ADVERTISEMENT

ಬಂಡವಾಳ ಮಾರುಕಟ್ಟೆ: ಮ್ಯೂಚುವಲ್ ಫಂಡ್‌: ಪದಬಳಕೆ ಪರಿಚಯ

ಅವಿನಾಶ್ ಕೆ.ಟಿ
Published 30 ಜನವರಿ 2022, 19:45 IST
Last Updated 30 ಜನವರಿ 2022, 19:45 IST
ಅವಿನಾಶ್ ಕೆ.ಟಿ.
ಅವಿನಾಶ್ ಕೆ.ಟಿ.   

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಪದಗಳ ಪರಿಚಯ ಬಹಳ ಮುಖ್ಯ. ಎಸ್ಐಪಿ, ಆ್ಯಕ್ಟಿವ್ ಫಂಡ್, ಪ್ಯಾಸಿವ್ಫಂಡ್, ಡೈರೆಕ್ಟ್ ಮ್ಯೂಚುವಲ್ ಫಂಡ್, ರೆಗ್ಯೂಲರ್ ಮ್ಯೂಚುವಲ್ ಫಂಡ್, ವೆಚ್ಚ ಅನುಪಾತ ಹೀಗೆ ಹಲವು ಪಾರಿಭಾಷಿಕ ಪದಗಳು ಮ್ಯೂಚುವಲ್ ಫಂಡ್‌ಗಳಲ್ಲಿ ಇರುತ್ತವೆ. ಅವನ್ನು ಸರಿಯಾಗಿ ಅರ್ಥೈಸಿಕೊಂಡಾಗ ಮಾತ್ರ ಮ್ಯೂಚುವಲ್ ಫಂಡ್ಹೂಡಿಕೆಯ ಹಾದಿ ಸುಗಮವಾಗುತ್ತದೆ.

1) ಎಸ್‌ಐಪಿ: ಹೂಡಿಕೆ ವಲಯದಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಪದ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ಅರ್ಥಾತ್ ‘ಎಸ್‌ಐಪಿ’. ಕ್ರಮಬದ್ಧವಾಗಿ ಹೂಡಿಕೆ ಮಾಡಬೇಕು ಎನ್ನುವವರಿಗೆ ‘ಎಸ್‌ಐಪಿ’ ವಿಧಾನ ಒಳ್ಳೆಯ ಆಯ್ಕೆ. ಕನ್ನಡದಲ್ಲಿ ‘ಎಸ್‌ಐಪಿ’ಯನ್ನು ವ್ಯವಸ್ಥಿತ ಹೂಡಿಕೆ ಯೋಜನೆ ಎನ್ನಬಹುದು. ‘ಎಸ್‌ಐಪಿ’ ಎನ್ನುವುದು ಹೂಡಿಕೆ ಉತ್ಪನ್ನವಲ್ಲ, ಅದು ಹೂಡಿಕೆಯ ವಿಧಾನ. ಪೂರ್ವನಿಗದಿತ ದಿನದಂದು, ಪೂರ್ವನಿಗದಿತ ಮೊತ್ತವನ್ನು ಹೂಡಿಕೆ ಉತ್ಪನ್ನವೊಂದಕ್ಕೆ ವ್ಯವಸ್ಥಿತವಾಗಿ ವರ್ಗಾಯಿಸುವ ವಿಧಾನವೇ ‘ಎಸ್ಐಪಿ’. ಮ್ಯೂಚುವಲ್ ಫಂಡ್ ಹೂಡಿಕೆಗಳಲ್ಲಿ ಎಸ್‌ಐಪಿ ವಿಧಾನ ಹೆಚ್ಚು ಚಾಲ್ತಿಯಲ್ಲಿದೆ. ಉದಾಹರಣೆಗೆ, ಮ್ಯೂಚುವಲ್ ಫಂಡ್ ಒಂದರಲ್ಲಿ ಪ್ರತಿ ತಿಂಗಳ 10ನೆಯ ತಾರೀಕಿನಂದು ನೀವು ₹ 1,000 ಹೂಡಿಕೆ ಮಾಡಲು ನಿರ್ಧರಿಸಿದ್ದರೆ ಪ್ರತಿ ತಿಂಗಳು ಅದನ್ನು ನಿಯಮಿತವಾಗಿ ಮುಂದುವರಿಸಿಕೊಂಡು ಹೋಗುವ ಪ್ರಕ್ರಿಯೆಯನ್ನು ಎಸ್‌ಐಪಿ ಎನ್ನಬಹುದು.

2) ಆ್ಯಕ್ಟಿವ್ ಫಂಡ್: ಮಾರುಕಟ್ಟೆಯ ಏರಿಳಿತ ಆಧರಿಸಿ ಹೆಚ್ಚು ಲಾಭ ಬರುವಂತೆ ಮ್ಯೂಚುವಲ್ ಫಂಡ್ ಹೂಡಿಕೆ ಮೊತ್ತವನ್ನು ನಿಭಾಯಿಸುವ ಪ್ರಕ್ರಿಯೆಗೆ ಆ್ಯಕ್ಟಿವ್ ಮ್ಯೂಚುವಲ್ ಫಂಡ್ ಎಂದು ಕರೆಯಬಹುದು. ಆ್ಯಕ್ಟಿವ್ ಫಂಡ್‌ನಲ್ಲಿ ಫಂಡ್ ಮ್ಯಾನೇಜರ್ ಇರುತ್ತಾರೆ. ಷೇರು ಮಾರುಕಟ್ಟೆಯಲ್ಲಿರುವ ಸಾವಿರಾರು ಕಂಪನಿಗಳ ಪೈಕಿ ಲಾಭ ಕೊಡಬಹುದಾದ ಷೇರುಗಳು ಯಾವುವು ಎಂದು ಅಧ್ಯಯನ ಮಾಡಿ ಅವುಗಳಲ್ಲಿ ಹೂಡಿಕೆದಾರರ ಮೊತ್ತವನ್ನು ತೊಡಗಿಸುವ ಹೊಣೆಗಾರಿಕೆ ಫಂಡ್ ಮ್ಯಾನೇಜರ್‌ನದ್ದಾಗಿರುತ್ತದೆ.

ADVERTISEMENT

3) ಪ್ಯಾಸಿವ್ ಫಂಡ್: ಪ್ಯಾಸಿವ್ ಫಂಡ್‌ಗಳಲ್ಲಿ, ಯಾವ ಷೇರಿನಲ್ಲಿ ಹೂಡಿಕೆ ಮಾಡಬೇಕು, ಯಾವುದರಲ್ಲಿ ಹೂಡಿಕೆ ಮಾಡಬಾರದು ಎನ್ನುವ ನಿರ್ಧಾರವನ್ನು ಫಂಡ್ ಮ್ಯಾನೇಜರ್ ತೆಗೆದುಕೊಳ್ಳುವುದಿಲ್ಲ. ಸೂಚ್ಯಂಕದ ಭಾಗವಾಗಿರುವ ಕಂಪನಿಗಳ ಷೇರುಗಳಲ್ಲಿಯೇ ಹಣವನ್ನು ತೊಡಗಿಸಲಾಗುತ್ತದೆ. ಉದಾಹರಣೆಗೆ, ನಿಫ್ಟಿ ಮತ್ತು ಸೆನ್ಸೆಕ್ಸ್ ಪಟ್ಟಿಯಲ್ಲಿರುವ ಕಂಪನಿಗಳೇ ಪ್ಯಾಸಿವ್ ಫಂಡ್‌ ಹೂಡಿಕೆಯ ಪಟ್ಟಿಯಲ್ಲಿಯೂಇರುತ್ತವೆ. ಇಂಡೆಕ್ಸ್ ಫಂಡ್, ಪ್ಯಾಸಿವ್ ಫಂಡ್‌ಗೆ ಉತ್ತಮ ಉದಾಹರಣೆ.

4) ಡೈರೆಕ್ಟ್ ಮ್ಯೂಚುವಲ್ ಫಂಡ್: ಮಧ್ಯವರ್ತಿಯ (ಏಜೆಂಟ್) ಸಹಾಯವಿಲ್ಲದೆ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳ ಮೂಲಕ ನೇರವಾಗಿ ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿದರೆ ಅದು ಡೈರೆಕ್ಟ್ ಮ್ಯೂಚುವಲ್ ಫಂಡ್. ಮಧ್ಯವರ್ತಿಯ ಕಮಿಷನ್ ಇಲ್ಲದ ಕಾರಣ ಈ ರೀತಿಯ ಫಂಡ್‌ನಲ್ಲಿ ವೆಚ್ಚ ಅನುಪಾತ (Expense Ratio), ಅಂದರೆ ನಿರ್ವಹಣಾ ಶುಲ್ಕ, ಕಡಿಮೆ. ಜಿರೋದಾ, ಗ್ರೋ, ಪೇಟಿಎಂ ಮನಿ ಸೇರಿ ಹಲವು ಕಂಪನಿಗಳು ತಮ್ಮ ಆ್ಯಪ್‌ ಮೂಲಕವೇ ಡೈರೆಕ್ಟ್ ಮ್ಯೂಚುವಲ್ಫಂಡ್ ಹೂಡಿಕೆಗೆ ಅವಕಾಶ ಕಲ್ಪಿಸಿವೆ. ನೇರವಾಗಿ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳ ವೆಬ್‌ಸೈಟ್ ಮೂಲಕವೂ ಡೈರೆಕ್ಟ್ ಮ್ಯೂಚುವಲ್ ಫಂಡ್ ಹೂಡಿಕೆ ಸಾಧ್ಯ.

5) ರೆಗ್ಯೂಲರ್ ಮ್ಯೂಚುವಲ್ ಫಂಡ್: ಮಧ್ಯವರ್ತಿಯ ಸಹಾಯದಿಂದ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಅದು ರೆಗ್ಯೂಲರ್ ಮ್ಯೂಚುವಲ್ ಫಂಡ್. ಇಲ್ಲಿ ಹಣಕಾಸು ಸಲಹೆಗಾರರು/ಬ್ಯಾಂಕಿನ ರಿಲೇಷನ್‌ಶಿಪ್ಮ್ಯಾನೇಜರ್‌ಗಳು ಗ್ರಾಹಕರಿಗೆ ಮ್ಯೂಚುವಲ್ ಫಂಡ್ ಹೂಡಿಕೆ ಸಲಹೆ ನೀಡುತ್ತಾರೆ. ಅದಕ್ಕಾಗಿ ಅವರಿಗೆ ಕಮಿಷನ್ನೀಡಬೇಕಾಗುತ್ತದೆ. ಈ ಕಾರಣದಿಂದಾಗಿ ರೆಗ್ಯೂಲರ್ ಪ್ಲಾನ್‌ನಲ್ಲಿ ವೆಚ್ಚ ಅನುಪಾತ (Expense Ratio) ಶುಲ್ಕ ಹೆಚ್ಚಿಗೆ ಇರುತ್ತದೆ.

6) ವೆಚ್ಚ ಅನುಪಾತ (Expense Ratio): ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದಾಗ ಫಂಡ್ ಹೌಸ್‌ಗಳು ವಾರ್ಷಿಕ ಶುಲ್ಕ ಪಡೆಯುತ್ತವೆ. ಈ ಶುಲ್ಕವನ್ನು ಮ್ಯೂಚುವಲ್ ಫಂಡ್ ಪರಿಭಾಷೆಯಲ್ಲಿ ವೆಚ್ಚ ಅನುಪಾತ (Expense Ratio) ಎಂದು ಕರೆಯಲಾಗುತ್ತದೆ. ಎಲ್ಲ ರೀತಿಯ ನಿರ್ವಹಣಾ ಶುಲ್ಕವನ್ನು ಇದು ಒಳಗೊಂಡಿರುತ್ತದೆ. ಉದಾಹರಣೆಗೆ, ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳ ವೆಚ್ಚ ಅನುಪಾತ ಶೇಕಡ 0.36ರಿಂದ ಶೇ 1.51ರವರೆಗೂ ಇರುತ್ತದೆ. ವೆಚ್ಚ ಅನುಪಾತ ಕಡಿಮೆಯಿದ್ದರೆ ನಿಮಗೆ ಸಿಗುವ ಒಟ್ಟಾರೆ ಲಾಭಾಂಶ ಹೆಚ್ಚಾಗುತ್ತದೆ. ಹಾಗಾಗಿ ಕಡಿಮೆ ವೆಚ್ಚ ಅನುಪಾತವಿರುವ ಮತ್ತು ಸ್ಥಿರವಾಗಿ ಹೆಚ್ಚು ಲಾಭಾಂಶ ನೀಡುವ ಡೈರೆಕ್ಟ್ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ಉತ್ತಮ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹ ವಿಭಾಗದ ಮುಖ್ಯಸ್ಥ)

***

ಸತತ ಎರಡನೇ ವಾರವೂ ಕುಸಿತ ಕಂಡ ಷೇರುಪೇಟೆ

ಮಾರಾಟದ ಒತ್ತಡಕ್ಕೆ ಸಿಲುಕಿ ಸತತ ಎರಡನೇ ವಾರವೂ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿವೆ. ಜನವರಿ 28ರಂದು ಕೊನೆಗೊಂಡ ವಾರದಲ್ಲಿ 57,200 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 3.11ರಷ್ಟು ಕುಸಿದಿದೆ. 17,101 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 2.92ರಷ್ಟು ತಗ್ಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಮಾರಾಟ, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ನಕಾರಾತ್ಮಕತೆ ಮತ್ತು ಉಕ್ರೇನ್ ಬಿಕ್ಕಟ್ಟು ಸೇರಿ ಹಲವು ಅಂಶಗಳು ಕುಸಿತಕ್ಕೆ ಕಾರಣ.

ವಲಯವಾರು ಪ್ರಗತಿಯಲ್ಲಿ, ನಿಫ್ಟಿ ಐ.ಟಿ. ಸೂಚ್ಯಂಕ ಶೇ 6ರಷ್ಟು ಕುಸಿತ ಕಂಡಿದೆ. ನಿಫ್ಟಿ ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 5ರಷ್ಟು, ಲೋಹ ಸೂಚ್ಯಂಕ ಶೇ 4.4ರಷ್ಟು ತಗ್ಗಿದೆ. ಆದರೆ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 7ರಷ್ಟು ಏರಿಕೆ ಕಂಡಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 22,158.15 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 10,849.40 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 3.4ರಷ್ಟು ಕುಸಿತ ಕಂಡಿದೆ. ಮಿಡ್ ಕ್ಯಾಪ್ ಸೂಚ್ಯಂಕ ಶೇ 3ರಷ್ಟು ತಗ್ಗಿದೆ. ಬಿಎಸ್ಇ ಲಾರ್ಜ್‌ ಕ್ಯಾಪ್ ಸೂಚ್ಯಂಕದಲ್ಲಿ ಪ್ರಮುಖವಾಗಿ ಟೆಕ್ ಮಹೀಂದ್ರ, ಇಂಟರ್ ಗ್ಲೋಬ್ ಏವಿಯೇಷನ್, ವಿಪ್ರೊ, ಟೈಟನ್, ಪಿಡಿಲೈಟ್, ಹ್ಯಾವೆಲ್ಸ್ ಇಂಡಿಯಾ ಕುಸಿತ ಕಂಡಿವೆ. ಬ್ಯಾಂಕ್ ಆಫ್ ಬರೋಡಾ, ಸಿಪ್ಲಾ, ಬಂಧನ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ಮತ್ತು ಇಂಡಸ್ ಬ್ಯಾಂಕ್ ಕುಸಿತ ಕಂಡಿವೆ.

ಮುನ್ನೋಟ: ಈ ವಾರ ಟಾಟಾ ಮೋಟರ್ಸ್, ಟಾಟಾ ಸ್ಟೀಲ್, ಟಾಟಾ ಕನ್ಸ್ಯೂಮರ್, ಟೈಟನ್, ಪೇಟಿಂಎಂ, ಐಟಿಸಿ, ಆರತಿ ಡ್ರಗ್ಸ್, ಬಿಪಿಸಿಎಲ್, ಐಒಸಿ, ಆಕ್ರಸಿಲ್, ಅದಾನಿ ಪವರ್, ಅದಾನಿ ಪೋರ್ಟ್ಸ್, ಗೇಲ್, ಜೆಕೆ ಟೈರ್ಸ್, ಎಚ್‌ಡಿಎಫ್‌ಸಿ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಬಜೆಟ್, ಜಾಗತಿಕ ವಿದ್ಯಮಾನಗಳು, ಮುಂಬರುವ ಆರ್‌ಬಿಐ ಹಣಕಾಸು ಸಮಿತಿ ಸಭೆ ಸೇರಿದಂತೆ ಪ್ರಮುಖ ಬೆಳವಣೆಗೆಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.