ್‌ಬಿಐನ ನೀತಿಗಳಿಗೆ ಅನುಗುಣವಾಗಿ ಉದ್ಗಮ್ ಪೋರ್ಟಲ್ ಬಳಸುತ್ತೇನೆ ಎಂದು ಚೆಕ್ ಬಾಕ್ಸ್ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ ಕಳುಹಿಸಿರುವ ಒಟಿಪಿಯನ್ನು ನಮೂದಿಸಿ ಪ್ರಕ್ರಿಯೆ ಪೂರ್ಣಗೊಳಿಸಿ.
ಉದ್ಗಮ್ ಪೋರ್ಟಲ್‌ನಲ್ಲಿ ವಾರಸುದಾರರಿಲ್ಲದ ಠೇವಣಿಗಳನ್ನು ಪತ್ತೆ ಮಾಡಲು, ಬ್ಯಾಂಕ್‌ನ ಹೆಸರು ಮತ್ತು ಖಾತೆ ಹೊಂದಿರುವವರ ವಿವರದ ಜೊತೆ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರ ಗುರುತಿನ ಚೀಟಿ, ಪಾಸ್‌ಪೋರ್ಟ್ ಅಥವಾ ಖಾತೆದಾರನ ಜನ್ಮದಿನಾಂಕದ ಮಾಹಿತಿ ನಮೂದಿಸಬೇಕಾಗುತ್ತದೆ. ಹಿಂದೂ ಅವಿಭಕ್ತ ಕುಟುಂಬ, ಪ್ರೊಪ್ರೈಟರ್ ಶಿಪ್ ಕಂಪನಿ, ಪಾರ್ಟ್‌ನರ್ ಶಿಪ್, ಎಲ್‌ಎಲ್‌ಪಿಗೆ ಸಂಬಂಧಿಸದ ಠೇವಣಿಗಳನ್ನು ಹುಡುಕಬೇಕಾದರೆ ನಾನ್ ಇಂಡುವಿಜುವಲ್ ಕ್ಯಾಟಗರಿ ಆಯ್ಕೆ ಮಾಡಬೇಕಾಗುತ್ತದೆ.
ಉದ್ಗಮ್ ಪೋರ್ಟಲ್ ಮೂಲಕ ಯಾವ ಬ್ಯಾಂಕ್‌ನಲ್ಲಿ ನಿಮ್ಮ ಅಥವಾ ನಿಮ್ಮವರ ಹಣ ಇದೆ ಎನ್ನುವುದನ್ನು ತಿಳಿಯಬಹುದು. ಆದರೆ ಉದ್ಗಮ್ ಮೂಲಕ ಆ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಉದ್ಗಮ್ ಪೋರ್ಟಲ್‌ನಲ್ಲಿ ಸಿಕ್ಕ ಮಾಹಿತಿಯನ್ನು ತೆಗೆದುಕೊಂಡು ಸಂಬಂಧಪಟ್ಟ ಬ್ಯಾಂಕ್‌ಗೆ ಹಣಕ್ಕಾಗಿ ಕ್ಲೇಮ್ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಯ ಜೊತೆಗೆ ಕೆವೈಸಿ ದಾಖಲೆ, ಠೇವಣಿ ವಿವರ, ಖಾತೆದಾರನ ಭಾವಚಿತ್ರ, ನೀವು ಕಾನೂನುಬದ್ಧ ಉತ್ತರಾಧಿಕಾರಿ ಎನ್ನುವುದಕ್ಕೆ ದಾಖಲೆ ಮತ್ತು ವ್ಯಕ್ತಿಯ ಮರಣ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ನಿಮ್ಮ ಅರ್ಜಿ ಪರಿಶೀಲಿಸಿದ ಬಳಿಕ ಬ್ಯಾಂಕ್ ಹಣವನ್ನು ಬಿಡುಗಡೆ ಮಾಡುತ್ತದೆ.
ಉದ್ಗಮ್ ಪೋರ್ಟಲ್‌ಗೆ ಭೇಟಿ ನೀಡಿ
ನೋಂದಾಯಿತ ಮೊಬೈಲ್ ನಂಬರ್, ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಆಗಿ
ಬ್ಯಾಂಕ್ ದಾಖಲೆಗಳ ಪ್ರಕಾರ ಖಾತೆದಾರನ ಹೆಸರು ನಮೂದಿಸಿ
ನಂತರ ಒಂದು ಬ್ಯಾಂಕ್, ಹಲವು ಬ್ಯಾಂಕ್ ಅಥವಾ ಯಾವೆಲ್ಲಾ ಬ್ಯಾಂಕ್ ಎನ್ನುವುದನ್ನು ಆಯ್ಕೆ ಮಾಡಿ
ಪ್ಯಾನ್‌ಕಾರ್ಡ್, ಮತದಾರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಅಥವಾ ಹುಟ್ಟಿದ ದಿನಾಂಕ ನಮೂದಿಸಿ
ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಿ ಹುಟುಕಾಟ ನಡೆಸಿ. ನಿಮ್ಮ ಅಥವಾ ನಿಮ್ಮವರ ಹಣ ಇದ್ದರೆ ಆ ಮಾಹಿತಿ ಸಿಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.