
ಅವಧಿ ವಿಮೆ (ಟರ್ಮ್ ಇನ್ಶೂರೆನ್ಸ್) ತೆಗೆದುಕೊಳ್ಳುವಾಗ ಬಹುತೇಕರು ಕಂತಿನ ಮೊತ್ತ ಕಡಿಮೆ ಇದೆಯೇ ಎಂಬ ಅಂಶಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಆದರೆ ವಾಸ್ತವದಲ್ಲಿ ಈ ವಿಮೆ ಖರೀದಿಸಬೇಕಾದರೆ ಆದ್ಯತೆ ನೀಡಬೇಕಾಗಿರುವುದು ವಿಮೆಯ ಕವರೇಜ್ ಮೊತ್ತಕ್ಕೆ. ಸರಿಯಾದ ಅನುಕೂಲಗಳಿಲ್ಲದ ಅವಧಿ ವಿಮೆಯಿಂದ ಸಿಗುವುದು ಅರೆಬರೆ ರಕ್ಷಣೆ ಮಾತ್ರ. ಹಾಗಾದರೆ ಅವಧಿ ವಿಮೆ ಖರೀದಿಸುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು, ಯಾವ ರೈಡರ್‌ಗಳಿಗೆ ಒತ್ತು ನೀಡಬೇಕು ಮತ್ತು ಯಾವ ರೈಡರ್‌ನಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದನ್ನೆಲ್ಲ ಅರಿತು ವಿಮೆ ತೆಗೆದುಕೊಳ್ಳುವುದು ಅವಶ್ಯಕ.
ಟರ್ಮಿನಲ್ ಇಲ್ನೆಸ್ ಬೆನಿಫಿಟ್: ವ್ಯಕ್ತಿಯ ಜೀವಕ್ಕೆ 6 ತಿಂಗಳೊಳಗೆ ಅಪಾಯ ಇದೆ ಎಂಬುದು ವೈದ್ಯಕೀಯವಾಗಿ ದೃಢಪಟ್ಟರೆ, ವಿಮಾ ಕಂಪನಿಯು ಪಾಲಿಸಿಯ ಕವರ್ ಮೊತ್ತದ ಒಂದು ಭಾಗವನ್ನು ಮುಂಚಿತವಾಗಿಯೇ ನೀಡುತ್ತದೆ. ಇದರಿಂದ ಚಿಕಿತ್ಸೆ ಅಥವಾ ಅಗತ್ಯ ವೆಚ್ಚಗಳನ್ನು ನಿರ್ವಹಿಸಲು ಸಹಾಯವಾಗುತ್ತದೆ.
ಲೈಫ್-ಸ್ಟೇಜ್ ಬೆನಿಫಿಟ್: ಮದುವೆ, ಮಗುವಿನ ಜನನ, ಅಥವಾ ಗೃಹ ಸಾಲ ತೆಗೆದುಕೊಳ್ಳುವಂತಹ ಪ್ರಮುಖ ಸಂದರ್ಭಗಳಲ್ಲಿ, ಹೊಸ ವೈದ್ಯಕೀಯ ಪರೀಕ್ಷೆ ಇಲ್ಲದೆ ನಿಮ್ಮ ವಿಮೆ ಕವರ್ ಮೊತ್ತವನ್ನು ಹೆಚ್ಚಿಸಿಕೊಳ್ಳುವ ಅವಕಾಶ.
ಆಟೊ-ಕವರ್ ಕಂಟಿನ್ಯೂಯೇಷನ್: ಒಂದು ವೇಳೆ ನೀವು ಕಂತು ಕಟ್ಟುವುದನ್ನು ಮರೆತರೆ ಅಥವಾ ತಡವಾದರೆ, ಹೆಚ್ಚುವರಿ ಅವಧಿಯ ಒಳಗೆ ಸ್ವಲ್ಪ ಸಮಯದವರೆಗೆ ನಿಮ್ಮ ವಿಮಾ ರಕ್ಷಣೆ ಮುಂದುವರಿಯುತ್ತದೆ.
ತಕ್ಷಣವೇ ಪಾವತಿ: ಕೆಲವು ಪಾಲಿಸಿಗಳಲ್ಲಿ, ಸಾವಿನ ವರದಿ ನೀಡಿದ ತಕ್ಷಣವೇ ಕುಟುಂಬದ ತುರ್ತು ಖರ್ಚುಗಳಿಗೆ ಬಳಸಲು ಕ್ಲೇಮ್ ಮೊತ್ತದ ಒಂದು ಭಾಗವನ್ನು ಮುಂಗಡವಾಗಿ ನೀಡುವ ವ್ಯವಸ್ಥೆ ಇರುತ್ತದೆ.
ಜೀರೋ-ಕಾಸ್ಟ್ ಎಕ್ಸಿಟ್: ಕೆಲವು ವಿಶೇಷ ಅವಧಿ ವಿಮೆ ಯೋಜನೆಗಳು ಅಥವಾ ರಿಟರ್ನ್ ಆಫ್ ಪ್ರೀಮಿಯಂ (ಆರ್‌ಒಪಿ) ಪಾಲಿಸಿಗಳಲ್ಲಿ, ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ಪಾಲಿಸಿಯಿಂದ ಹೊರಬಂದಾಗ ನೀವು ಕಟ್ಟಿದ ಕಂತಿನ ಒಂದು ಭಾಗ ಅಥವಾ ಸಂಪೂರ್ಣ ಮೊತ್ತವನ್ನು ವಾಪಸ್ ಪಡೆಯುವ ಅವಕಾಶ ಇರುತ್ತದೆ.
ವೇವರ್ ಆಫ್ ಪ್ರೀಮಿಯಂ ರೈಡರ್ (ಕಂತು ಮನ್ನಾ): ಅಂಗವೈಕಲ್ಯ ಅಥವಾ ಗಂಭೀರ ಕಾಯಿಲೆ ಉಂಟಾದರೆ, ಮುಂದಿನ ಕಂತುಗಳನ್ನು ಕಟ್ಟುವ ಅಗತ್ಯವಿರುವುದಿಲ್ಲ. ಪಾಲಿಸಿ ಮುಂದುವರಿಯುತ್ತದೆ ಮತ್ತು ಕಂತಿನ ಹೊಣೆಯನ್ನು ಕಂಪನಿಯೇ ವಹಿಸಿಕೊಳ್ಳುತ್ತದೆ.
ಗಂಭೀರ ಕಾಯಿಲೆಗಳು ಬಂದಾಗ: ಕ್ಯಾನ್ಸರ್, ಹೃದಯಾಘಾತ, ಕಿಡ್ನಿ ವೈಫಲ್ಯ ಮೊದಲಾದ ಗಂಭೀರ ಕಾಯಿಲೆಗಳು ಪತ್ತೆಯಾದಾಗ, ಚಿಕಿತ್ಸೆಗಾಗಿ ಒಟ್ಟಾರೆ ಒಂದು ನಿಗದಿತ ಮೊತ್ತದ ಹಣ ಸಿಗುತ್ತದೆ.
ಶಾಶ್ವತ ಅಂಗವೈಕಲ್ಯ: ಅಪಘಾತದಿಂದ ಶಾಶ್ವತ ಅಂಗವೈಕಲ್ಯ ಉಂಟಾಗಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ, ಆದಾಯದ ರಕ್ಷಣೆ ಅಥವಾ ಪರಿಹಾರವನ್ನು ಒದಗಿಸುತ್ತದೆ. ಅಪಘಾತದಿಂದ ಮರಣದ ರೈಡರ್ ಇದ್ದರೆ ಒಳ್ಳೆಯದು. ಆದರೆ ನೆನಪಿಡಿ — ನಿಮ್ಮ ಮೂಲ ಅವಧಿ ವಿಮೆ ಯೋಜನೆಯಲ್ಲೇ ಅಪಘಾತದಿಂದಾಗುವ ಸಾವು ಕವರ್ ಆಗಿರುತ್ತದೆ. ಈ ರೈಡರ್ ಹೆಚ್ಚುವರಿ ಮೊತ್ತವನ್ನು ಮಾತ್ರ ನೀಡುತ್ತದೆ.
ಕ್ಲೇಮ್ ಇಂಟಿಮೇಶನ್: ವಿಮಾ ಕಂಪನಿಗೆ ಸಾವಿನ ಬಗ್ಗೆ ಮಾಹಿತಿ ನೀಡುವುದು
ದಾಖಲೆಗಳ ಸಲ್ಲಿಕೆ: ಮರಣ ಪ್ರಮಾಣ ಪತ್ರ ಮತ್ತು ಅಗತ್ಯ ದಾಖಲೆಗಳನ್ನು ಒದಗಿಸುವುದು
ಪರಿಶೀಲನೆ ಮತ್ತು ಪಾವತಿ: ಕಂಪನಿ ದಾಖಲೆಗಳ ಪರಿಶೀಲನೆ ನಡೆಸಿ, ಕ್ಲೇಮ್ ಮೊತ್ತವನ್ನು ಪಾವತಿಸುತ್ತದೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ನಿಯಮಗಳ ಪ್ರಕಾರ, ಸಾಮಾನ್ಯ ಕ್ಲೇಮ್‌ಗಳು 30 ದಿನದ ಒಳಗೆ ಇತ್ಯರ್ಥವಾಗಬೇಕು. ತನಿಖೆಯ ಅಗತ್ಯವಿರುವ ಕ್ಲೇಮ್‌ಗಳಿಗೆ ಗರಿಷ್ಠ 120 ದಿನದವರೆಗೆ ಸಮಯ ತೆಗೆದುಕೊಳ್ಳಬಹುದು.
ನೆನಪಿಡಿ: ಅವಧಿ ವಿಮೆ ಒಂದು ಹೂಡಿಕೆ ಅಲ್ಲ. ಇದು ತೆರಿಗೆ ಉಳಿಸುವ ಉಪಾಯವೂ ಅಲ್ಲ. ಇದೊಂದು ವಾಗ್ದಾನ. ಒಂದು ವೇಳೆ ನೀವು ಇಲ್ಲದಿದ್ದರೂ, ನಿಮ್ಮ ಕುಟುಂಬದ ಜೀವನ ಆರ್ಥಿಕವಾಗಿ ಕುಸಿದು ಬೀಳದಂತೆ ನೋಡಿಕೊಳ್ಳುವ ಭರವಸೆ.
ನಿಮಗೆ ಬೇಕಾದಕ್ಕಿಂತ ಕಡಿಮೆ ಮೊತ್ತದ ವಿಮೆ ಮಾಡುವುದು
ಪಾಲಿಸಿಯ ಅವಧಿಯನ್ನು ತುಂಬಾ ಕಡಿಮೆ ಇಟ್ಟುಕೊಳ್ಳುವುದು
ಧೂಮಪಾನ ಅಥವಾ ಹಳೆಯ ಕಾಯಿಲೆಗಳ ಬಗ್ಗೆ ಮಾಹಿತಿ ಮುಚ್ಚಿಡುವುದು
ಉಪಯುಕ್ತ ರೈಡರ್‌ಗಳನ್ನು ನಿರ್ಲಕ್ಷಿಸುವುದು
ಕಂತು ಕಡಿಮೆ ಇದೆ ಎಂಬ ಒಂದೇ ಕಾರಣಕ್ಕೆ ಪಾಲಿಸಿ ಆಯ್ಕೆ ಮಾಡುವುದು
ಪಾಲಿಸಿ ತೆಗೆದುಕೊಳ್ಳುವುದನ್ನು ಅನಾವಶ್ಯಕವಾಗಿ ಮುಂದೂಡುವುದು
ಜೀವನದಲ್ಲಿ ದೊಡ್ಡ ಬದಲಾವಣೆಗಳಾದಾಗ ಕವರ್ ಮೊತ್ತವನ್ನು ಮರುಪರಿಶೀಲಿಸದೇ ಇರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.